ನಿಜವಾಯ್ತು ಮೈಕೆಲ್ ವಾನ್ ಭವಿಷ್ಯ: 2ನೇ ಟೆಸ್ಟ್ ಸೋಲಿಗೆ ಕ್ಯಾಪ್ಟನ್ ಕೊಹ್ಲಿ, ರವಿಶಾಸ್ತ್ರಿ ಕಾರಣಾನ?

ಇಂಗ್ಲೆಂಡ್ ತಂಡ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದಂತೆ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ವಾನ್ ಅಭಿಪ್ರಾಯ ಪಟ್ಟಂತೆ ಪಂದ್ಯದ ಸೋಲಿಗೆ ನಿಜವಾಗಿಯೂ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಕಾರಣವೇ?
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪರ್ತ್: ಈ ಹಿಂದೆ ಇಂಗ್ಲೆಂಡ್ ತಂಡ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದಂತೆ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ವಾನ್ ಅಭಿಪ್ರಾಯ ಪಟ್ಟಂತೆ ಪಂದ್ಯದ ಸೋಲಿಗೆ ನಿಜವಾಗಿಯೂ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಕಾರಣವೇ?
ಯಾವುದೇ ಪಂದ್ಯದ ಸೋಲು ಆ ತಂಡದ ಆಟಗಾರರ ಪ್ರದರ್ಶನದ ಆಧಾರವಾಗಿರುತ್ತದೆ. ಪ್ರಸ್ತುತ ಟೀಂ ಇಂಡಿಯಾ ಸೋಲಿಗೆ ನಿಜಕ್ಕೂ ಬ್ಯಾಟ್ಸಮನ್ ಗಳ ವೈಫಲ್ಯವೇ ಕಾರಣ. ಆಸಿಸ್ ನೀಡಿದ್ದ 287 ರನ್ ಗಳ ಸವಾಲು ಅಸಾಧ್ಯವಾದ ಗುರಿಯೇನೂ ಆಗಿರಲಿಲ್ಲ. ಅಲ್ಲದೆ ಭಾರತದ ಬಳಿ ಗುರಿ ಮುಟ್ಟಲು ಸಾಕಷ್ಟು ಸಮಯವಕಾಶವಿತ್ತು. ಹೀಗಿದ್ದೂ ತಂಡ ಸೋತಿದೆ. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಹಮದ್ ಶಮಿ ಹಾಗೂ ಜಸ್ ಪ್ರೀತ್ ಬುಮ್ರಾ ಕಟ್ಟಿಹಾಕದೇ ಹೋಗಿದಿದ್ದರೆ ಆಸಿಸ್ ನ ಮೊತ್ತ ಇನ್ನೂ ಹಿಗ್ಗುತ್ತಿತ್ತು. 3ನೇ ದಿನದಾಟದ ಅಂತ್ಯಕ್ಕೆ 4ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡಿದ್ದ ಆಸಿಸ್ ಪಡೆ 4ನೇ ದಿನದ ಭೋಜನ ವಿರಾಮದವರೆಗೂ ವಿಕೆಟ್ ಕಳೆದುಕೊಂಡಿರಲಿಲ್ಲ.
ವಿಕೆಟ್ ಪಡೆಯಲು ಭಾರತ ಮಾಡಿದ್ದ ಎಲ್ಲ ತಂತ್ರಗಳೂ ವಿಫಲವಾಗಿತ್ತು. ಆದರೆ ಭೋಜನ ವಿರಾಮದ ಬಳಿಕ ಶಮಿ ಮ್ಯಾಜಿಕ್ ಮಾಡಿದ್ದರು. ವಿಕೆ್ಟ್ ಗಳನ್ನೇ ನೀಡದ ಆಸಿಸ್ ಪಡೆ ತರಗೆಲೆಗಳಂತೆ ಪಟಪಟನೇ ವಿಕೆಟ್ ಕಳೆದುಕೊಂಡು ಭಾರತಕ್ಕೆ 287 ರನ್ ಗಳ ಗುರಿ ನೀಡಿತು. ಆದರೆ ಈ ಸಾಧಾರಣ ಗುರಿ ಬೆನ್ನುಹತ್ತಿದ ಭಾರತೀಯ ಬ್ಯಾಟ್ಸಮನ್ ಗಳು ಮಾತ್ರ ಎದುರಾಳಿ ಬೌಲರ್ ಗಳ ದಾಳಿಗೆ ಪತರಗುಟ್ಟಿ ಹೋಗಿದ್ದರು. ಅಗ್ರ ಕ್ರಮಾಂಕದ ನೀರಸ ಪ್ರದರ್ಶನ 2ನೇ ಇನ್ನಿಂಗ್ಸ್ ನಲ್ಲೂ ಮುಂದುವರೆದಿದ್ದು, ಹೋರಾಟ ರಹಿತ ಕೆಳ ಕ್ರಮಾಂಕದ ಬ್ಯಾಟ್ಸಮನ್ ಗಳ ಆಟ ತಂಡದ ಸೋಲಿಗೆ ಕಾರಣ.
ಪ್ರಮುಖವಾಗಿ ತಂಡದಲ್ಲಿ ಕೆಳಕ್ರಮಾಂಕದಲ್ಲಿ ರವೀಂದ್ರ ಜಡೇಜಾ ರಂತಹ ಆಲ್ ರೌಂಡರ್ ಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದೇ ಮಾತನ್ನು ಈ ಹಿಂದೆ ಮೈಕಲ್ ವಾನ್ ಸಹ ಹೇಳಿ ಭಾರತ ತಂಡ ಸೋಲುತ್ತದೆ ಎಂದು ಹೇಳಿದ್ದರು. ಈ ಹಿಂದೆ ಪರ್ತ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ್ದ ವಾನ್ ಇದೇ ಪಿಚ್ ಕುರಿತಂತೆ ಹಾಗೂ ಟಾಸ್ ಬಳಿಕ ಕೊಹ್ಲಿ ಕೈಗೊಂಡ ನಿರ್ಧಾರವನ್ನು ಟೀಕಿಸಿದ್ದರು. ಮೊದಲ ಟೆಸ್ಟ್ ನಲ್ಲಿ ಸೋಲು ಕಂಡಿರುವ ಆಸಿಸ್ ಪಡೆ 2ನೇ ಟೆಸ್ಟ್ ನಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂದು ಪಿಚ್ ಮೇಲೆ ಗ್ರೀನ್ ಟಾಪ್ ಹಾಕುವಂತೆ ಪಿಚ್ ಕ್ಯುರೇಟರ್ ಗೆ ಸೂಚಿಸಿತ್ತು. ಅದರಂತೆ ಪಿಚ್ ಕ್ಯುರೇಟರ್ ಪಿಚ್ ಮೇಲೆ ಗ್ರೀನ್ ಟಾಪ್ ಹೊದಿಸಿದ್ದಾರೆ. ಆದರೆ ಈ ಪಿಚ್ ನ ಮರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಾಗೂ ಕೋಚ್ ರವಿಶಾಸ್ತ್ರಿ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದ್ದರು.
ಅಂತೆಯೇ ಪಿಚ್ ಮರ್ಮ ಅರ್ಥವಾಗಿದ್ದರೆ ಕೊಹ್ಲಿ ಖಂಡಿತಾ ರವೀಂದ್ರ ಜಡೇಜಾರಂತಹ ಅನುಭವಿ ಸ್ಪಿನ್ನರ್ ಮತ್ತು ಆಲ್ ರೌಂಡರ್ ರನ್ನು ತಂಡದಿಂದ ಕೈ ಬಿಡುತ್ತಿರಲಿಲ್ಲ. ಕೊಹ್ಲಿ ಈ ನಿರ್ಧಾರ ಖಂಡಿತಾ ನನಗೆ ಅಚ್ಚರಿ ಮೂಡಿಸಿದೆ. ಕೇವಲ ಸ್ಪಿನ್ನರ್ ಆಗಿ ಮಾತ್ರವಲ್ಲ ಜಡೇಜಾ ಓರ್ವ ಆಲ್ ರೌಂಡರ್ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ನನ್ನ ಪ್ರಕಾರ 8ನೇ ಕ್ರಮಾಂಕಕ್ಕೆ ಜಡೇಜಾ ಸೂಕ್ತ ಆಟಗಾರ. ಆದರೆ ಜಡೇಜಾ ಅನುಪಸ್ಥಿತಿ ಖಂಡಿತಾ ಟೀಂ ಇಂಡಿಯಾವನ್ನು ಕಾಡಲಿದೆ ಎಂದು ವಾನ್ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com