

ದುಬೈ: ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದ ಖುಷಿಯ ಒಂದೆಡೆಯಾದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಕಹಿ ಮತ್ತೊಂದೆಡೆ.
ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧದ ಸರಣಿ ಸೋಲಿನೊಂದಿಗೆ ನಂಬರ್ 1 ಪಟ್ಟ ಕಳೆದುಕೊಂಡಿತು. ಇದರೊಂದಿಗೆ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಂಬರ್ 1 ಪಟ್ಟ ಅಲಂಕರಿಸಿತ್ತು. ಈ ನಂಬರ್ 1 ಪಟ್ಟವನ್ನು ಉಳಿಸಿಕೊಳ್ಳಲು ಭಾರತ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯವನ್ನು ಗೆಲ್ಲಬೇಕಿತ್ತು. ಆದರೆ ಮಳೆಯಿಂದಾಗಿ ಸತತ ನಾಲ್ಕು ದಿನದಾಟದ ರದ್ದಾಗಿದ್ದರಿಂದ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಹೀಗಾಗಿ ಭಾರತ 110 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ 111 (1) ಅಂಕದೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ.
ಟೆಸ್ಟ್ ರ್ಯಾಂಕಿಂಗ್ ಇತಿಹಾಸದಲ್ಲೇ ಅಗ್ರಸ್ಥಾನದಲ್ಲೂ ಭಾರತ ಇತಿಹಾಸ ನಿರ್ಮಿಸಿದೆ. ಆಸ್ಟ್ರೇಲಿಯಾ ಅಗ್ರಸ್ಥಾನದಿಂದ ಕುಸಿದ ನಂತರ ಭಾರತ ಕಳೆದ 5 ದಿನಗಳ ಹಿಂದೆ ಅಗ್ರಸ್ಥಾನಕ್ಕೇರಿತ್ತು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದ್ದರಿಂದ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದ್ದು, 5 ದಿನ ಟೆಸ್ಟ್ ರ್ಯಾಂಕಿಂಗ್ ಅಗ್ರಸ್ಥಾನ ಅಲಂಕರಿಸಿದ ಏಕೈಕ ತಂಡ ಎಂಬ ಖ್ಯಾತಿಗೂ ಭಾಜನವಾಗಿದೆ.
ವೆಸ್ಟ್ ಇಂಡೀಸ್ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಕೊನೇ ದಿನದಾಟವೂ ಮಳೆಗೆ ಆಹುತಿಯಾಗಿ ಡ್ರಾ ಕಂಡಿದ್ದು. ಇದರಿಂದ ಭಾರತ 2-0ಯಿಂದ ಸರಣಿ ಜಯಿಸಿತು.