
ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಮದ್ಯದ ದೊರೆ ವಿಜಯ್ ಮಲ್ಯ ಅವರ ಮುಜುಗುರ ಉಂಟು ಮಾಡಿದ ಪ್ರಸಂಗ ನಡೆಯಿತು.
ರಾಷ್ಟ್ರೀಯ ಬ್ಯಾಂಕ್ ಗಳಿಂದ ಪಡೆದ ಬಹುಕೋಟಿ ಸಾಲವನ್ನು ಪಾವತಿ ಮಾಡದೇ ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿರುವ ವಿಜಯ್ ಮಲ್ಯ ಅವರನ್ನು ಓವಲ್ ಕ್ರೀಡಾಂಗಣದಲ್ಲಿ ಕಂಡ ಕೂಡಲೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಮಂದಿ ಭಾರತೀಯ ಕ್ರಿಕೆಟ್ ಪ್ರೇಮಿಗಳು ಚೋರ್ ಚೋರ್ ಎಂದು ಕೂಗಲಾರಂಭಿಸಿದರು. ವಿಜಯ್ ಮಲ್ಯ ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಪಂದ್ಯವನ್ನು ವೀಕ್ಷಿಸಲು ದ ಓವಲ್ ಕ್ರೀಡಾಂಗಣಕ್ಕೆ ಆಗಮಿಸಿದರು. ಮಲ್ಯ ಸರ್ ಜ್ಯಾಕ್ ಹಾಬ್ಸ್ ಗೇಟ್ ಮೂಲಕ ಮಲ್ಯ ಕ್ರೀಡಾಂಗಣ ಪ್ರವೇಶ ಮಾಡುತ್ತಿದ್ದಂತೆಯೇ ಅವರನ್ನು ಕಂಡ ಪ್ರೇಕ್ಷಕರು ಕೂಗಲಾರಂಭಿಸಿದರು. ‘ಅಲ್ಲಿ ನೋಡಿ ಕಳ್ಳ, ಕಳ್ಳ.. ಕ್ರೀಡಾಂಗಣಕ್ಕೆ ಬರುತ್ತಿದ್ದಾನೆ' ಎಂದು ಜೋರಾಗಿ ಕೂಗಿದರು.
ಅವರ ಕೂಗನ್ನು ಲೆಕ್ಕಿಸದ ಮಲ್ಯ ಗೇಟ್ ಸಿಬ್ಬಂದಿಗಳಿಗೆ ತಮ್ಮ ಪಾಸ್ ತೋರಿಸಿ ಸಂಗಡಿಗರೊಂದಿಗೆ ಕ್ರೀಡಾಂಗಣ ಸೇರಿಕೊಂಡರು. ಕಳೆದ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗೂ ಆಗಮಿಸಿದ್ದ ಮಲ್ಯ, ವಿರಾಟ್ ಕೊಹ್ಲಿ ಪ್ರತಿಷ್ಠಾನ ಸಹಾಯಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲೂ ಕಾಣಿಸಿಕೊಂಡಿದ್ದರು. ಮಲ್ಯ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಕೊಹ್ಲಿ ಮತ್ತು ತಂಡ ಕಾರ್ಯಕ್ರಮದಿಂದ ಹೊರಬಿದ್ದಿತ್ತು.
Advertisement