ನಾಗ್ಪುರ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಮುರಿದಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ 143 ರನ್ ಗಳನ್ನು ಸಿಡಿಸಿದ್ದು ಆ ಮೂಲಕ ಸ್ವದೇಶದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 3 ಸಾವಿರ ರನ್ ಪೂರೈಸಿದ್ದಾರೆ.
ಸ್ವದೇಶಿ ನೆಲದಲ್ಲಿ 3 ಸಾವಿರ ರನ್ ಪೂರೈಸಲು ಸಚಿನ್ ತೆಂಡೂಲ್ಕರ್ ಅವರು 55 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಆದರೆ ಪೂಜಾರ 53 ಇನ್ನಿಂಗ್ಸ್ ನಲ್ಲೇ 3 ಸಾವಿರ ರನ್ ಪೂರೈಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.
ಚೇತೇಶ್ವರ ಪೂಜಾರ ಭಾರತದಲ್ಲಿ ಆಡಿರುವ 32 ಪಂದ್ಯಗಳಲ್ಲಿ 64.12ರ ಬ್ಯಾಟಿಂಗ್ ಸರಾಸರಿಯಲ್ಲಿ 3014 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 13 ಅರ್ಧಶತಕಗಳು ಸೇರಿವೆ.
ಇನ್ನು ಕಾಕತಾಳೀಯವೆಂಬಂತೆ ಸಚಿನ್ ತೆಂಡೂಲ್ಕರ್ ಸಹ 3 ಸಾವಿರ ಟೆಸ್ಟ್ ರನ್ ಪೂರೈಸಿದ್ದು ನಾಗ್ಪುರ ಮೈದಾನದಲ್ಲೇ ಸಿಡಿಸಿದ್ದರು.