
ಮಂಗಳವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ರಿಷಭ್ ಪಂತ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.
ಐಪಿಎಲ್‌ನ ಸ್ಲೋ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯ ಅಡಿಯಲ್ಲಿ ತಂಡದ ಮೂರನೇ ಅಪರಾಧ ಇದಾಗಿರುವುದರಿಂದ, ರಿಷಭ್ ಪಂತ್ ಅವರಿಗೆ 30 ಲಕ್ಷ ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ XI ನ ಭಾಗವಾಗಿದ್ದ ಎಲ್ಲ ಆಟಗಾರರಿಗೆ ತಲಾ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸುವಂತೆ ಹೇಳಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳ ಸೋಲಿನೊಂದಿಗೆ, ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು. ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದ್ದ ಮತ್ತು ನಂತರ ಕಳೆದ ಆರು ಪಂದ್ಯಗಳಲ್ಲಿ ಒಂದೇ ಒಂದರಲ್ಲಿ ಗೆಲುವು ಸಾಧಿಸಿದ್ದರಿಂದ ಪ್ಲೇಆಫ್ ಸ್ಪರ್ಧೆಯಿಂದ ಹೊರಗುಳಿದಿತ್ತು.
ಆರ್‌ಸಿಬಿ ತಂಡದ ನಾಯಕ ಜಿತೇಶ್ ಶರ್ಮಾ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 18ನೇ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.
ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದರೆ, ಆರ್‌ಸಿಬಿ ಈ ಗೆಲುವಿನೊಂದಿಗೆ ಎರಡನೇ ಸ್ಥಾನಕ್ಕೆ ಏರಿತು. ಆರ್‌ಸಿಬಿ ಗುರುವಾರ (ಮೇ 29) ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್‌ನೊಂದಿಗೆ ಸೆಣಸಲಿದೆ. ಮೂರನೇ ಸ್ಥಾನಕ್ಕೆ ಕುಸಿದ ಗುಜರಾತ್ ಟೈಟಾನ್ಸ್ ಶುಕ್ರವಾರ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಅವರ ಅಜೇಯ 107 ರನ್‌ಗಳ ಜೊತೆಯಾಟದಿಂದ ಆರ್‌ಸಿಬಿ ಟೂರ್ನಿಯ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿತು. ಗಮನಾರ್ಹವಾಗಿ, ಆರ್‌ಸಿಬಿ 200ಕ್ಕೂ ಹೆಚ್ಚು ರನ್ ಗುರಿಯನ್ನು ಬೆನ್ನಟ್ಟಿದ್ದು ಇದು ಕೇವಲ ಮೂರನೇ ಬಾರಿಯಾಗಿದೆ.
Advertisement