

ಮೊಹಾಲಿ: ಭಾನುವಾರ ರಾತ್ರಿ ಮೊಹಾಲಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿ ಗಾಯಗೊಂಡಿದ್ದ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಉಳಿದ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಗಳಿವೆ.
ಟೀಂ ಇಂಡಿಯಾ ಮೂಲಗಳ ಪ್ರಕಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೊಹಾಲಿ ಪಂದ್ಯದಲ್ಲಿ ಗಾಯಗೊಂಡಿದ್ದರು. ಈಗಾಗಲೇ ಟೀಂ ಮ್ಯಾನೇಜ್ ಮೆಂಟ್ ಯುವಿ ಅವರ ಕಾಲಿನ ಎಂಅರ್ ಸ್ಕ್ಯಾನಿಂಗ್ ಮಾಡಿಸಿದ್ದು, ಮುಂದಿನ ಪಂದ್ಯಗಳಿಗೆ ಯುವಿ ಅಲಭ್ಯರಾಗುವ ಸಾಧ್ಯತೆಗಳಿವೆ. ಭಾನುವಾರದ ಪಂದ್ಯದಲ್ಲಿ ಯುವರಾಜ್ ಸಿಂಗ್ 5 ರನ್‌ಗಳಿಸಿದ್ದ ವೇಳೆ ಗಾಯಗೊಂಡಿದ್ದರು. ಇದರ ನಡುವೆಯೂ ಯುವರಾಜ್ ಕೆಲಕಾಲ ಬ್ಯಾಟಿಂಗ್ ನಡೆಸಿದ್ದರು.
ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕದ ಸ್ಫೋಟಕ ಬ್ಯಾಟ್ಸ್‌ಮನ್ ಮನೀಷ್ ಪಾಂಡೆಯನ್ನು ಮೀಸಲು ಆಟಗಾರನಾಗಿ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮನೀಷ್ ಪಾಂಡೆಗೆ ಬಿಸಿಸಿಐ ಬುಲಾವ್ ನೀಡಿದ್ದು, ಮುಂಬೈನಲ್ಲಿರುವ ಭಾರತ ತಂಡವನ್ನು ಕೂಡಿಕೊಳ್ಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದ ಪಾಂಡೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಆಕಾಂಕ್ಷಿಯಾಗಿದ್ದರು. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಶ್ರೇಯಕ್ಕೂ ಈ ಹಿಂದೆ ಪಾಂಡೆ ಪಾತ್ರರಾಗಿದ್ದಾರೆ.