ಹತ್ತೇ ದಿನದಲ್ಲಿ ಅಗ್ರ ಸ್ಥಾನ ಮರಳಿ ಪಡೆದ ಕೊಹ್ಲಿ, ಸಚಿನ್ ಪಾಯಿಟ್ಸ್ ಗಿಂತ ಮುಂದು!

Published On :
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಮರಳಿದ್ದು, ವೃತ್ತಿ ಜೀವನದ ಅತ್ಯುತ್ತಮ ರೇಟಿಂಗ್ಸ್ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿದ್ದಾರೆ.
ಈಗ್ಗೇ ಕೇವಲ ಹತ್ತು ದಿನಗಳ ಹಿಂದಷ್ಟೇ ಅಗ್ರ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರನ್ನು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ 2ನೇ ಸ್ಥಾನಕ್ಕೆ ತಳ್ಳಿ ತಾವು ಅಗ್ರ ಸ್ಥಾನಕ್ಕೇರಿದ್ದರು. ಇದಾದ ಕೇವಲ ಹತ್ತು ದಿನದಲ್ಲಿ ಕೊಹ್ಲಿ ಮತ್ತೊಂದು ಅದ್ಬುತ ಪ್ರದರ್ಶನದ ಮೂಲಕ ತಾವು ಕಳೆದುಕೊಂಡಿದ್ದ ಅಗ್ರ ಸ್ಥಾನವನ್ನು ಮರಳಿ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟ್ಸಮನ್ ಗಳ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಮತ್ತೆ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ನಿನ್ನೆಯ ಪಂದ್ಯದಲ್ಲಿನ ಅದ್ಬುತ ಪ್ರದರ್ಶನ ಮೂಲಕ ಕೊಹ್ಲಿ ಅಂಕಗಳೊಂದಿಗೆ ತಮ್ಮ ಬ್ಯಾಟಿಂಗ್ ರೇಟಿಂಗ್ಸ್ ಅನ್ನು ಕೂಡ ಏರಿಕೆ ಮಾಡಿಕೊಂಡಿದ್ದಾರೆ. ಕಿವೀಸ್ ಪಡೆಯ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 263 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಅದ್ಬುತ ಪ್ರದರ್ಶನದೊಂದಿಗೆ ಕೊಹ್ಲಿ ತಮ್ಮ ರೇಟಿಂಗ್ಸ್ ಅನ್ನು 889ಕ್ಕೆ ಏರಿಕೆ ಮಾಡಿಕೊಂಡಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿದ್ದಾರೆ. ಸಚಿನ್ 1998ರಲ್ಲಿ ಒಟ್ಟು 887 ರೇಟಿಂಗ್ಸ್ ಅನ್ನು ಹೊಂದಿದ್ದರು. ಇದು ಈ ವರೆಗಿನ ಬ್ಯಾಟ್ಸಮನ್ ಒಬ್ಬರ ಗರಿಷ್ಟ ರೇಟಿಂಗ್ಸ್ ಅಂಕಗಳಾಗಿತ್ತು. ಇದೀಗ ಕೊಹ್ಲಿ ಇದನ್ನೂ ಧೂಳಿಪಟ ಮಾಡಿದ್ದಾರೆ.
ಇನ್ನು ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ತಮ್ಮ ರೇಟಿಂಗ್ಸ್ ಅನ್ನು ಹೆಚ್ಚಿಸಿಕೊಂಡಿದ್ದು, ಕಿವೀಸ್ ವಿರುದ್ಧ ಅದ್ಬುತ ಪ್ರದರ್ಶನ ನೀಡಿ 174 ರನ್ ಗಳನ್ನು ಸಿಡಿಸಿದ್ದ ರೋಹಿತ್ ಇದೀಗ ತಮ್ಮ ಬ್ಯಾಟಿಂಗ್ ರೇಟಿಂಗ್ಸ್ ಅನ್ನು 799 ಅಂಕಗಳಿಗೆ ಏರಿಸಿಕೊಂಡಿದ್ದಾರೆ. ಅ ಮೂಲಕ ರ್ಯಾಂಕಿಂಗ್ ಪಟ್ಟಿಯಲ್ಲಿ 7 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಂತೆಯೇ ಪಟ್ಟಿಯಲ್ಲಿ ಮಾಜಿ ನಾಯಕ ಧೋನಿ ಕೂಡ 1 ಸ್ಥಾನ ಮೇಲೇರಿದ್ದು, ಈಹಿಂದೆ 12ನೇ ಸ್ಥಾನದಲ್ಲಿದ್ದ ಧೋನಿ ಇದೀಗ 11ಕ್ಕೆ ಬಡ್ತಿ ಪಡೆದಿದ್ದಾರೆ.
ಇನ್ನು ಬೌಲರ್ ಗಳ ರ್ಯಾಂಕಿಂಗ್ ಅನ್ನು ಕೂಡ ಐಸಿಸಿ ಪ್ರಕಟಿಸಿದ್ದು, ಪಾಕಿಸ್ತಾನದ ಉದಯೋನ್ಮುಖ ಬೌಲಿಂಗ್ ಪ್ರತಿಭೆ ಹಸನ್ ಅಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಭಾರತದ ಜಸ್ ಪ್ರೀತ್ ಬುಮ್ರಾ ವೃತ್ತಿ ಜೀವನ ಅತ್ಯುನ್ನತ ಮೂರನೇ ಸ್ಥಾನಕ್ಕೇರಿದ್ದಾರೆ. ಇನ್ನು ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್ ನಲ್ಲಿ ಭಾರತ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಅಂಕಗಳಿಕೆಯಲ್ಲಿ ಏರಿಕೆ ಕಂಡಿದೆ. ಒಟ್ಟು 125 ಅಂಕಗಳನ್ನು ಖಾತೆಯಲ್ಲಿರಿಸಿಕೊಂಡಿರುವ ಭಾರತ ಅಗ್ರಸ್ಥಾನದಲ್ಲಿದ್ದು, 111 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiSachin Tendulkarಸಚಿನ್ ತೆಂಡೂಲ್ಕರ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿಐಸಿಸಿಏಕದಿನ ರ್ಯಾಂಕಿಂಗ್ICCOne Day Ranking
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


