ಚಲಿಸುತ್ತಿರುವ ಇ-ರಿಕ್ಷಾಗಳನ್ನು ಫೋನ್ ಆ್ಯಪ್ ನಿಲ್ಲಿಸುತ್ತಿರುವುದು ಹೇಗೆ?!

ನೀವು ರಸ್ತೆಯ ಮೇಲೆ ಚಲಿಸುತ್ತಿರುವ ರಿಕ್ಷಾ ಒಂದರಲ್ಲಿ ಕೂತಿರುವಾಗ, ಅದು ರಸ್ತೆಯ ಮಧ್ಯದಲ್ಲೇ ನಿಂತುಬಿಡುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದು ಅತ್ಯಂತ ಅಪಾಯಕಾರಿಯಾಗುವ ಸಾಧ್ಯತೆಗಳಿವೆ.
E-Riskshaw
ಚಲಿಸುತ್ತಿರುವ ಇ-ರಿಕ್ಷಾಗಳನ್ನು ಫೋನ್ ಆ್ಯಪ್ ನಿಲ್ಲಿಸುತ್ತಿರುವುದು ಹೇಗೆ?!
Updated on

ಜುಲೈ 3ರ, ಶುಕ್ರವಾರದಂದು ಕೇಂದ್ರ ಸರ್ಕಾರ ಆ್ಯಪಲ್ ಮತ್ತು ಗೂಗಲ್‌ಗಳಿಗೆ ಕನಿಷ್ಠ ಮೂರು ಆ್ಯಪ್‌ಗಳನ್ನು ಅವುಗಳ ಫೋನ್ ಸ್ಟೋರ್‌ಗಳಿಂದ ತೆಗೆದುಹಾಕಲು ಆದೇಶ ನೀಡಿತು. ಈ ಆ್ಯಪ್‌ಗಳನ್ನು ದುರ್ಬಳಕೆ ಮಾಡಿಕೊಂಡು, ರಸ್ತೆಗಳ ಮೇಲೆ ಚಲಿಸುತ್ತಿದ್ದ ವಿದ್ಯುತ್ ಚಾಲಿತ ರಿಕ್ಷಾಗಳನ್ನು ಸ್ಥಗಿತಗೊಳಿಸಲಾಗುತ್ತಿತ್ತು.

ಈ ಘಟನೆ ಸೈಬರ್ ಭದ್ರತೆಯ ಕುರಿತಂತೆ ಒಂದಷ್ಟು ಗಂಭೀರ ಆತಂಕಗಳನ್ನು ಮೂಡಿಸಿದೆ (ಕಂಪ್ಯೂಟರ್ ಮತ್ತು ಅಂತರ್ಜಾಲ ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳು). ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ವೀಡಿಯೋಗಳು ವೈರಲ್ ಆದಾಗ ಈ ಸಮಸ್ಯೆ ಆರಂಭಗೊಂಡಿತು. ಒಂದಷ್ಟು ಜನರು ತಮ್ಮ ಫೋನ್‌ಗಳನ್ನು ತಮ್ಮ ಸನಿಹದಲ್ಲಿರುವ ಇ ರಿಕ್ಷಾಗಳಿಗೆ ಬ್ಲೂಟೂತ್ ವ್ಯವಸ್ಥೆಯ ಮೂಲಕ ಸಂಪರ್ಕಿಸುತ್ತಿದ್ದರು.

ಒಂದು ಬಾರಿ ಸಂಪರ್ಕ ಏರ್ಪಟ್ಟ ಬಳಿಕ, ಅವರು ವಿದ್ಯುತ್ ಚಾಲಿತ ರಿಕ್ಷಾಗಳ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ (ಬಿಎಂಎಸ್) ಅನ್ನು ಅದು ಚಲಿಸುತ್ತಿರುವಾಗಲೂ ಸ್ಥಗಿತಗೊಳಿಸುತ್ತಿದ್ದರು. ನೀವು ರಸ್ತೆಯ ಮೇಲೆ ಚಲಿಸುತ್ತಿರುವ ರಿಕ್ಷಾ ಒಂದರಲ್ಲಿ ಕೂತಿರುವಾಗ, ಅದು ರಸ್ತೆಯ ಮಧ್ಯದಲ್ಲೇ ನಿಂತುಬಿಡುವುದನ್ನು ಒಮ್ಮೆ ಊಹಿಸಿಕೊಳ್ಳಿ.

ಇದು ಅತ್ಯಂತ ಅಪಾಯಕಾರಿಯಾಗುವ ಸಾಧ್ಯತೆಗಳಿವೆ. ಸರ್ಕಾರ ಬಿಎಟಿ-ಬಿಎಂಎಸ್, ಲಾಸಿಜಿ, ಮತ್ತು ಇಪೊಚ್ ಲಿ-ಅಯಾನ್ ಆ್ಯಪ್‌ಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದೆ. ಇವುಗಳಲ್ಲಿ ಕನಿಷ್ಠ ಎರಡು ಆ್ಯಪ್‌ಗಳು ಚೀನಾ ಮೂಲದವು. ಇಂತಹ ದುರ್ಬಳಕೆ ಸಾವಿರಾರು ಪ್ರಯಾಣಿಕರು ಮತ್ತು ಚಾಲಕರನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಗಳಿರುವುದರಿಂದ, ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿತು.

E-Riskshaw
ಇರಾನ್ ಯುದ್ಧದಲ್ಲಿ ಅನಿರೀಕ್ಷಿತ ಗೆಲುವು ಕಂಡ ಕ್ಯಾಲಿಫೋರ್ನಿಯಾದ ಪಿಸ್ತಾಶಿಯೊ ಕಿಂಗ್ಸ್! (ಜಾಗತಿಕ ಜಗಲಿ)

ಬಿಎಂಎಸ್ ಎಂದರೇನು? ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ ಅಥವಾ ಬಿಎಂಎಸ್ ಎನ್ನುವುದು ವಿದ್ಯುತ್ ಚಾಲಿತ ವಾಹನಗಳ (ಇವಿ) ಒಳಗಿರುವ ಬ್ಯಾಟರಿಗಳಿಗೆ ಒಂದು ರಕ್ಷಕ ಅಥವಾ ಕಾವಲುಗಾರ ಇದ್ದಂತಿರುತ್ತದೆ. ಇದು ಬ್ಯಾಟರಿಯ ಆರೋಗ್ಯದ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿದ್ದು, ಬ್ಯಾಟರಿ ವೋಲ್ಟೇಜ್, ಕರೆಂಟ್, ತಾಪಮಾನ, ಮತ್ತು ಚಾರ್ಜ್ ಮಟ್ಟವನ್ನು ಪರಿಶೀಲಿಸುತ್ತಾ, ಎಲ್ಲ ಸಣ್ಣ ಬ್ಯಾಟರಿ ಸೆಲ್‌ಗಳು ಜೊತೆಯಾಗಿ, ಸಮಾನವಾಗಿ, ಮತ್ತು ಸುರಕ್ಷಿತವಾಗಿ ಕಾರ್ಯಾಚರಿಸುವುದನ್ನು ಖಾತ್ರಿಪಡಿಸುತ್ತದೆ. ಇದು ಸಂಪೂರ್ಣ ಬ್ಯಾಟರಿ ಪ್ಯಾಕ್ ದೀರ್ಘಕಾಲ ಬಾಳಿಕೆ ಬರುವಂತೆ ಮತ್ತು ಯಾವುದೇ ಅಪಘಾತಗಳು ಉಂಟಾಗದಂತೆ ತಡೆಯುತ್ತದೆ. ಬಿಎಂಎಸ್ ಅನ್ನು ಸಾಮಾನ್ಯವಾಗಿ ದೊಡ್ಡ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಬಳಸುವ ವಾಹನಗಳಾದ ಇ ರಿಕ್ಷಾಗಳು, ಕಾರುಗಳು ಮತ್ತು ದೊಡ್ಡ ಬ್ಯಾಟರಿ ಸಂಗ್ರಹಣಾ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಎಲ್‌ಜಿ ಕೆಮ್, ಮತ್ತು ಪ್ಯಾನಸೋನಿಕ್ ಕಂಪನಿಗಳು ಈ ವ್ಯವಸ್ಥೆಗಳನ್ನು ನಿರ್ಮಿಸುತ್ತವೆ. ಚೀನೀ ದೈತ್ಯ ಕಂಪನಿಗಳಾದ ಸಿಎಟಿಎಲ್ ಮತ್ತು ಬಿವೈಡಿಗಳೂ ಇದರಲ್ಲಿ ಪ್ರಮುಖವಾಗಿವೆ. ಬಹಳಷ್ಟು ಅಗ್ಗದ ಆವೃತ್ತಿಗಳು ಭಾರತದ ಅಸಂಘಟಿತ ಮಾರುಕಟ್ಟೆಗಳಲ್ಲಿ (ಅಧಿಕೃತ ನೋಂದಣಿ ಅಥವಾ ನಿಯಂತ್ರಣ ಇಲ್ಲದ ಸಣ್ಣ ಉದ್ಯಮಗಳು) ಮಾರಾಟವಾಗುತ್ತವೆ.

ಪ್ರತಿಯೊಂದು ಇವಿ ಸುರಕ್ಷಿತವಾಗಿ ಚಲಿಸಲು ಉತ್ತಮ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಬೇಕಾಗಿರುವುದರಿಂದ, ವಿದ್ಯುತ್ ಚಾಲಿತ ವಾಹನಗಳು ಅತಿದೊಡ್ಡ ಬಿಎಂಎಸ್ ಬಳಕೆದಾರರಾಗಿವೆ. ಈ ತಂತ್ರಜ್ಞಾನವನ್ನು ಹೈಬ್ರಿಡ್ ವಾಹನಗಳಲ್ಲಿ (ಇಂಧನ ಚಾಲಿತ ಇಂಜಿನ್ ಮತ್ತು ವಿದ್ಯುತ್ ಚಾಲಿತ ಮೋಟಾರ್ ಎರಡನ್ನೂ ಬಳಸುವ ವಾಹನಗಳು) ಮತ್ತು ನವೀಕರಿಸಬಹುದಾದ ಇಂಧನವನ್ನು (ಗಾಳಿ ಅಥವಾ ಸೌರಶಕ್ತಿಯಂತಹ ಶುದ್ಧ ವಿದ್ಯುತ್) ವಿದ್ಯುತ್ ಗ್ರಿಡ್‌ಗಳಿಗೆ ಸಂಪರ್ಕಿಸುವ ದೊಡ್ಡ ಸಂಗ್ರಹಣಾ ವ್ಯವಸ್ಥೆಗಳಲ್ಲೂ ಬಳಸಲಾಗುತ್ತದೆ. ಆದ್ದರಿಂದ, ಬಿಎಂಎಸ್ ಕೇವಲ ನಮ್ಮ ಇ ರಿಕ್ಷಾಗಳಿಗೆ ಮಾತ್ರವೇ ಸೀಮಿತವಾಗಿಲ್ಲ.

ಈ ದುರ್ಬಳಕೆ ಹೇಗೆ ಆರಂಭಗೊಂಡಿತು? ಬಿಎಟಿ - ಬಿಎಂಎಸ್ ಆ್ಯಪ್ ಅನ್ನು ಶೆನ್ಜೆನ್ ಗ್ರೆನರ್ಜಿ ಟೆಕ್ನಾಲಜಿ ಎನ್ನುವ ಚೀನೀ ಕಂಪನಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಮೂಲತಃ ಒಂದು ಉಪಯೋಗಿ ಆ್ಯಪ್ ಆಗಿ ನಿರ್ಮಿಸಲಾಗಿತ್ತು. ಇದು ಬ್ಯಾಟರಿಯೊಡನೆ ಅಂದಾಜು 15 ಮೀಟರ್ ದೂರದಿಂದ ಸಂಪರ್ಕ ಏರ್ಪಡಿಸುವ ಸಲುವಾಗಿ ಬ್ಲೂಟೂತ್ ಲೋ ಎನರ್ಜಿ (ಅತ್ಯಂತ ಕಡಿಮೆ ಬ್ಯಾಟರಿ ಬಳಸುವ, ಕಡಿಮೆ ಶಕ್ತಿಯ ಬ್ಲೂಟೂತ್ ಆವೃತ್ತಿ) ಅನ್ನು ಬಳಸುತ್ತದೆ. ಈ ಆ್ಯಪ್ ಬ್ಯಾಟರಿಯ ಚಾರ್ಜ್ ಮಟ್ಟ, ವೋಲ್ಟೇಜ್, ಕರೆಂಟ್, ತಾಪಮಾನ, ಮತ್ತು ಒಟ್ಟಾರೆ ಆರೋಗ್ಯ ಮಟ್ಟವನ್ನು ತೋರಿಸುತ್ತದೆ. ವಾಹನ ನಿರ್ವಹಣಾ ಕೇಂದ್ರಗಳ ತಂತ್ರಜ್ಞರು ಬ್ಯಾಟರಿಗಳನ್ನು ಪರಿಶೀಲಿಸಿ, ಅವುಗಳನ್ನು ಸುಲಭವಾಗಿ ದುರಸ್ತಿಗೊಳಿಸಲು ಈ ಆ್ಯಪ್‌ಗಳನ್ನು ಬಳಸುತ್ತಾರೆ.

E-Riskshaw
ಬಾಂಬ್ ದಾಳಿಗಳ ಬಳಿಕ: ಅಮೆರಿಕ-ಇರಾನ್ ಒಪ್ಪಂದದ ಒಳನೋಟ (ಜಾಗತಿಕ ಜಗಲಿ)

ಆದರೆ, ಬಹಳಷ್ಟು ಅಗ್ಗದ ಇ-ರಿಕ್ಷಾಗಳಲ್ಲಿ ಬಳಕೆಯಾಗುವ ಬಿಎಂಎಸ್ ಬಹಳ ದುರ್ಬಲ ಭದ್ರತೆಯನ್ನು ಹೊಂದಿದೆ. ಬಹಳಷ್ಟು ಬಾರಿ ಅವು ಡಿಫಾಲ್ಟ್ ಪಾಸ್‌ವರ್ಡ್‌ಗಳನ್ನು (ಅಂದರೆ ಕಂಪನಿ ಅಳವಡಿಸಿರುವ ಅತ್ಯಂತ ಸಾಮಾನ್ಯವಾದ ಪಾಸ್‌ ವರ್ಡ್ ಆಗಿದ್ದು, ಅವುಗಳನ್ನು ವಾಹನಗಳ ಮಾಲೀಕರು ಖರೀದಿಯ ಬಳಿಕ ಬದಲಿಸಿರುವುದಿಲ್ಲ) ಹೊಂದಿರುತ್ತವೆ. ಈ ಕಾರಣದಿಂದ, ತಮ್ಮ ಫೋನ್‌ಗಳಲ್ಲಿ ಇಂತಹ ಆ್ಯಪ್‌ಗಳನ್ನು ಹೊಂದಿರುವ ಯಾರು ಬೇಕಾದರೂ ವಾಹನದ ಬಳಿ ನಿಂತಿರುವಾಗ ಆ್ಯಪ್ ಮೂಲಕ ಬ್ಯಾಟರಿಯನ್ನು ಸಂಪರ್ಕಿಸಿ, ಬಳಿಕ ಅದರ ಡಿಸ್ಚಾರ್ಜ್ ಕಾರ್ಯವನ್ನು (ಮೋಟಾರ್‌ಗೆ ವಿದ್ಯುತ್ ಒದಗಿಸುವ ಕೆಲಸ) ಸ್ಥಗಿತಗೊಳಿಸಬಹುದು. ಡಿಸ್ಚಾರ್ಜ್ ಸರ್ಕ್ಯುಟ್ (ಮೋಟಾರ್‌ಗೆ ಬ್ಯಾಟರಿಯ ಶಕ್ತಿಯನ್ನು ಒದಗಿಸುವ ಭಾಗ) ಮೋಟಾರ್‌ಗೆ ಶಕ್ತಿ ಒದಗಿಸುತ್ತಿದ್ದು, ಅದನ್ನು ಸ್ಥಗಿತಗೊಳಿಸುವುದರಿಂದ ತಕ್ಷಣವೇ ವಿದ್ಯುತ್ ಪೂರೈಕೆ ನಿಂತು, ವಾಹನ ಇದ್ದಕ್ಕಿದ್ದಂತೆ ನಿಂತು ಬಿಡುತ್ತದೆ. ಇದೇನು ದೊಡ್ಡ ಮಟ್ಟದ ಹ್ಯಾಕಿಂಗ್ ಕೆಲಸವೇನಲ್ಲ. ಸರಳವಾಗಿ ಹೇಳುವುದಾದರೆ, ಇದು ಅಗ್ಗದ ಚೀನೀ ಲಿಥಿಯಂ ಬ್ಯಾಟರಿಗಳಲ್ಲಿರುವ ದುರ್ಬಲ ಭದ್ರತಾ ಸೆಟ್ಟಿಂಗ್‌ಗಳ ದುರ್ಬಳಕೆ ಮಾಡುವುದಷ್ಟೇ.

ಇದು ಕೇವಲ ಇದಕ್ಕೆ ಸರಿಹೊಂದುವ ಬ್ಲೂಟೂತ್ ವ್ಯವಸ್ಥೆ ಹೊಂದಿರುವ ಬಿಎಂಎಸ್ ಮೇಲೆ ಮಾತ್ರವೇ ಕಾರ್ಯಾಚರಿಸುತ್ತದೆ. ಆದ್ದರಿಂದ, ಎಲ್ಲ ಇ ರಿಕ್ಷಾಗಳ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಹಲವು ಇ ರಿಕ್ಷಾಗಳು ಇಂದಿಗೂ ಲೆಡ್ - ಆ್ಯಸಿಡ್ ಬ್ಯಾಟರಿಗಳ (ಹಳೆಯ, ಭಾರದ ಬ್ಯಾಟರಿಗಳು) ಆಧಾರದಲ್ಲಿ ಕಾರ್ಯಾಚರಿಸುತ್ತವೆ. ಕೆಲವು ಲಿಥಿಯಂ ಬ್ಯಾಟರಿ ಇ ರಿಕ್ಷಾಗಳು ಇಂತಹ ಆ್ಯಪ್‌ಗಳು ತೆರೆಯಲು ಸಾಧ್ಯವಿಲ್ಲದ ವಿಶೇಷ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿವೆ.

E-Riskshaw
ಭವಿಷ್ಯದ ಭಾರತದ ಅಣು ವಿದ್ಯುತ್ ಕನಸು (ಜಾಗತಿಕ ಜಗಲಿ)

ಸರಳ ಪರಿಹಾರ ಪ್ರಮುಖ ತೊಂದರೆ ಇರುವುದು ಕಡಿಮೆ ವೆಚ್ಚದ ಚೀನೀ ಬ್ಯಾಟರಿ ಪ್ಯಾಕ್‌ಗಳಲ್ಲಿ. ಏಕೆಂದರೆ, ಅವುಗಳ ಬಿಎಂಎಸ್ ದುರ್ಬಲ ರಕ್ಷಣೆ ಹೊಂದಿರುತ್ತವೆ, ಅಥವಾ ಯಾವುದೇ ಪಾಸ್‌ವರ್ಡ್ ರಕ್ಷಣೆ ಹೊಂದಿರುವುದಿಲ್ಲ. ಒಂದು ವೇಳೆ ಇಂತಹ ಬ್ಯಾಟರಿಗಳನ್ನು ಸರಿಯಾಗಿ ರಕ್ಷಿಸದೇ ಹೋದರೆ, ಬ್ಲೂಟೂತ್ ವ್ಯಾಪ್ತಿಯ ಒಳಗಿರುವ ಯಾರು ಬೇಕಾದರೂ ಇದನ್ನು ಸಂಪರ್ಕಿಸಿ, ಬ್ಯಾಟರಿಯ ಸೆಟ್ಟಿಂಗ್ಸ್ ಬದಲಿಸಬಹುದು. ಅವರು ವಿದ್ಯುತ್ ಪೂರೈಕೆಯನ್ನೂ ಸ್ಥಗಿತಗೊಳಿಸಬಹುದು.

ಇದೊಂದು ದೊಡ್ಡ ಲೋಪವಾಗಿದ್ದು, ತುರ್ತಾಗಿ ಪರಿಹರಿಸಬೇಕಿದೆ. ವಾಹನ ಉತ್ಪಾದಕರು ಮತ್ತು ಮಾಲಕರು ಇಂತಹ ಆ್ಯಪ್‌ಗಳಿಗೆ ಮತ್ತು ಬ್ಯಾಟರಿ ಸಿಸ್ಟಮ್‌ಗಳಿಗೆ ಕಠಿಣ ಪಾಸ್‌ವರ್ಡ್ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಪ್ರತಿಬಾರಿ ಬಿಎಂಎಸ್ ಆ್ಯಪ್ ಸಕ್ರಿಯಗೊಂಡಾಗ ಬ್ಯಾಟರಿಯೊಡನೆ ಸಂಪರ್ಕಿಸಲು ಪಾಸ್‌ವರ್ಡ್ ಹಾಕಬೇಕಾಗಿ ಬರುವುದು ಒಂದು ಹೆಚ್ಚುವರಿ ಭದ್ರತೆ ಒದಗಿಸಿದಂತಾಗುತ್ತದೆ. ಈ ಸಣ್ಣ, ಆದರೆ ಶಕ್ತಿಶಾಲಿ ಹೆಜ್ಜೆ ದುರ್ಬಳಕೆ ತಡೆಗಟ್ಟಿ, ವಾಹನ ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಇರಿಸುತ್ತದೆ. ಮಾಲೀಕರು ತಮ್ಮ ಡೀಲರ್‌ಗಳ ಬಳಿ ತಮ್ಮ ವಾಹನದ ಬ್ಯಾಟರಿ ಸುರಕ್ಷಿತವಾದ ಸಿಸ್ಟಮ್ ಬಳಸುತ್ತದೆಯೇ ಎಂದು ಖಾತ್ರಿಪಡಿಸಬೇಕು. ಬಳಿಕ, ಯಾವುದೇ ವಿಳಂಬವಿಲ್ಲದೆ, ಬೇಗನೆ ಡಿಫಾಲ್ಟ್ ಪಾಸ್‌ವರ್ಡ್ ಅನ್ನು ಬದಲಾಯಿಸಬೇಕು.

ಅಂತಿಮವಾಗಿ, ಈ ಸಂಪೂರ್ಣ ಬೆಳವಣಿಗೆ ನಮಗೊಂದು ಬಹುಮುಖ್ಯ ಪಾಠವನ್ನು ಕಲಿಸಿದೆ. ಸರಳವಾದ, ಕಡಿಮೆ ವೆಚ್ಚದ ಇಲೆಕ್ಟ್ರಾನಿಕ್ ವಸ್ತುಗಳೂ ಸರಿಯಾದ ಸುರಕ್ಷತಾ ಸೆಟ್ಟಿಂಗ್ಸ್ ಅನ್ನು ಕಡೆಗಣಿಸಿದರೆ ಅಪಾಯಕಾರಿಯಾಗಿ ಪರಿಣಮಿಸಬಹುದು. ನಮ್ಮ ರಸ್ತೆಗಳು ಈಗಾಗಲೇ ವಾಹನಗಳಿಂದ ತುಂಬಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಚಲಿಸುತ್ತಿರುವ ಒಂದು ವಾಹನ ಇದ್ದಕ್ಕಿದ್ದಂತೆ ನಿಂತರೆ ಅದೊಂದು ಗಂಭೀರ ಅಪಘಾತಕ್ಕೆ ಕಾರಣವಾದೀತು. ಒಂದು ಪ್ರಬಲ ಪಾಸ್‌ವರ್ಡ್ ಅಳವಡಿಕೆ ಇಂದು ಸಣ್ಣ ಕೆಲಸವಾದರೂ, ಅದು ನಾಳೆ ದೊಡ್ಡ ಅಪಘಾತಗಳನ್ನು ತಡೆಗಟ್ಟಿ, ವಾಹನ ದಟ್ಟಣೆಯ ರಸ್ತೆಗಳಲ್ಲಿ ನಾಳೆ ಬಹಳಷ್ಟು ಜೀವಗಳನ್ನು ಉಳಿಸಬಲ್ಲದು. ಉಪಕರಣಗಳು ಅಗ್ಗದ್ದಾಗಲಿ, ಅಥವಾ ದುಬಾರಿಯಾಗಲಿ, ಎಲ್ಲರಿಗೂ ಸುರಕ್ಷತೆ ಮೊದಲ ಆದ್ಯತೆ ಆಗಬೇಕಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com