ರಿವ್ಯೂ ತೆಗೆದುಕೊಂಡಿದ್ದರೆ ಕೊಹ್ಲಿ ಮತ್ತಷ್ಟು ದಾಖಲೆ ಮುರಿಯಬಹುದಿತ್ತೆ!

ಅಮೋಘ ದ್ವಿಶತಕ ಸಿಡಿಸಿ ಭರ್ಜರಿಯಾಗಿ ಆಡುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿರಲಿಲ್ಲ, ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು.
ಕೊಹ್ಲಿ ಮತ್ತು ಸಹಾ ಜುಗಲ್ ಬಂದಿ
ಕೊಹ್ಲಿ ಮತ್ತು ಸಹಾ ಜುಗಲ್ ಬಂದಿ

ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ಅಮೋಘ ದ್ವಿಶತಕ ಸಿಡಿಸಿ ಭರ್ಜರಿಯಾಗಿ ಆಡುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿರಲಿಲ್ಲ, ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಂದಾಗಿ ಸುದ್ದಿಯಾಗುತ್ತಿದ್ದು, ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಬಂದ ವಿವಾದಾತ್ಮಕ ತೀರ್ಪಿನಿಂದಾಗಿ ಮತ್ತೆ ಸುದ್ದಿಯಲ್ಲಿದೆ.

ರಿವ್ಯೂ ತೆಗೆದುಕೊಂಡಿದ್ದರೆ ಬಹುಶಃ ಕೊಹ್ಲಿಯಿಂದ ಮತ್ತಷ್ಟು ದಾಖಲೆ!
ಈ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಶತಕ ಸಾಧನೆಯಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದು, ದ್ವಿಶತಕ ಸಾಧನೆ ಮಾಡಿ ಸತತ ನಾಲ್ಕು ಸರಣಿಗಳಲ್ಲಿ ದ್ವಿಶತಕ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತೀಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದರು. ಆದರೆ ತಂಡ 495 ರನ್ ಗಳಿಸಿದ್ದಾಗ ತೈಜುಲ್ ಇಸ್ಲಾಂ ಬೌಲಿಂಗ್ ನಲ್ಲಿ ಕೊಹ್ಲಿ ಎಲ್ ಬಿ ಬಲೆಗೆ ಬಿದ್ದಿದ್ದರು. ಆದರೆ ಇದೀಗ ಕೊಹ್ಲಿ ನಾಟ್ ಔಟ್ ಎಂದು ಹೇಳಲಾಗುತ್ತಿದ್ದು, ಅಂಪೈರ್ ನೀಡಿದ ವಿವಾದಾತ್ಮಕ ತೀರ್ಮಾನದಿಂದಾಗಿ ಕೊಹ್ಲಿ ಔಟ್ ಆಗಿರುವ ವಿಚಾರ ಬಹಿರಂಗವಾಗಿದೆ. ಆಗ ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರೆ ಬಹುಶಃ ಮತ್ತಷ್ಚು ಹೊತ್ತು ಕೊಹ್ಲಿ ಕ್ರೀಸ್ ನಲ್ಲಿ ಇದ್ದು, ಮತ್ತಷ್ಟು ರನ್ ಗಳಿಕೆ ಮಾಡುತ್ತಿದ್ದರು.


ಕೊಹ್ಲಿ ಔಟ್ ಆದ ಬಳಿಕ ಟಿವಿ ರಿವ್ಯೂ ನಲ್ಲಿ ಸಾಕಷ್ಚು ಬಾರಿ ಇದು ಚರ್ಚೆಯಾಗಿತ್ತು. ಕೇವಲ ಟಿವಿ ರಿವ್ಯೂ ಅಷ್ಟೇ ಅಲ್ಲದೆ ಕೊಹ್ಲಿ ಜೊತೆ ಕ್ರೀಸ್ ಹಂಚಿಕೊಂಡಿದ್ದ ವೃದ್ದಿಮಾನ್ ಸಹಾ ಕೂಡ ದಿನದಾಟದ ಅಂತ್ಯದ ಬಳಿಕ ಇದೇ ವಾದವನ್ನು ಮಂಡಿಸಿದ್ದಾರೆ. ಕೊಹ್ಲಿ 180 ರನ್ ಗಳಿಸಿದ್ದ ವೇಳೆ ಮೆಹದಿ ಹಸನ್ ಎಸೆದ 117ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ ಎಲ್ ಬಿ ಬಲೆಗೆ ಬಿದ್ದಿದ್ದರು. ಆಗ ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದ್ದರು. ಸಹಾ ಬಳಿ ಬಂದ ಕೊಹ್ಲಿ ಅಭಿಪ್ರಾಯ ಕೇಳಿದ್ದರು. ಆಗ ಸಹಾ ಚೆಂಡು ಆಫ್ ಸ್ಟಂಪ್ ನಿಂದ ಆಚೆ ಹೋಗುತ್ತಿರುವ ಹಾಗಿತ್ತು ಎಂದು ಸಹಾ ಹೇಳಿದ್ದರು. ಕೂಡಲೇ ಕೊಹ್ಲಿ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲಿ ಕೊಹ್ಲಿ ಪರ ತೀರ್ಪು ಬಂದಿತು.

ಬಳಿಕ ಕೊಹ್ಲಿ ದ್ವಿಶತಕ ಸಾಧನೆ ಮಾಡಿ ದಾಖಲೆ ಬರೆದರು. ಅಷ್ಟು ಹೊತ್ತಿಗಾಗಲೇ ಭಾರತ ತಂಡ ಸುರಕ್ಷಿತ ಎನ್ನುವಷ್ಚು ಮೊತ್ತ ದಾಖಲಿಸಿತ್ತು. 204 ರನ್ ಗಳಿಸಿದ್ದ ಕೊಹ್ಲಿ 126ನೇ ಓವರ್ ನಲ್ಲಿ ತೈಜುಲ್ ಇಸ್ಲಾಮ್ ಬೌಲಿಂಗ್ ನಲ್ಲಿ ಮತ್ತೆ ಎಲ್ ಬಿ ಬಲೆಗೆ ಬಿದ್ದರು. ಆಗ ಕೂಡ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆಗ ಮತ್ತೆ ಸಹಾ ಬಳಿ ಬಂದ ಕೊಹ್ಲಿ ಚರ್ಚೆ ನಡೆಸಿದರು. ಈ ಬಾರಿ ಸಹಾ ಕೂಡ ಕೊಂಚ ಅನುಮಾನದಲ್ಲಿಯೇ ಚೆಂಡು ಆಫ್ ಸ್ಟಂಪ್ ನ ಮೇಲೆ ಸವರಿಕೊಂಡು ಹೋದಂತಿದೆ ಎಂದು ಹೇಳಿದ್ದರು.

ಆದರೆ ಟಿವಿ ರಿವ್ಯೂನಲ್ಲಿ ಕೊಹ್ಲಿ ನಾಟ್ ಔಟ್ ಆಗಿರುವ ಕುರಿತು ಚರ್ಚೆ ನಡೆಯಿತು. ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರೆ ಬಹುಶಃ ಅವರ ಬ್ಯಾಟ್ ನಿಂದ ಮತ್ತಷ್ಟು ರನ್ ಗಳು ಹರಿದು ಬರುತ್ತಿದ್ದವು. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಗಳಿಸಿದ 687 ರನ್ ಭಾರತದ 4ನೇ ಬೃಹತ್ ಮೊತ್ತವಾಗಿದ್ದು, ಈ ಹಿಂದೆ 2016 ಡಿಸೆಂಬರ್ 16ರಂದು ಇಂಗ್ಲೆಂಡ್ ವಿರುದ್ಧ ಭಾರತ 759 ರನ್ ಗಳಿಸಿತ್ತು. ಇದು ಈ ವರೆಗಿನ ಭಾರತದ ಬೃಹತ್ ಮೊತ್ತವಾಗಿದೆ. ಒಂದು ವೇಳೆ ಕೊಹ್ಲಿ ಮತ್ತಷ್ಟು ಸಮಯ ಕ್ರೀಸ್ ನಲ್ಲಿ ಇದ್ದಿದ್ದರೆ ಮತ್ತಷ್ಟು ರನ್ ಕಲೆ ಹಾಕುತ್ತಿದ್ದರು. 2ನೇ ದಿನದಾಟದ ಅಂತ್ಯದ ವೇಳೆಗೆ ಕನಿಷ್ಟ ಒಂದು ವಿಕೆಟ್ ಪಡೆಯುವ ಭಾರತದ ಪ್ರಯತ್ನಕ್ಕೆ ಬಾಂಗ್ಲಾ ತಂಡದ ಆರಂಭಿಕರಾದ ಸೌಮ್ಯ ಸರ್ಕಾರ್ ಮತ್ತು ತಮೀಮ್ ಇಕ್ಬಾಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುವ ಮೂಲಕ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದರು.

ಆದರೆ 12ನೇ ಓವರ್ ನಲ್ಲಿ ಉಮೇಶ್ ಯಾದವ್ ಎಸೆದ ಎರಡನೇ ಎಸೆತ ಸೌಮ್ಯ ಸರ್ಕಾರ್ ಅವರ ಬ್ಯಾಟಿನ ಅಂಚಿಗೆ ಸವರಿಕೊಂಡು ಹೋಗಿತ್ತು.ಇದನ್ನು ವಿಕೆಟ್ ಹಿಂದೆ ಇದ್ದ ಸಹಾ ಬಹಳ ಚಾಕಚಕ್ಯತೆಯಿಂದ ಹಿಡಿತಕ್ಕೆ ಪಡೆದಿದ್ದರು. ಆದರೆ ಅನುಮಾನದಿಂದಲೇ ಇದು ಔಟ್ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಅಂಪೈರ್ ನಾಟ್ ಔಟ್ ಎಂದರು. ಆದರೆ ಸೌಮ್ಯ ಸರ್ಕಾರ್ ಔಟ್ ಆಗಿರುವ ಕುರಿತು ಸಹಾ, ಕೊಹ್ಲಿ ಮತ್ತು ತಂಡದೊಂದಿಗೆ ಚರ್ಚಿಸಿದರು. ಬೌಲರ್ ಯಾದವ್ ಮತ್ತು ಸಹಾ ಅವರ ವಿಶ್ವಾಸದ ನುಡಿಗಳನ್ನು ಕೇಳಿದ ಕೊಹ್ಲಿ ಕೂಡಲೇ ರಿವ್ಯೂ ತೆಗೆದುಕೊಂಡರು. ಮೂರನೇ ಅಂಪೈರ್ ಸ್ನಿಕೋ ತಂತ್ರಜ್ಞಾನ ಮೊರೆ ಹೋಗಿ ಪರಿಶೀಲಿಸಿದಾಗ ಅದು ಔಟ್ ಎಂದು ಸಾಬೀತಾಗಿತ್ತು. ಬಳಿಕ ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com