

ಧರ್ಮಶಾಲಾ: ಐಸಿಸಿ ಟಿ20 ವಿಶ್ವಕಪ್ ಸರಣಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಬಾಂಗ್ಲಾದೇಶ 8 ರನ್ ಗಳ ರೋಚಕ ಜಯ ಸಾಧಿಸಿದೆ.
ಬುಧವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ ತಮೀಮ್ ಇಕ್ಬಾಲ್ ಅವರ ಅಮೋಘ ಅರ್ಧ ಶತಕ (83 ರನ್)ದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನುಹತ್ತಿದ ನೆದರ್ಲೆಂಡ್ ಕೂಡ ಮೈಬರ್ಘ್ (29ರನ್), ಕೂಪರ್ (20ರನ್) ಮತ್ತು ಬೊರ್ರೆನ್ (30ರನ್) ಅವರ ಬ್ಯಾಟಿಂಗ್ ಸಹಾಯದಿಂದ ಉತ್ತಮ ಹೋರಾಟ ನೀಡಿತಾದರೂ ಅಂತಿಮ ಓವರ್ ನಲ್ಲಿ ನಿಗದಿತ ಗುರಿ ತಲುಪಲಾಗದೇ ಕೇವಲ 8 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ಅಮೀನ್ ಹುಸ್ಸೇನ್ ಮತ್ತು ಶಕೀಬ್ ಅಲ್ ಹಸನ್ ತಲಾ 2 ವಿಕೆಟ್ ಕಬಳಿಸಿದರೆ, ನಾಯಕ ಮೋರ್ತಾಜಾ ಮತ್ತು ನಾಸಿರ್ ಹುಸೇನ್ ತಲಾ 1 ವಿಕೆಟ್ ಗಳಿಸಿದರು.
ಬಾಂಗ್ಲಾಪರ ಉತ್ತಮ ಬ್ಯಾಟಿಂಗ್ ಮಾಡಿ ಸವಾಲಿನ ಮೊತ್ತಕ್ಕೆ ಕಾರಣರಾದ ತಮೀಮ್ ಇಕ್ಬಾಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.