ದುಬೈ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ತಂಡದ ಆಟಗಾರ ಕ್ಯಾಮರಾನ್ ಬೆನ್ ಕ್ರಾಫ್ಟ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ.
ಸ್ಮಿತ್ ಗೆ ಒಂದು ಪಂದ್ಯ ನಿಷೇಧ ಹಾಗೂ ಶೇ.100ರಷ್ಟು ದಂಡ ವಿಧಿಸಿದರೆ, ಕ್ಯಾಮರಾನ್ ಬೆನ್ ಕ್ರಾಫ್ಟ್ ಗೆ ಪಂದ್ಯದ ಶುಲ್ಕದ ಶೇ. 75ರಷ್ಟು ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್ ಗಳ ಶಿಕ್ಷೆಯನ್ನು ನೀಡಿದೆ.
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಹ ಸ್ಮಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದು, ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿದೆ.
ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟದ ಚಹಾ ವಿರಾಮಕ್ಕೆ ಸ್ವಲ್ಪ ಸಮಯ ಮೊದಲು ಈ ಘಟನೆ ನಡೆದಿತ್ತು.
ಪ್ಯಾಂಟ್ ಜೇಬಿನಿಂದ ಹಳದಿ ಬಣ್ಣದ ವಸ್ತುವನ್ನು ಹೊರ ತೆಗೆಯುವ ಬೆನ್ ಕ್ರಾಫ್ಟ್, ಅದನ್ನು ತಮ್ಮ ಪ್ಯಾಂಟ್ ನ ಒಳಗೆ ಸೊಂಟದ ಭಾಗದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೊ ಮೂಲಕ ಬಹಿರಂಗಗೊಂಡಿತ್ತು.