
ಮಹಿಳೆಯರ ಆರೋಗ್ಯವು ವಿವಿಧ ಸಂಕೀರ್ಣ ಹಾರ್ಮೋನುಗಳನ್ನು ಆಧರಿಸಿದೆ. ಇಂತಹ ಸ್ತ್ರೀ ಹಾರ್ಮೋನುಗಳಲ್ಲಿ ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಪ್ರೊಲ್ಯಾಕ್ಟಿನ್ ಪ್ರಮುಖವಾದ ಹಾರ್ಮೋನುಗಳಾಗಿವೆ.
ಈ ಹಾರ್ಮೋನುಗಳು ಋತು ಚಕ್ರ, ಗರ್ಭಧಾರಣೆ, ಹಾಲುಣಿಸುವಿಕೆ, ಮನಸ್ಥಿತಿ ನಿಯಂತ್ರಣ ಮತ್ತು ಮೂಳೆಗಳ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಕಾರ್ಯಗಳು, ಅಸಮತೋಲನದ ಪರಿಣಾಮಗಳು ಮತ್ತು ಈ ಹಾರ್ಮೋನುಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ.
ಈಸ್ಟ್ರೋಜೆನ್
ಈಸ್ಟ್ರೋಜೆನ್ ಹಾರ್ಮೋನು ಅಂಡಾಶಯಗಳಲ್ಲಿ, ಸ್ವಲ್ಪ ಮಟ್ಟಿಗೆ ಕೊಬ್ಬಿನ ಅಂಗಾಂಶಗಳು ಮತ್ತು ಮೂತ್ರಜನಕಾಂಗ ಗ್ರಂಥಿಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಸ್ತನಗಳು ಮತ್ತು ಅಗಲವಾದ ಸೊಂಟಗಳಂತಹ ಮಾಧ್ಯಮಿಕ ಸ್ತ್ರೀ ಲೈಂಗಿಕ ಗುಣಲಕ್ಷಣಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ ಮತ್ತು ಯೋನಿ ಭಿತ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಮೂಳೆಗಳ ಸಾಂದ್ರತೆ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತದೆ.
ಈಸ್ಟ್ರೋಜೆನ್ ಮಟ್ಟ ಕಡಿಮೆಯಾದಾಗ ಅಥವಾ ಅನಿಯಮಿತವಾಗಿದ್ದಾಗ ಋತುಚಕ್ರ, ಮನಸ್ಥಿತಿ ಬದಲಾವಣೆಗಳು, ನಿದ್ರಾ ಭಂಗ ಮತ್ತು ಯೋನಿ ಶುಷ್ಕತೆ ಉಂಟಾಗಬಹುದು. ಕ್ರಮೇಣ ಇದರ ಕೊರತೆಯು ಆಸ್ಟಿಯೊಪೊರೋಸಿಸ್, ಹೃದಯದ ಕಾಯಿಲೆಗಳು ಮತ್ತು ಮೂತ್ರನಾಳದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಈಸ್ಟ್ರೋಜೆನ್ ಕೊರತೆಯನ್ನು ಹೆಚ್ಚಾಗಿ ಹಾರ್ಮೋನ್ ಬದಲಿ ಚಿಕಿತ್ಸೆಯೊಂದಿಗೆ ಪರಿಹರಿಸಲಾಗುತ್ತದೆ. ವಿಶೇಷವಾಗಿ ಋತುಬಂಧಕ್ಕೊಳಗಾದ ಮಹಿಳೆಯರಿಗೆ ಈ ಪರಿಹಾರ ಸೂಚಿಸಲಾಗುತ್ತದೆ. ರೋಗಲಕ್ಷಣಗಳನ್ನು ಅವಲಂಬಿಸಿ ಈಸ್ಟ್ರೋಜೆನ್ ಕ್ರೀಮುಗಳು, ಪ್ಯಾಚುಗಳು ಅಥವಾ ಮಾತ್ರೆಗಳನ್ನು ಸಹ ಬಳಸಬಹುದು. ಫೈಟೊಈಸ್ಟ್ರೋಜೆನ್ನುಗಳ (ಸೋಯಾ, ಅಗಸೆಬೀಜ ಇತ್ಯಾದಿಗಳಲ್ಲಿ ಕಂಡುಬರುವ ಸಸ್ಯ ಆಧಾರಿತ ಈಸ್ಟ್ರೋಜೆನ್ಗಳು) ಸೌಮ್ಯ ಬಳಕೆಗೆ ಪ್ರಯೋಜನವಾಗಬಹುದು.
ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಫೈಟೊಈಸ್ಟ್ರೋಜೆನ್ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ, ನಿಯಮಿತ ತೂಕ ಹೊರುವ ವ್ಯಾಯಾಮ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಧೂಮಪಾನವನ್ನು ತಪ್ಪಿಸುವುದು ಈಸ್ಟ್ರೊಜೆನ್ ಮಟ್ಟವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರೊಜೆಸ್ಟರಾನ್
ಅಂಡಾಶಯಗಳಿಂದ, ವಿಶೇಷವಾಗಿ ಅಂಡೋತ್ಪತ್ತಿ ನಂತರ ಮತ್ತು ಗರ್ಭಾವಸ್ಥೆಯಲ್ಲಿ ಪ್ಲಾಸೆಂಟಾದಿಂದಲೂ ಪ್ರೊಜೆಸ್ಟರಾನ್ ಉತ್ಪತ್ತಿಯಾಗುತ್ತದೆ. ಇದು ಫಲವತ್ತಾದ ಅಂಡದ ಉತ್ಪತ್ತಿಗೆ ಗರ್ಭಾಶಯದ ಒಳಪದರವನ್ನು ಸಿದ್ಧಪಡಿಸುತ್ತದೆ ಮತ್ತು ಆರಂಭಿಕ ಗರ್ಭಧಾರಣೆಯನ್ನು ಬೆಂಬಲಿಸುತ್ತದೆ. ಇದು ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ, ನಿದ್ರೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಪ್ರೊಜೆಸ್ಟರಾನ್ ಕಡಿಮೆಯಾದರೆ ಅಥವಾ ಇದರಿಂದ ಸಮಸ್ಯೆಯಾದರೆ ಬಂಜೆತನ, ಗರ್ಭಪಾತಗಳು, ಅನಿಯಮಿತ ಋತು ಚಕ್ರಗಳು ಮತ್ತು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮಿಗೆ ಕಾರಣವಾಗಬಹುದು. ಮಹಿಳೆಯರು ಮನಸ್ಥಿತಿ ಬದಲಾವಣೆಗಳು, ಆತಂಕ ಮತ್ತು ನಿದ್ರೆ ಮಾಡಲು ಕಷ್ಟವಾಗಬಹುದು.
ಪ್ರೊಜೆಸ್ಟರಾನ್ ಪೂರಕಗಳು ಮಾತ್ರೆಗಳು, ಕ್ರೀಮ್ಗಳು, ಯೋನಿ ಜೆಲ್ಗಳು ಅಥವಾ ಚುಚ್ಚುಮದ್ದಿನ ರೂಪದಲ್ಲಿ ಲಭ್ಯವಿದೆ. ಇವುಗಳನ್ನು ಹೆಚ್ಚಾಗಿ ಫಲವತ್ತತೆ ಚಿಕಿತ್ಸೆಗಳಲ್ಲಿ ಅಥವಾ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಪದೇ ಪದೇ ಗರ್ಭಪಾತವಾಗಿರುವ ಮಹಿಳೆಯರಿಗೆ ನೀಡಲಾಗುತ್ತದೆ.
ಒತ್ತಡವನ್ನು ನಿರ್ವಹಿಸುವುದು (ಇದು ಪ್ರೊಜೆಸ್ಟರಾನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ), ಕ್ಸೆನೋ ಈಸ್ಟ್ರೋಜೆನ್ಗಳಿಗೆ (ಹಾನಿಕಾರಕ ಪರಿಸರ ರಾಸಾಯನಿಕಗಳು) ಒಡ್ಡಿಕೊಳ್ಳುವುದನ್ನು ತಪ್ಪಿಸುವುದು ಮತ್ತು ಆಹಾರ ಮತ್ತು ನಿದ್ರೆಯ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ರೀತಿಯಲ್ಲಿ ಪ್ರೊಜೆಸ್ಟರಾನ್ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಪ್ರೊಲ್ಯಾಕ್ಟಿನ್
ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ಪ್ರೊಲ್ಯಾಕ್ಟಿನ್ ಹಾರ್ಮೋನನ್ನು ಸ್ರವಿಸುತ್ತದೆ. ಹೆರಿಗೆಯ ನಂತರ ಸ್ತನಗಳ ಬೆಳವಣಿಗೆ ಮತ್ತು ಹಾಲು ಉತ್ಪಾದನೆಗೆ ಇದು ಅತ್ಯಗತ್ಯ. ರೋಗನಿರೋಧಕ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿಯೂ ಪ್ರೊಲ್ಯಾಕ್ಟಿನ್ ಪಾತ್ರವಹಿಸುತ್ತದೆ.
ಗರ್ಭಾವಸ್ಥೆಯಲ್ಲಿ ಮತ್ತು ನಂತರ ಪ್ರೊಲ್ಯಾಕ್ಟಿನ್ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಗರ್ಭಿಣಿಯರಲ್ಲದ ಮಹಿಳೆಯರಲ್ಲಿ ಹೆಚ್ಚಿನ ಮಟ್ಟಗಳು ಅನಿಯಮಿತ ಮುಟ್ಟು, ಬಂಜೆತನ ಮತ್ತು ಸ್ತನಗಳಿಂದ ಹಾಲು ವಿಸರ್ಜನೆಗೆ ಕಾರಣವಾಗಬಹುದು (ಗ್ಯಾಲಕ್ಟೋರಿಯಾ). ಮಹಿಳೆಯರಲ್ಲಿ ಪ್ರೊಲ್ಯಾಕ್ಟಿನ್ ಕಡಿಮೆ ಇರುವುದು ಅಪರೂಪ. ಇದರ ಮಟ್ಟ ಕಡಿಮೆ ಇದ್ದರೆ ಅದು ಮಕ್ಕಳಿಗೆ ಹಾಲುಣಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಪ್ರೊಲ್ಯಾಕ್ಟಿನ್ ಕಡಿಮೆ ಇದ್ದರೆ ಎದೆಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ.
ಕೆಲವೊಮ್ಮೆ ಪ್ರೊಲ್ಯಾಕ್ಟಿನ್ ಹೆಚ್ಚಾಗಿ ಉತ್ಪಾದನೆಯಾದರೆ ಅದನ್ನು ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಈ ಹಾರ್ಮೋನಿನ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು, ಒತ್ತಡವನ್ನು ನಿರ್ವಹಿಸುವುದು ಮತ್ತು ಥೈರಾಯ್ಡ್ ಸಮಸ್ಯೆಗಳ ಕಾರಣಗಳಿಗೆ ಚಿಕಿತ್ಸೆ ನೀಡುವುದರಿಂದ ಅಸಹಜ ಪ್ರೊಲ್ಯಾಕ್ಟಿನ್ ಮಟ್ಟವನ್ನು ತಡೆಯಬಹುದು.
ಹಾರ್ಮೋನುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು
ಧಾನ್ಯಗಳು, ಬೇಳೆಕಾಳುಗಳು, ಕಡಿಮೆ ಕೊಬ್ಬಿರುವ ಆಹಾರ, ಪ್ರೋಟೀನುಯುಕ್ತ ಆಹಾರ, ತಾಜಾ ಹಣ್ಣುಗಳು, ಹಸಿರು ಸೊಪ್ಪುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು.
ನಿಯಮಿತವಾಗಿ ಬಿರುಸು ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ಆದರೆ ಅತಿಯಾಗಿ ವ್ಯಾಯಾಮ ಮಾಡಬಾರದು. ಇದು ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸಬಹುದು.
ದೇಹದ ನೈಸರ್ಗಿಕ ಲಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು.
ಯೋಗ, ಧ್ಯಾನ ಅಥವಾ ಉತ್ತಮ ಹವ್ಯಾಸಗಳ ಮೂಲಕ ಒತ್ತಡವನ್ನು ನಿರ್ವಹಿಸಬೇಕು.
ಹೆಚ್ಚು ಕಾಫಿ, ಟೀ ಮತ್ತು ಮದ್ಯಪಾನ/ಧೂಮಪಾನ ಮಾಡಬಾರದು.
ಹಾರ್ಮೋನ್ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಈಸ್ಟ್ರೋಜೆನ್, ಪ್ರೊಜೆಸ್ಟರಾನ್ ಮತ್ತು ಪ್ರೊಲ್ಯಾಕ್ಟಿನ್ ಮಹಿಳೆಯರ ಸಂತಾನೋತ್ಪತ್ತಿ ಮತ್ತು ಸಮಗ್ರ ಆರೋಗ್ಯಕ್ಕೆ ಅತ್ಯಗತ್ಯ. ವಿಶೇಷವಾಗಿ ಪ್ರೌಢಾವಸ್ಥೆ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಅಸಮತೋಲನವು ಸಾಮಾನ್ಯವಾಗಿದ್ದರೂ, ಆರೋಗ್ಯಕರ ಜೀವನಶೈಲಿ, ಆರಂಭಿಕ ಪತ್ತೆ ಮತ್ತು ವೈದ್ಯಕೀಯ ಮಾರ್ಗದರ್ಶನದಿಂದ ಅವುಗಳನ್ನು ಸೂಕ್ತವಾಗಿ ನಿರ್ವಹಿಸಬಹುದು ಅಥವಾ ತಡೆಯಬಹುದು.
Advertisement