

ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಸಮಿತಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ವೇಗದ ಬೌಲರ್' ಶಾರ್ದೂಲ್ ಠಾಕೂರ್ ಅವರನ್ನು ತಂಡದಿಂದ ಕೈಬಿಟ್ಟಿದೆ.
ಸೆ.22 ರಿಂದ ಭಾರತ- ನ್ಯೂಜಿಲ್ಯಾಂಡ್ ನಡುವೆ ಕಾನ್ಪುರದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ಪ್ರಾರಂಭವಾಗಲಿದೆ. ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ಅನಿಲ್ ಕುಂಬ್ಳೆ ಅವರು ಭಾಗವಹಿಸಿದ್ದ ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತದ ತಂಡವನ್ನು ಅಂತಿಮಗೊಳಿಸಲಾಗಿದೆ.
ಕಳೆದ 11 ಇನ್ನಿಂಗ್ಸ್ ಗಳಲ್ಲಿ ಕೇವಲ ಒಂದು ಅರ್ಧ ಶತಕ ದಾಖಲಿಸಿದ್ದರೂ ಸಹ ಓಪನರ್ ಶಿಖರ್ ಧವನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಉಳಿದಂತೆ ಬಹುತೇಕ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 17 ಕ್ರಿಕೆಟರ್ ಗಳ ತಂಡವನ್ನು ಅಂತಿಮಗೊಳಿಸಲಾಗಿತ್ತು. ಆದರೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇಬ್ಬರನ್ನು ಕೈಬಿಡಲಾಗಿದ್ದು ಉಳಿದ 15 ಆಟಗಾರರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧ 13 ಟೆಸ್ಟ್ ಪಂದ್ಯಗಳ ಸರಣಿ, 8 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳನ್ನು ಆಯೋಜಿಸಲಾಗಿದೆ. ಟೆಸ್ಟ್ ಪಂದ್ಯಗಳನ್ನು ಕಾನ್ಪುರ (ಸೆ.22), ಕೋಲ್ಕತಾ(ಸೆ.30) ಇಂಡೋರ್( ಅಕ್ಟೊಬರ್ 8) ರಂದು ನಡೆಯಲಿವೆ.
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿರುವ ಭಾರತದ ತಂಡದ ವಿವರ: ವಿರಾಟ್ ಕೊಹ್ಲಿ(ನಾಯಕ) ಆರ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ವೃದ್ಧಿಮಾನ್ ಷಾ( ವಿಕೆಟ್ ಕೀಪರ್) ಇಶಾಂತ್ ಶರ್ಮಾ, ರೋಹಿತ್ ಶರ್ಮಾ, ಮುರಳಿ ವಿಜಯ್, ಉಮೇಶ್ ಯಾದವ್, ಮೊಹಮ್ಮದ್ ಶಮಿ