

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ಮಹಮದ್ ಆಮೀರ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೂಲಗಳ ಪ್ರಕಾರ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಲುವಾಗಿ 25 ವರ್ಷದ ಆಮೀರ್ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆಮೀರ್ ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚಿಸಿದ್ದು, ಈ ಚರ್ಚೆಯ ಅಂಶಗಳು ಇದೀಗ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಕಾರಣವಾಗಿವೆ.
2010ರಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿ ಆಮೀರ್ ಕ್ರಿಕೆಟ್ ನಿಂದ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಬಳಿಕ 2016ರ ಜನವರಿಯಲ್ಲಿ ಮತ್ತೆ ಅಮೀರ್ ತಂಡ ಸೇರ್ಪಡೆಗೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಮೀರ್ ವಾಪಸ್ ಆಗಿದ್ದರು. ಆಮೀರ್ ಈ ವರೆಗೂ 27 ಟೆಸ್ಟ್ ಪಂದ್ಯಗಳನ್ನಾಡಿದ್ದು, 31.57 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಅಂತೆಯೇ ಒಟ್ಟು 92 ವಿಕೆಟ್ ಪಡೆದಿರುವ ಆಮೀರ್ ನಾಲ್ಕು ಬಾರಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.