

ಬೆಂಗಳೂರು: ಬಹು ನಿರೀಕ್ಷಿತ ಐಪಿಎಲ್-10 ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದೆ ಕಾಡುತ್ತಿದ್ದು, ಗಾಯಾಳುಗಳ ಪಟ್ಟಿಗೆ ಇದೀಗ ಮತ್ತೋರ್ವ ಆಟಗಾರ ಸೇರ್ಪಡೆಯಾಗಿದ್ದಾರೆ.
ತಂಡದ ನಾಯಕ ವಿರಾಟ್ ಕೊಹ್ಲಿ ಗಾಯಾಳು ಪಟ್ಟಿಗೆ ಸೇರಿದ ಬಳಿಕ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ತಂಡದ ಹಂಗಾಮಿ ನಾಯಕರಾಗಿದ್ದು, ಹೈದರಾಬಾದ್ ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಸೋಮವಾರ ನಡೆದ ಅಂತಿಮ ತರಬೇತಿ ಸಂದರ್ಭದಲ್ಲಿ ತಂಡದ ಪ್ರಮುಖ ಆಟಗಾರ ಸರ್ಫರಾಜ್ ಖಾನ್ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದು, ಅವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಆರ್ ಸಿಬಿ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಎಬಿ ಡಿವಿಲಿಯರ್ಸ್ ಗಾಯಗೊಂಡು ಹೊರಗುಳಿದಿದ್ದು, ಇದೀಗ ಸರ್ಫರಾಜ್ ಖಾನ್ ಸೇರ್ಪಡೆಯೊಂದಿಗೆ ಆರ್ ಸಿಬಿ ಗಾಯಾಳು ಆಟಗಾರರ ಪಟ್ಟಿ 4ಕ್ಕೇರಿದೆ. ಇನ್ನು ಕಣದಲ್ಲಿರುವ ಕೆಲವೇ ಕೆಲ ಸ್ಚಾರ್ ಆಟಗಾರರಾದ ಕ್ರಿಸ್ ಗೇಯ್ಲ್, ಶೇನ್ ವಾಟ್ಸನ್ ಮೇಲೆ ಇದೀಗ ಒತ್ತಡ ಹೆಚ್ಚಾಗಿದ್ದು, ನಾಳೆ ಹೈದರಾಬಾದ್ ನಲ್ಲಿ ಸನ್ ರೈಸರ್ಸ್ ಹೈಜರಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಯಾವೆಲ್ಲಾ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.