ಟೀಂ ಇಂಡಿಯಾಗೆ ಮತ್ತೋರ್ವ ಬುಮ್ರಾ..!; ಬೆಂಗಳೂರಿನಲ್ಲೇ ಇದ್ದಾನೆ ಜೂನಿಯರ್ ಬುಮ್ರಾ!

ಜಸ್ ಪ್ರೀತ್ ಬುಮ್ರಾ.. ಈ ಹೆಸರು ಕೇಳದ ಭಾರತೀಯ ಕ್ರಿಕೆಟ್ ಅಭಿಮಾನಿಗಳೇ ಇಲ್ಲ.. ಎನ್ನಬಹುದು.. ತಮ್ಮ ಅಚ್ಚರಿಯ ಬೌಲಿಂಗ್ ಶೈಲಿಯಿಂದಲೇ ಬುಮ್ರಾ ಖ್ಯಾತಿ ಗಳಿಸಿದ್ದಾರೆ. ಅಂತಹ ಬುಮ್ರಾ ಮತ್ತೊಬ್ಬರಿದ್ದರೆ...
'ಜೂನಿಯರ್ ಬುಮ್ರಾ' ಮಹೇಶ್ ಕುಮಾರ್
'ಜೂನಿಯರ್ ಬುಮ್ರಾ' ಮಹೇಶ್ ಕುಮಾರ್
Updated on
ಬೆಂಗಳೂರು: ಜಸ್ ಪ್ರೀತ್ ಬುಮ್ರಾ.. ಈ ಹೆಸರು ಕೇಳದ ಭಾರತೀಯ ಕ್ರಿಕೆಟ್ ಅಭಿಮಾನಿಗಳೇ ಇಲ್ಲ.. ಎನ್ನಬಹುದು.. ತಮ್ಮ ಅಚ್ಚರಿಯ ಬೌಲಿಂಗ್ ಶೈಲಿಯಿಂದಲೇ ಬುಮ್ರಾ ಖ್ಯಾತಿ ಗಳಿಸಿದ್ದಾರೆ. ಅಂತಹ ಬುಮ್ರಾ ಮತ್ತೊಬ್ಬರಿದ್ದರೆ...
ಹೌದು.. ಜಸ್ ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿಯಂತೆಯೇ ಬೌಲಿಂಗ್ ಮಾಡುವ ಮತ್ತೋರ್ವ ಆಟಗಾರನನ್ನು ಹಾಲಿ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಶೋಧಿಸಲಾಗಿದೆ. ಅದೂ ಕೂಡ ಬೇರೆಲ್ಲೂ ನಮ್ಮದೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.. 
ಬುಮ್ರಾ ತದ್ರೂಪು ಬೌಲಿಂಗ್ ಶೈಲಿಯ ವೇಗಿಯ ಹೆಸರು ಮಹೇಶ್ ಕುಮಾರ್ ಪಿ... ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ಸ್ ಅಭ್ಯಾಸದಲ್ಲಿ ತೊಡಗಿರುವಾಗ ಇದೇ ಮಹೇಶ್ ಕುಮಾರ್ ಬೌಲಿಂಗ್ ಮಾಡುತ್ತಿದ್ದಾರೆ. ಮಹೇಶ್ ಕುಮಾರ್ ಅವರ ಬೌಲಿಂಗ್ ಶೈಲಿಯನ್ನು ಗಮನಿಸಿದ ಕ್ರೀಡಾಭಿಮಾನಿಗಳು ಇವರು ಬುಮ್ರಾ ಎಂದು ಸಾಕಷ್ಟು ಬಾರಿ ಕನ್ ಫ್ಯೂಸ್ ಕೂಡ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹೇಶ್ ಕುಮಾರ್ ಬೆಂಗಳೂರಿನಲ್ಲಿ ಆರ್ ಸಿಬಿ ತಂಡದ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.
ದೊಡ್ಡ ಬಳ್ಳಾಪುರ ಮೂಲದವರಾದ ಮಹೇಶ್ ಕುಮಾರ್ ಆರ್ ಸಿಬಿ ತಂಡ ಬೆಂಗಳೂರಿನಲ್ಲಿದ್ದರೆ ಅಲ್ಲಿಂದಲೇ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಅದೂ ಕೂಡ ಆರ್ ಸಿಬಿ ತಂಡ ನೆಟ್ಸ್ ಗೆ ಬರುವ ಮೊದಲೇ ಮಹೇಶ್ ಕುಮಾರ್ ದೊಡ್ಡ ಬಳ್ಳಾಪುರದಿಂದ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಇದು ಅವರಿಗೆ ಕ್ರಿಕೆಟ್ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.
ಇನ್ನು ಎಂಜಿನಿಯರಿಂಗ್ ಪದವೀಧರರಾಗಿರುವ ಮಹೇಶ್ ಕುಮಾರ್ ಮಲ್ಟಿ ನ್ಯಾಶನಲ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಿ ಲಕ್ಷ ಲಕ್ಷ ಸಂಪಾದಿಸಬಹುದಿತ್ತು. ಆದರೆ ಅವರ ಕ್ರಿಕೆಟ್ ಪ್ರೀತಿ ಅವರನ್ನು ಕ್ರೀಡಾಂಗಣಕ್ಕೆ ಎಳೆದು ತಂದಿದೆ. ಈ ಬಗ್ಗೆ ಮಾತನಾಡಿರುವ ಮಹೇಶ್, ನಾನು ಎಂಜಿನಿಯರಿಂಗ್ ಪದವಿ ಪಡೆಯಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಹೀಗಾಗಿ ಅವರ ಆಸೆಯಂತೆ ಪದವಿ ಪಡೆದೆ. ಇದೀಗ ನನ್ನ ಆಸೆಯಂತೆ ಕ್ರಿಕೆಟ್ ಆಡುತ್ತಿದ್ದೇನೆ. ನಾನು ಉತ್ತಮ ಕ್ರಿಕೆಟರ್ ಆಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು ಎಂಬುದು ನನ್ನ ಆಸೆ ಎಂದು ಮಹೇಶ್ ತಮ್ಮ ಮನದಾಳದ ಮಾತು ಹೇಳಿಕೊಂಡಿದ್ದಾರೆ.
ಅಲ್ಲದೆ ಆರ್ ಸಿಬಿ ತಂಡದ ನೆಟ್ಸ್ ಅಭ್ಯಾಸದಲ್ಲಿ ನಾನು ಪಾಲ್ಗೊಳ್ಳುತ್ತಿರುವುದರಿಂದಲೇ ನನ್ನನು ಸಾಕಷ್ಟು ಮಂದಿ ಗುರುತಿಸುತ್ತಿದ್ದಾರೆ. ಈ  ಹಿಂದೆ ಮುಂಬೈ ಇಂಡಿಯನ್ಸ್ ತಂಡ ಇಲ್ಲಿಗೆ ಆಗಮಿಸಿದ್ದಾಗಲೂ ಅವರಿಗೂ ಬೌಲಿಂಗ್ ಮಾಡುತ್ತಿದ್ದೆ. ನನ್ನ ಬೌಲಿಂಗ್ ಶೈಲಿ ಬುಮ್ರಾ ರೀತಿಯಲ್ಲಿದೆ ಎಂದು ಆ ತಂಡದ ಆಟಗಾರರು ಹೇಳಿದ್ದರು. ಅಲ್ಲದೆ ನೆಟ್ಸ್ ವೇಳೆ ಸಾಕಷ್ಟು ಬಾರಿ ನನ್ನ ಬೌಲಿಂಗ್ ಪರದೆ ಮೇಲೆ ಪ್ರಸಾರವಾಗಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ನಿಮಗೆ ಇಷ್ಟದ ಐಪಿಎಲ್ ತಂಡದ ಕುರಿತು ಹೇಳಿ ಎಂದಾಗ ಮಹೇಶ್ ಕುಮಾರ್, ಕೆಕೆಆರ್ ತಂಡದ ಶಿಸ್ತು ಇಷ್ಟ ಎಂದು ಹೇಳಿದ್ದಾರೆ. ಈ ಹಿಂದೆ ನಾನು ಕೆಕೆಆರ್ ತಂಡದ ನೆಟ್ಸ್ ನಲ್ಲಿ ಪಾಲ್ಗೊಂಡಿದ್ದಾಗ ಆ ತಂಡದ ಶಿಸ್ತು ಇಷ್ಟವಾಯಿತು. ತಂಡದ ಪ್ರಧಾನ ಕೋಚ್ ಜಾಕ್ ಕಾಲಿಸ್ ನನ್ನ ಬೌಲಿಂಗ್ ಶೈಲಿ ನೋಡಿ ಮುಂದಿನ ಆವೃತ್ತಿಯಲ್ಲಿ ನೀನು ಕಣಕ್ಕಿಳಿಯಬಹುದು ಎಂದು ಶ್ಲಾಘಿಸಿದ್ದರು ಎಂದು ಹೇಳಿದ್ದಾರೆ.
ಕೇವಲ ಐಪಿಎಲ್ ಮಾತ್ರವಲ್ಲ, ಈ ಹಿಂದೆ ಟೀಂ ಇಂಡಿಯಾ ಆಟಗಾರರಿಗೂ ಮಹೇಶ್ ಕುಮಾರ್ ಬೌಲಿಂಗ್ ಮಾಡಿದ್ದರು. ಐಪಿಎಲ್ ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ವೇಳೆ ಮಹೇಶ್ ಕುಮಾರ್ ನೆಟ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಬೌಲಿಂಗ್ ಮಾಡಿದ್ದರು. ಈ ವೇಳೆ ಕೋಚ್ ರವಿಶಾಸ್ತ್ರಿ ಮಹೇಶ್ ರನ್ನು ಜೂನಿಯರ್ ಬುಮ್ರಾ ಎಂದು ಶ್ಲಾಘಿಸಿದ್ದರಂತೆ.
ಒಟ್ಟಾರೆ ಐಪಿಎಲ್ ಟೂರ್ನಿ ಮೂಲಕ ಪ್ರತೀ ವರ್ಷ ಹೊಸ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದ್ದು, ಈ ಮೂಲಕ ಮಹೇಶ್ ಕುಮಾರ್ ಕೂಡ ಟೀಂ ಇಂಡಿಯಾದ ಭವಿಷ್ಯದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲಿ ಎಂಬುದು ನಮ್ಮ ಆಶಯ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com