

ನವದೆಹಲಿ: ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಬಿಸಿಸಿಐ ಮುಂದೆ ಹೊಸದೊಂದು ಬೇಡಿಕೆ ಇಟ್ಟಿದ್ದು, ಕೋಚಿಂಗ್ ತಂಡದ ಬಳಿಕ ಇದೀಗ ತಂಡದ ಸಲಹೆಗಾರರು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಈಗಾಗಲೇ ರವಿಶಾಸ್ತ್ರಿ ಬೇಡಿಕೆಯಂತೆ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಹಾಗೂ ಫಿಸಿಯೋ ನೇಮಕ ಮಾಡಲಾಗಿದ್ದು, ಇದೀಗ ಮತ್ತೊಂದು ಬೇಡಿಕೆಯನ್ನು ರವಿಶಾಸ್ತ್ರಿ ಮುಂದಿಟ್ಟಿದ್ದಾರೆ. ಅದರನ್ವಯ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿರುವ ಸಚಿನ್ ತೆಂಡೂಲ್ಕರ್ ಅವರನ್ನು ತಂಡದ ಸಲಹೆಗಾರರಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ರವಿಶಾಸ್ತ್ರಿ ಮತ್ತು ಬಿಸಿಸಿಐ ಪದಾಧಿಕಾರಿಗಳು ಚರ್ಚೆ ನಡೆಸಿದ್ದು, ಈ ವೇಳೆ ಶಾಸ್ತ್ರಿ ತಮ್ಮ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತೆಂಡೂಲ್ಕರ್ ಆಯ್ಕೆಗೆ ಸ್ವಹಿತಾಸಕ್ತಿ ಸಂಘರ್ಷ ಅಡ್ಡಿ
ಇನ್ನು ರವಿಶಾಸ್ತ್ರಿ ಅವರ ಕೋರಿಕೆಯಂತೆ ಸಚಿನ್ ತೆಂಡೂಲ್ಕರ್ ಅವರನ್ನು ತಂಡದ ಸಲಹೆಗಾರರಾಗಿ ನೇಮಕ ಮಾಡಲು ನೀತಿ ನಿಯಮಗಳ ಅಡ್ಡಿ ಇದ್ದು, ಪ್ರಸ್ತುತ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿರುವ ಸಚಿನ್ ತಂಡದ ಸಲಹೆಗಾರರಾಗಿಯೂ ಕೂಡ ಮುಂದುವರೆಯಲು ಸಾಧ್ಯವಿಲ್ಲ. ಓರ್ವ ವ್ಯಕ್ತಿ ಎರಡೆರಡು ಹುದ್ದೆಗಳಲ್ಲಿ ಮುಂದುವರೆಯುವಂತಿಲ್ಲ ಎಂದು ಬಿಸಿಸಿಐನಲ್ಲಿ ನಿಯಮವಿದ್ದು, ಇದೇ ಕಾರಣಕ್ಕೆ ಸಚಿನ್ ತೆಂಡೂಲ್ಕರ್ ತಂಡದ ಸಲಹೆಗಾರರಾಗಿ ನೇಮಕವಾಗಲು ಸ್ವಹಿತಾಸಕ್ತಿ ಸಂಘರ್ಷ ಅಡ್ಡಿಯಾಗುತ್ತದೆ. ಈ ವಿಚಾರವನ್ನೂ ಕೂಡ ನಿನ್ನೆಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಸಚಿನ್ ಅವರೇ ಈ ಹುದ್ದೆಗೆ ಒಪ್ಪಿಗೆ ನೀಡಿದರೆ, ಅವರು ಈಗಾಗಲೇ ಹೊತ್ತಿರುವ ಸಿಎಸಿ ಸದಸ್ಯತ್ವ ಹಾಗೂ ಐಪಿಎಲ್ ಮುಂಬೈ ತಂಡದ ಜವಾಬ್ದಾರಿಯನ್ನು ತೊರೆಯ ಬೇಕಾಗುತ್ತದೆ. ಹೀಗಾಗಿ ಇದು ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹುದೇ ಕಾರಣ ಒಡ್ಡಿ ರವಿ ಶಾಸ್ತ್ರಿ ಈ ಹಿಂದೆ ಜಹೀರ್ ಖಾನ್ ಅವರನ್ನು ಬೌಲಿಂಗ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜಹೀರ್ ಖಾನ್ ಕೂಡ ಐಪಿಎಲ್ ತಂಡದ ಸಲಹೆಗಾರರಾಗಿದ್ದಾರೆ. ಇದೀಗ ಇದೇ ರವಿಶಾಸ್ತ್ರಿ ಮುಂಬೈ ತಂಡದ ಮೆಂಟರ್ ಆಗಿರುವ ಮತ್ತು ಸಿಎಸಿ ಸದಸ್ಯರಾಗಿರುವ ಸಚಿನ್ ಅವರನ್ನು ತಂಡದ ಸಲಹೆಗಾರ ಹುದ್ದೆಗೆ ಆಗ್ರಹಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.