ಬಾಂಗ್ಲಾದೇಶ ವಿರುದ್ಧ ದಾಖಲೆಯ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ!

ಬಾಂಗ್ಲಾದೇಶದ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆದಿದ್ದು, ನಿನ್ನೆ ಶತಕ ಸಿಡಿಸಿದ್ದ ಕೊಹ್ಲಿ ಇಂದು ಅದನ್ನು ದ್ವಿಶತಕವಾಗಿ ಮಾರ್ಪಡಿಸಿ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆದಿದ್ದು, ನಿನ್ನೆ ಶತಕ ಸಿಡಿಸಿದ್ದ ಕೊಹ್ಲಿ ಇಂದು ಅದನ್ನು ದ್ವಿಶತಕವಾಗಿ  ಮಾರ್ಪಡಿಸಿ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ.

ಬಾಂಗ್ಲಾ ವಿರುದ್ಧ ಹೈದರಾಬಾದ್ ನಲ್ಲಿ 246 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಕೊಹ್ಲಿ ತಮ್ಮ ವೈಯುಕ್ತಿಕ ನಾಲ್ಕನೇ ದ್ವಿಶತಕ ಸಿಡಿಸಿದ್ದು, ಆ ಮೂಲಕ ನಿರಂತರ ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಸಿಡಿಸಿದ ವಿಶ್ವದ  ಮೊದಲ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ 2016ರ ಜುಲೈ 21ರಂದು ವಿಂಡೀಸ್ ವಿರುದ್ಧ ಆ್ಯಂಟಿಗುವಾದಲ್ಲಿ ಕೊಹ್ಲಿ ಮೊದಲ ದ್ವಿಶತಕ ಸಿಡಿಸಿದ್ದರು.

ಈ ಸರಣಿ ಬೆನ್ನಲ್ಲೇ 2016ರ ಅಕ್ಟೋಬರ್ ನಡೆದ  ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ 211 ರನ್ ಗಳಿಸುವ ಮೂಲಕ ತಮ್ಮ ಎರಡನೇ ದ್ವಿಶತಕ ಸಿಡಿಸಿದ್ದರು. ಅಂತೆಯೇ 2016 ಡಿಸೆಂಬರ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಮುಂಬೈ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 3ನೇ ದ್ವಿಶತಕ  ಸಿಡಿಸಿದ್ದರು. ಇದೀಗ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಾಲ್ಕನೇ ದ್ವಿಶತಕ ಸಿಡಿಸುವ ಮೂಲಕ ನಿರಂತರ ಸರಣಿಯಲ್ಲಿ ಸತತ ನಾಲ್ಕು ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.

ಕೊಹ್ಲಿಗೂ ಮುನ್ನ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಹಾಗೂ ಭಾರತದ ರಾಹುಲ್ ದ್ರಾವಿಡ್ ನಿರಂತರ ಮೂರು ಸರಣಿಗಳಲ್ಲಿ 3 ದ್ವಿಶತಕ ಸಿಡಿಸಿದ್ದರು. ಇದೀಗ ಇವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ತವರಿನ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೊಹ್ಲಿ
ಇನ್ನು ವಿಶ್ವ ಕ್ರಿಕೆಟ್ ನ ಇತಿಹಾಸದಲ್ಲಿಯೇ ತವರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸರಣಿಯಲ್ಲಿ ಕೊಹ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಮುರಿದಿದ್ದಾರೆ. ಈ ಹಿಂದೆ ಭಾರತದವರೇ ಆದರ ವೀರೇಂದ್ರ ಸೆಹ್ವಾಗ್ ತವರಿನಲ್ಲಿ  ನಡೆದ ಟೆಸ್ಟ್ ಸರಣಿಯಲ್ಲಿ 1105 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ಕೊಹ್ಲಿ 1168  ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಉಳಿದಂತೆ 10587 ರನ್ ಗಳಿಸಿರುವ ಇಂಗ್ಲೆಂಡ್ ತಂಡದ ಆಟಗಾರ ಗೂಚ್  ಮೂರನೇ ಸ್ಥಾನದಲ್ಲಿದ್ದು, 1027 ರನ್ ಗಳಿಸಿರುವ ಗವಾಸ್ಕರ್ 4ನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಬಾಂಗ್ಲಾ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ 2ನೇ ಆಟಗಾರ
ಇನ್ನು ಬಾಂಗ್ಲಾದೇಶದ ವಿರುದ್ಧ ವಿಶ್ವದ ಯಾವುದೇ ತಂಡದ ನಾಯಕ ಗಳಿಸಿದ ಅತೀ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲೂ ಕೊಹ್ಲಿ 2ನೇ ಸ್ಥಾನ ಗಳಿಸಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ 204 ರನ್ ಸಿಡಿಸುವ ಮೂಲಕ ಬಾಂಗ್ಲಾದೇಶದ ವಿರುದ್ಧ ಪಂದ್ಯವೊಂದರಲ್ಲಿ ಎದುರಾಳಿ ತಂಡದ ನಾಯಕ ಗಳಿಸಿದ 2ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್  2008ರ ಚಿತ್ತಗಾಂಗ್ ಟೆಸ್ಟ್ ಪಂದ್ಯದಲ್ಲಿ 232 ರನ್ ಗಳಿಸಿದ್ದರು. ಇದು ಬಾಂಗ್ಲಾದೇಶದ ವಿರುದ್ದ ತಂಡದ ನಾಯಕನೋರ್ವ ಗಳಿಸಿದ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com