
ಮುಂಬೈ: ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಆಟ ಅದೆಷ್ಟೋ ಮಂದಿ ಭಾವಿ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಸ್ಪೂರ್ತಿಯಾಗಿದೆ. ಅಂತೆಯೇ ವಿದೇಶಿ ಆಟಗಾರರೂ ಕೂಡ ಈ ಜೋಡಿ ಆಟದಿಂದ ಸ್ಪೂರ್ತಿಗೊಂಡಿದ್ದು, ಇದೀಗ ಆಸ್ಟ್ರೇಲಿಯಾ ಮಹಿಳಾ ತಂಡದ ಸರದಿ.
ಈ ಹಿಂದೆ ವಿರಾಟ್ ಕೊಹ್ಲಿ ಆಟಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ್ತಿಯರು ಮೆಚ್ಚುಗೆ ಸೂಚಿಸಿದ್ದಷ್ಟೇ ಅಲ್ಲದೇ ಕೊಹ್ಲಿ ನಮ್ಮ ಫೇವರಿಟ್ ಆಟಗಾರ ಎಂದು ಬಹಿರಂಗವಾಗಿಯೇ ಹೇಳಿದ್ದರು. ವಿಶ್ವ ಚಾಂಪಿಯನ್ ತಂಡ ಆಸ್ಟ್ರೇಲಿಯಾದ ವನಿತೆಯರೂ ಕೂಡ ಧೋನಿ ಮತ್ತು ಕೊಹ್ಲಿ ತಮ್ಮ ಮೆಚ್ಚಿನ ಆಟಗಾರರು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಈ ಇಬ್ಬರು ಆಟಗಾರರ ಕುರಿತು ಆಸ್ಟ್ರೇಲಿಯಾ ತಂಡದ ಅಲ್ ರೌಂಡ್ ಆಟಗಾರ್ತಿ ಅಲೆಕ್ಸ್ ಬ್ಲಾಕ್ ವೆಲ್ ಮೆಚ್ಚುಗೆ ಸೂಚಿಸಿದ್ದಾರೆ.
‘ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ವಿಕೆಟ್‌ಗಳ ಮಧ್ಯೆ ಓಡುವ ರೀತಿ ಎಂತಹವರಿಗೂ ಸ್ಫೂರ್ತಿ ನೀಡುವಂತಹದ್ದು. ವಿಕೆಟ್‌ಗಳ ಮಧ್ಯೆ ಓಡುವಾಗ ಕೊಹ್ಲಿ ಹಾಗೂ ಧೋನಿ ನಡುವೆ ಕಂಡು ಬರುವ ಹೊಂದಾಣಿಕೆ ಓರ್ವ ಕ್ರಿಕೆಟ್ ಆಟಗಾರ್ತಿಯಾಗಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ವಿಕೆಟ್‌ಗಳ ಮಧ್ಯೆ ಓಡುವುದರಿಂದ ಕೂಡ ಹೆಚ್ಚಿನ ರನ್ ಕಲೆ ಹಾಕಬಹುದು ಹಾಗೂ ಎದುರಾಳಿಯ ಬೌಲರ್‌ಗಳ ಮೇಲೆ ಒತ್ತಡ ಹೇರಬಹುದು ಎಂಬುದಕ್ಕೆ ಧೋನಿ ಹಾಗೂ ಕೊಹ್ಲಿ ನಡುವೆ ನಡೆದ ಉತ್ತಮ ಜತೆಯಾಟವೇ ಸಾಕ್ಷಿ. ಒಂದು ಅಥವಾ ಎರಡು ರನ್ ಗಳನ್ನು ದಾಖಲಿಸುವುದು ಮಧ್ಯದ ಕೆಲವು ಓವರ್‌ಗಳಲ್ಲಿ ಅವಶ್ಯಕವಾದದ್ದು ಎಂದು ಬ್ಲಾಕ್‌ವೆಲ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವ ಟ್ವೆಂಟಿ–20 ಪಂದ್ಯದಲ್ಲಿ ಬ್ಲಾಕ್‌ವೆಲ್ 42ರನ್ ದಾಖಲಿಸಿದ್ದರು. ಭಾನುವಾರ ನಡೆಯುವ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಉತ್ತಮ ಆಟ ಆಡುವ ನಿರೀಕ್ಷೆ ಹೊಂದಿದ್ದಾರೆ.
Advertisement