

ಪ್ರತಿ ವರ್ಷ ಆಗಸ್ಟ್ ಒಂದನೇ ತಾರೀಖಿನಿಂದ ಏಳನೇ ತಾರೀಖಿನರವರೆಗೆ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ತಾಯಿಯ ಎದೆಹಾಲಿನ ಮಹತ್ವ, ಶಿಶು ಮತ್ತು ತಾಯಿಯ ಆರೋಗ್ಯದಲ್ಲಿ ಅದರ ಪಾತ್ರ ಹಾಗೂ ಸ್ತನ್ಯಪಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಪ್ತಾಹವನ್ನು ಆಚರಿಸಲಾಗುತ್ತದೆ.
ಈ ಸಪ್ತಾಹವನ್ನು ಮೊದಲ ಬಾರಿಗೆ 1992ರಲ್ಲಿ ಆರಂಭಿಸಲಾಯಿತು. ವಿಶ್ವ ಸ್ತನ್ಯಪಾನ ಕ್ರಿಯಾ ಒಕ್ಕೂಟ ಈ ಸಪ್ತಾಹದ ಆರಂಭಕ್ಕೆ ಮುಂದಾಳತ್ವ ವಹಿಸಿತು. ನಂತರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡುತ್ತಿವೆ. 1990ರಲ್ಲಿ ಇಟಲಿಯ ಫ್ಲಾರೆನ್ಸ್ನಲ್ಲಿ ಅಂಗೀಕರಿಸಲಾದ ಇನ್ನೊಸೆಂಟಿ ಘೋಷಣೆ ನಂತರ ಜಾಗತಿಕ ಮಟ್ಟದಲ್ಲಿ ಸ್ತನ್ಯಪಾನವನ್ನು ಉತ್ತೇಜಿಸುವ ಚಳವಳಿಯ ಭಾಗವಾಗಿ ಈ ಸಪ್ತಾಹ ರೂಪುಗೊಂಡಿತು.
ಇನ್ನೊಸೆಂಟಿ ಘೋಷಣೆ ಇಟಲಿಯ ಫ್ಲಾರೆನ್ಸ್ನಲ್ಲಿರುವ 'ಸ್ಪೆಡೇಲ್ ಡಿಗ್ಲಿ ಇನ್ಸೊಸೆಂಟಿ' ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಜಂಟಿಯಾಗಿ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸ್ತನ್ಯಪಾನದ ರಕ್ಷಣೆ, ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಜಾಗತಿಕ ಮಟ್ಟದಲ್ಲಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸುವ ಉದ್ದೇಶದಿಂದ ಅಂಗೀಕರಿಸಲ್ಪಟ್ಟ ಐತಿಹಾಸಿಕ ಘೋಷಣೆಯಾಗಿದೆ.
ಆಗ ತಾನೇ ಹುಟ್ಟಿದ ಮಗುವಿಗೆ ದೊರೆಯುವ ಮೊದಲ ಆಹಾರ ತಾಯಿಯ ಎದೆಹಾಲು. ಇದು ಕೇವಲ ಆಹಾರವಲ್ಲ, ಮಗುವಿಗೆ ಸಿಗುವ ಮೊದಲ ರೋಗನಿರೋಧಕ ರಕ್ಷಣೆಯಾಗಿದೆ. ಜನನದ ನಂತರ ಮೊದಲ ಕೆಲವು ದಿನಗಳಲ್ಲಿ ಬರುವ ಹಳದಿ ಬಣ್ಣದ ದಪ್ಪ ಹಾಲನ್ನು ಕೊಲೊಸ್ಟ್ರಮ್ ಎಂದು ಕರೆಯಲಾಗುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರತಿಕಾಯಗಳು, ಪ್ರೋಟೀನ್‌ಗಳು ಮತ್ತು ಪೋಷಕಾಂಶಗಳು ಹೇರಳವಾಗಿರುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಗುವಿಗೆ ಹುಟ್ಟಿದ ಮೊದಲ ಒಂದು ಗಂಟೆಯೊಳಗೆ ಎದೆಹಾಲುಣಿಸುವುದು ಅತ್ಯಂತ ಮುಖ್ಯ. ಮೊದಲ ಆರು ತಿಂಗಳು ನೀರು ಸೇರಿದಂತೆ ಬೇರೆ ಯಾವುದೇ ಆಹಾರವಿಲ್ಲದೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರ ಆರಂಭಿಸಿದರೂ, ಎರಡು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಎದೆಹಾಲುಣಿಸುವುದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅನುಕೂಲಕರ.
ತಾಯಿಯ ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಇರುತ್ತವೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಮಗುವಿಗೆ ಹೊಟ್ಟೆನೋವು, ಅತಿಸಾರ, ನ್ಯುಮೋನಿಯಾ, ಕಿವಿಯ ಸೋಂಕು ಸೇರಿದಂತೆ ಅನೇಕ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಎದೆಹಾಲು ಕುಡಿದ ಮಕ್ಕಳಲ್ಲಿ ಅಲರ್ಜಿ, ಸ್ಥೂಲಕಾಯ, ಮಧುಮೇಹ ಹಾಗೂ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ಮೆದುಳಿನ ಬೆಳವಣಿಗೆ ಉತ್ತಮವಾಗಲು ಸಹಕಾರಿ.
ಸ್ತನ್ಯಪಾನವು ಕೇವಲ ಮಗುವಿನ ಹಸಿವು ನೀಗಿಸುವ ಪ್ರಕ್ರಿಯೆಯಲ್ಲ. ತಾಯಿ ಮಗುವನ್ನು ಹತ್ತಿರ ಹಿಡಿದು ಹಾಲುಣಿಸುವಾಗ ಇಬ್ಬರ ನಡುವೆ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ. ಈ ವೇಳೆ ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗಿ ತಾಯಿಯಲ್ಲಿ ಪ್ರೀತಿ, ನೆಮ್ಮದಿ ಹಾಗೂ ಆತ್ಮೀಯತೆಯ ಭಾವನೆ ಹೆಚ್ಚುತ್ತದೆ. ಇದು ಹೆರಿಗೆಯ ನಂತರ ತಾಯಿಯ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ.
"ಸಿಸೇರಿಯನ್ ಹೆರಿಗೆಯಾದರೆ ತಕ್ಷಣ ಹಾಲು ಬರದು" ಎಂಬುದು ಸಾಮಾನ್ಯವಾಗಿ ಕೇಳಿಬರುವ ತಪ್ಪು ಕಲ್ಪನೆ. ವಾಸ್ತವದಲ್ಲಿ ಸಿಸೇರಿಯನ್ ಹೆರಿಗೆಯಾದ ತಾಯಿಯೂ ವೈದ್ಯರು ಹೇಳಿದ ಕೂಡಲೇ ಮಗುವಿಗೆ ಎದೆಹಾಲುಣಿಸಬಹುದು. ಆರಂಭದಲ್ಲಿ ತಾಯಿಗೆ ನೋವು ಅಥವಾ ಚಲನೆಗೆ ತೊಂದರೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಕುಟುಂಬದವರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನೆರವು ನೀಡಿದರೆ ಸುರಕ್ಷಿತವಾಗಿ ಹಾಲುಣಿಸಬಹುದು.
ಮಗುವಿನ ಬಾಯಿಯನ್ನು ಆಗಾಗ ಸ್ತನದ ತೊಟ್ಟಿಗೆ ತಾಗಿಸಿ ಅದು ಹಾಲನ್ನು ಹೀರುವಂತೆ ಪ್ರಚೋದಿಸಬೇಕು. ಹೀಗೆ ಮಾಡುವುದರಿಂದ ಮಗು ಹಾಲನ್ನು ಕುಡಿಯುತ್ತದೆ ಮತ್ತು ನಂತರ ಇದು ಹಾಲಿನ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ತಡಮಾಡದೆ ಸ್ತನ್ಯಪಾನ ಆರಂಭಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.
ಕೆಲವು ತಾಯಂದಿರಿಗೆ ಆರಂಭದಲ್ಲಿ ಹಾಲು ಕಡಿಮೆ ಬರುತ್ತಿರುವಂತೆ ಅನಿಸಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ತಾತ್ಕಾಲಿಕ ಸಮಸ್ಯೆಯಾಗಿರುತ್ತದೆ. ಮಗುವಿನ ಬಾಯಿಯನ್ನು ಆಗಾಗ ಸ್ತನದ ತೊಟ್ಟಿಗೆ ತಾಗಿಸಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರ ಜೊತೆಗೆ ಮಗು ಹಾಲು ಕುಡಿಯುವಾಗ ಅದು ಸ್ತನದ ತೊಟ್ಟನ್ನು ಸರಿಯಾಗಿ ಚೀಪಿ ಹಾಲನ್ನು ಹೀರುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ವೈದ್ಯರು ಅಥವಾ ತರಬೇತಿ ಪಡೆದ ಸ್ತನ್ಯಪಾನ ಸಲಹೆಗಾರರ ಮಾರ್ಗದರ್ಶನ ಪಡೆಯಬೇಕು. ವೈದ್ಯರ ಸಲಹೆಯಿಲ್ಲದೆ ಕೃತಕ ಹಾಲು ಅಥವಾ ಬಾಟಲಿ ಹಾಲು ಆರಂಭಿಸುವುದು ಸೂಕ್ತವಲ್ಲ. ಕೆಲವೇ ಸಂದರ್ಭಗಳಲ್ಲಿ ವೈದ್ಯಕೀಯ ಕಾರಣಗಳಿಂದ ಪೂರಕ ಆಹಾರದ ಅಗತ್ಯವಿರಬಹುದು.
ಎದೆಹಾಲು ಉತ್ಪಾದನೆಗೆ ಸಮತೋಲಿತ ಆಹಾರವೇ ಮುಖ್ಯ. ವಿಶೇಷವಾಗಿ ಸಾಕಷ್ಟು ನೀರು ಕುಡಿಯುವುದು, ಹಾಲು, ಮೊಸರು, ಬೇಳೆಕಾಳುಗಳು, ಮೊಟ್ಟೆ, ಮೀನು, ಹಸಿರು ಸೊಪ್ಪುಗಳು, ಹಣ್ಣುಗಳು, ಧಾನ್ಯಗಳು ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದು ಒಳಿತು. ಹೀಗಾಗಿ ಪೌಷ್ಟಿಕ ಆಹಾರ, ಸಾಕಷ್ಟು ವಿಶ್ರಾಂತಿ, ಒತ್ತಡ ಕಡಿಮೆ ಇಟ್ಟುಕೊಳ್ಳುವುದು ಮತ್ತು ಮಗುವಿಗೆ ಆಗಾಗ ಹಾಲುಣಿಸುವುದೇ ಅತ್ಯಂತ ಪರಿಣಾಮಕಾರಿ ಕ್ರಮಗಳಾಗಿವೆ.
ಮಗುವಿಗೆ ಹುಟ್ಟಿದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಲು ಪ್ರಯತ್ನಿಸಬೇಕು. ಮಗುವಿಗೆ ಬೇಕಾದಾಗಲೆಲ್ಲ ಹಾಲುಣಿಸಬೇಕು. ತಾಯಂದಿರು ಎದೆ ಹಾಗೂ ಸ್ತನದ ತೊಟ್ಟುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಇಂದಿಗೂ ಸ್ತನ್ಯಪಾನದ ಬಗ್ಗೆ ಹಲವು ತಪ್ಪು ನಂಬಿಕೆಗಳು ಸಮಾಜದಲ್ಲಿವೆ. ಅವುಗಳೆಂದರೆ ಸಣ್ಣ ಸ್ತನ ಇದ್ದರೆ ಹಾಲು ಕಡಿಮೆ ಬರುತ್ತದೆ; ಸಿಸೇರಿಯನ್ ಹೆರಿಗೆಯಾದರೆ ಎದೆಹಾಲು ಕೊಡಬಾರದು; ಮೊದಲ ಹಳದಿ ಹಾಲು ಮಗುವಿಗೆ ಹಾನಿಕಾರಕ; ಬಾಟಲಿ ಹಾಲು ಕೂಡ ಎದೆಹಾಲಿಗೆ ಸಮಾನ; ತಾಯಿಗೆ ಸಣ್ಣ ಜ್ವರ ಅಥವಾ ಸಾಮಾನ್ಯ ಶೀತ ಇದ್ದರೆ ಮಗುವಿಗೆ ಹಾಲುಣಿಸಬಾರದು – ಬಹುತೇಕ ಸಂದರ್ಭಗಳಲ್ಲಿ ಇದು ತಪ್ಪು. ವೈದ್ಯರ ಸಲಹೆಯಂತೆ ಹೆಚ್ಚಿನ ಸಂದರ್ಭಗಳಲ್ಲಿ ಸ್ತನ್ಯಪಾನ ಮುಂದುವರಿಸಬಹುದು.
"ಎದೆಹಾಲುಣಿಸಿದರೆ ಸ್ತನದ ಸೌಂದರ್ಯ ಹಾಳಾಗುತ್ತದೆ" ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಸ್ತನದ ಆಕಾರದಲ್ಲಿ ಬದಲಾವಣೆ ಉಂಟಾಗಲು ಪ್ರಮುಖ ಕಾರಣಗಳು ಗರ್ಭಧಾರಣೆಯ ಸಮಯದ ಹಾರ್ಮೋನುಗಳ ಬದಲಾವಣೆ, ವಯಸ್ಸು, ಆನುವಂಶಿಕತೆ, ದೇಹದ ತೂಕದಲ್ಲಿ ಏರಿಳಿತ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ. ಕೇವಲ ಸ್ತನ್ಯಪಾನದಿಂದಲೇ ಸ್ತನದ ಸೌಂದರ್ಯ ಹಾಳಾಗುವುದಿಲ್ಲ.
ಸ್ತನ್ಯಪಾನವು ಮಗುವಿಗೆ ಮಾತ್ರವಲ್ಲ, ತಾಯಿಗೂ ಆರೋಗ್ಯದಾಯಕ. ಇದು ಗರ್ಭಾಶಯವು ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ. ಹೆರಿಗೆಯ ನಂತರದ ರಕ್ತಸ್ರಾವ ಕಡಿಮೆಯಾಗಲು ಸಹಾಯ ಮಾಡುತ್ತದೆ. ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆರಿಗೆಯ ನಂತರ ದೇಹದ ತೂಕ ನಿಯಂತ್ರಣಕ್ಕೂ ನೆರವಾಗುತ್ತದೆ.
ಕೊನೆಮಾತು: ಒಟ್ಟಾರೆ ಹೇಳುವುದಾದರೆ ತಾಯಿಯ ಎದೆಹಾಲಿಗೆ ಪರ್ಯಾಯವಿಲ್ಲ. ಅದು ಮಗುವಿಗೆ ಅಮೃತ. ಮಗುವಿನ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಅತ್ಯಗತ್ಯವಾದದ್ದು ಎಂಬ ವಿಷಯವನ್ನು ಸಾರುವ ವಿಶ್ವ ಸ್ತನ್ಯಪಾನ ಸಪ್ತಾಹವು ಪ್ರತಿ ವರ್ಷ ಕೇವಲ ಒಂದು ವಾರದ ಆಚರಣೆಯಲ್ಲ; ಪ್ರತಿಯೊಂದು ತಾಯಿ ಮತ್ತು ಮಗುವಿಗೆ ಆರೋಗ್ಯಕರ ಜೀವನದ ಹಕ್ಕನ್ನು ನೆನಪಿಸುವ ಸದಾ ಕಾಲದ ಜಾಗತಿಕ ಅಭಿಯಾನವಾಗಿದೆ.