ನೋಬಾಲ್ ವಿವಾದ: ಧೋನಿ ವಿರುದ್ಧ ಸೆಹ್ವಾಗ್ ಕೆಂಡಾಮಂಡಲ, 2-3 ಪಂದ್ಯ ನಿಷೇಧಿಸಬೇಕಿತ್ತು ಎಂದು ಹೇಳಿದ್ದೇಕೆ?
ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೋಬಾಲ್ ವಿವಾದ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೆಂಡಾಮಂಡಲರಾಗಿದ್ದಾರೆ.
ನವದೆಹಲಿ: ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೋಬಾಲ್ ವಿವಾದ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೆಂಡಾಮಂಡಲರಾಗಿದ್ದಾರೆ.
ಚೆನ್ನೈ ಸೂಪರ್’ಕಿಂಗ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಹಾಕಿದ ಫುಲ್ ಟಾಸ್ ಎಸೆತವನ್ನು ಅಂಪೈರ್ ಉಲ್ಲಾಸ್ ಘಂಡೆ ಮೊದಲು ನೋಬಾಲ್ ನೀಡಿ ಆ ಬಳಿಕ ಲೆಗ್ ಅಂಪೈರ್ ಆಕ್ಷೆನ್’ಫರ್ಡ್ ಜತೆ ಚರ್ಚಿಸಿ ನೋಬಾಲ್ ಅಲ್ಲವೆಂದು ತೀರ್ಮಾನವಿತ್ತರು. ಆಗ ಧೋನಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು.
ಬಳಿಕ ವಿಚಾರಣೆಯಲ್ಲಿ ಧೋನಿ ಪಾರಾಗಿದ್ದರು. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವೀರೇಂದ್ರ ಸೆಹ್ವಾಗ್, 'ಅಂಪೈರ್ ಜತೆ ವಾಗ್ವಾದ ನಡೆಸಿದ ಪ್ರಕರಣದಲ್ಲಿ ಎಂ.ಎಸ್.ಧೋನಿ ಸುಲಭವಾಗಿ ಪಾರಾದರು. ಅವರನ್ನು 2ರಿಂದ 3 ಪಂದ್ಯಗಳಿಗೆ ನಿಷೇಧಿಸಬೇಕಿತ್ತು ಎಂದು ಹೇಳಿದ್ದಾರೆ.
‘ಧೋನಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿತ್ತು. ಎರಡು ಇಲ್ಲವೇ ಮೂರು ಪಂದ್ಯಗಳಿಗೆ ನಿಷೇಧಿಸಬೇಕಿತ್ತು. ಈಗ ಧೋನಿ ಈ ರೀತಿ ಮಾಡಿದ್ದಾರೆ ಎಂದರೆ, ನಾಳೆ ಮತ್ತೊಬ್ಬ ನಾಯಕನೂ ಅದೇ ರೀತಿ ಮಾಡುತ್ತಾನೆ. ಆಗ ಅಂಪೈರ್ ಗಳಿಗೆ ಏನು ಬೆಲೆ ಇರಲಿದೆ' ಎಂದು ಸೆಹ್ವಾಗ್ ಹೇಳಿದ್ದಾರೆ.
ಇನ್ನು ಐಸಿಸಿ ನೀತಿ ಸಂಹಿತೆ ಪ್ರಕಾರ ಅಂಪೈರ್ ನಿರ್ಧಾರ ಪ್ರಶ್ನಿಸಿ ಕಟು ಪದಗಳನ್ನು ಬಳಸಿದರೆ, ಇಲ್ಲವೇ ಅನುಚಿವಾಗಿ ವರ್ತಿಸಿದರೆ ಗರಿಷ್ಠ ಒಂದು ಟೆಸ್ಟ್ ಇಲ್ಲವೇ ಎರಡು ಏಕದಿನ ಪಂದ್ಯಗಳ ಮಟ್ಟಿಗೆ ಆಟಗಾರನ ಮೇಲೆ ನಿಷೇಧ ಹೇರಬಹುದಾಗಿದೆ.