

ಮೊಹಾಲಿ: ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಪಂಜಾಬ್ ನ ಮೊಹಾಲಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿಲಿಯಮ್ಸನ್ ಪಡೆ ನೀಡಿದ್ದ 286 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಧೋನಿ ಪಡೆ ಇನ್ನೂ 10 ಎಸೆತ ಬಾಕಿ ಇರುವಂತೆಯೇ 286 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ನ್ಯೂಜಿಲೆಂಡ್ ನೀಡಿದ 286 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ನ್ಯೂಜಿಲೆಂಡ್ ಬೌಲರ್ ಹೆನ್ರಿ ಆರಂಭಿಕ ಆಘಾತ ನೀಡಿದರು. 5 ರನ್ ಗಳಿಸಿದ್ದ ರಹಾನೆ ಸ್ಯಾಂಥ್ನರ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ ಕೂಡ 13 ರನ್ ಗಳಿಸಿ ನಿರ್ಗಮಿಸಿದರು. ಆದರೆ ಈ ಹಂತದಲ್ಲಿ ಜೊತೆಗೂಡಿದ ಧೋನಿ (80 ರನ್) ಹಾಗೂ ವಿರಾಟ್ ಕೊಹ್ಲಿ (ಅಜೇಯ 154 ರನ್)ಜೋಡಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.
ದಾಖಲೆಯ ಜೊತೆಯಾಟವಾಡಿದ ಈ ಜೋಡಿ ಭರ್ಜರಿ 150 ರನ್ ಗಳ ಜೊತೆಯಾಟವಾಡಿತು. ಧೋನಿ 80 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದರೆ, ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಹಂತದಲ್ಲಿ ಹೆನ್ರಿ ಬೌಲಿಂಗ್ ನಲ್ಲಿ ವಿಕೆಟ್ ಕೈ ಚೆಲ್ಲಿದರು.
ಬಳಿಕ ಬಂದ ಕರ್ನಾಟಕದ ಆಟಗಾರ ಮನೀಷ್ ಪಾಂಡೆ ಅವರು ಕೊಹ್ಲಿ ಜೊತೆಗೂಡಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಪಾಂಡೆ 28 ರನ್ ಗಳಿಸಿ ಅಜೇರಾಗಿ ಉಳಿದರೆ, ಕೊಹ್ಲಿ ಭರ್ಜರಿ 154 ರನ್ ಗಳಿಸಿದರು.