

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಬಳಿಕ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ವಿದಾಯ ಹೇಳುತ್ತಾರಾ..? ಇಂತಹುದೊಂದು ಪ್ರಶ್ನೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು..ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ವೇಳೆ ಈ ಪ್ರಶ್ನೆ ಎದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಭಾನುವಾರ ದುಬೈನಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಎದುರು ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ನ್ಯೂಜಿಲೆಂಡ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ತಮ್ಮ ಕೋಟಾದ 10 ಓವರ್ ಎಸೆದು ಕೇವಲ 3ರ ಸರಾಸರಿಯಲ್ಲಿ ಕೇವಲ 30 ರನ್ ನೀಡಿ ಟಾಮ್ ಲ್ಯಾಥಮ್ ಅವರ ಪ್ರಮುಖ ವಿಕೆಟ್ ಪಡೆದರು.
ಮೈದಾನದಲ್ಲೇ ಬಿಗಿದಪ್ಪಿದ ಕೊಹ್ಲಿ
ಇನ್ನು ತಮ್ಮ ಕೋಟಾದ ಓವರ್ ಗಳ ಮುಕ್ತಾಯವಾಗುತ್ತಲೇ ರವೀಂದ್ರ ಜಡೇಜಾ ತಮ್ಮ ಫೀಲ್ಡಿಂಗ್ ಪಾಯಿಂಟ್ ನತ್ತ ಹೆಜ್ಜೆ ಹಾಕಿದರು. ಈ ವೇಳೆ ಮಾರ್ಗ ಮಧ್ಯೆ ಎದುರು ಬಂದ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾರನ್ನು ಬಿಗಿದಪ್ಪಿ ಅವರ ಬೌಲಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು.
ನಿವೃತ್ತಿ ಕುರಿತು ಚರ್ಚೆ
ಅತ್ತ ಕೊಹ್ಲಿ ರವೀಂದ್ರ ಜಡೇಜಾರನ್ನು ಬಿಗಿದಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇತ್ತ ರವೀಂದ್ರ ಜಡೇಜಾರ ನಿವೃತ್ತಿ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ರವೀಂದ್ರ ಜಡೇಜಾ ನಿವೃತ್ತಿಗೆ ನಿರ್ಧರಿಸಿದ್ದು ಇದೇ ಕಾರಣಕ್ಕೆ ಇಂದು ಅವರ ಕೊನೆಯ ಏಕದಿನ ಪಂದ್ಯವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾರನ್ನು ಬಿಗಿದಪ್ಪಿ ಶ್ಲಾಘಿಸಿದ್ದಾರೆ ಎನ್ನಲಾಗಿದೆ. ಭಾರತದ 2024 ರ ಟಿ 20 ವಿಶ್ವಕಪ್ ಗೆಲುವಿನ ನಂತರ ಟಿ20 ಐ ಸ್ವರೂಪದಿಂದ ನಿವೃತ್ತರಾದ ನಂತರ ಜಡೇಜಾ ಪ್ರಸ್ತುತ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.
ಇದೀಗ ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಜಡೇಜಾ ಏಕದಿನ ಕ್ರಿಕೆಟ್ ಗೂ ವಿದಾಯ ಹೇಳುತ್ತಾರೆಯೇ ಎಂಬ ಪ್ರಶ್ನೆ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ. ರವೀಂದ್ರ ಜಡೇಜಾ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಏಕದಿನ ಕ್ರಿಕೆಟ್ ವಿದಾಯ ಹೇಳಲಿದ್ದಾರೆ ಎಂಬ ಚರ್ಚೆಗಳು ಕೂಡ ವ್ಯಾಪಕವಾಗಿದೆ.