'ನೋಡೋರ್ ಗಿಂತ ಆಡೋರ್ ಸಂಖ್ಯೆನೇ ಜಾಸ್ತಿ ಇದೆ': ಪ್ರೇಕ್ಷಕರೇ ಇಲ್ಲದೇ ಟೀಕೆಗೆ ಗುರಿಯಾದ Pakistan vs West Indies ಟೆಸ್ಟ್ ಪಂದ್ಯ!

ಬುಧವಾರ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಕಾಣಿಸದಿರುವುದು ಕ್ರಿಕೆಟ್ ಕಾಮೆಂಟೇಟರ್ ಹರ್ಷಾ ಭೋಗ್ಲೆ ಅವರಿಗೆ ಅಚ್ಚರಿ ಮೂಡಿಸಿತು.
Pakistan vs West Indies Test Match Receives Brutal Verdict
ಪಾಕಿಸ್ತಾನ ಮತ್ತು ವಿಂಡೀಸ್ ನಡುವಿನ ಟೆಸ್ಟ್ ಪಂದ್ಯ
Updated on

ಟರುಬಾ: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಪ್ರೇಕ್ಷಕರೇ ಇಲ್ಲದೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಮೈದಾನದಲ್ಲಿನ ಪ್ರೇಕ್ಷಕರಿಗಿಂತ ಪಂದ್ಯವನ್ನಾಡುತ್ತಿದ್ದ ಆಟಗಾರರ ಸಂಖ್ಯೆಯೇ ಹೆಚ್ಚಿತ್ತು ಎನ್ನಲಾಗಿದೆ.

ಹೌದು.. ಬುಧವಾರ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಕಾಣಿಸದಿರುವುದು ಕ್ರಿಕೆಟ್ ಕಾಮೆಂಟೇಟರ್ ಹರ್ಷಾ ಭೋಗ್ಲೆ ಅವರಿಗೆ ಅಚ್ಚರಿ ಮೂಡಿಸಿತು.

ಪಾಕಿಸ್ತಾನ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು. ಆದರೆ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಕೊರತೆ ಪ್ರಮುಖ ಚರ್ಚೆಯ ವಿಷಯವಾಯಿತು.

ಇದೇ ಮೈದಾನದಲ್ಲಿ ಹಿಂದೆ ತಾವು ಕ್ರಿಕೆಟ್ ವೀಕ್ಷಿಸಿದ್ದಾಗ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದನ್ನು ನೆನಪಿಸಿಕೊಂಡ ಭೋಗ್ಲೆ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮೈದಾನದಲ್ಲಿ ಆಡುತ್ತಿರುವ ಆಟಗಾರರಿಗಿಂತ ಗ್ಯಾಲರಿಯಲ್ಲಿ ಕುಳಿತಿರುವ ಅಭಿಮಾನಿಗಳ ಸಂಖ್ಯೆಯೇ ಕಡಿಮೆಯಿದೆ ಎಂದು ಅವರು ಗಮನಸೆಳೆದರು.

Pakistan vs West Indies Test Match Receives Brutal Verdict
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನನ್ನು ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ ಪಾಕಿಸ್ತಾನ!

ಹರ್ಷ ಭೋಗ್ಲೆ ಹೇಳಿದ್ದೇನು?

“ನಾನು ಕ್ವೀನ್ಸ್ ಪಾರ್ಕ್ ಓವಲ್‌ಗೆ ಹೋಗಿದ್ದೇನೆ. ಉತ್ಸಾಹಭರಿತ ಪ್ರೇಕ್ಷಕರಿಂದ ಕ್ರೀಡಾಂಗಣ ತುಂಬಿದ್ದಾಗ ಅದೊಂದು ಅದ್ಭುತ ದೃಶ್ಯವಾಗಿತ್ತು. ಈಗ ನಾನು ಟೆಸ್ಟ್ ಪಂದ್ಯವನ್ನು ನೋಡುತ್ತಿದ್ದೇನೆ. ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿರುವವರಿಗಿಂತ ಮೈದಾನದಲ್ಲಿ ಆಡುತ್ತಿರುವವರೇ ಹೆಚ್ಚು ಎಂದು ಭೋಗ್ಲೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕ್ ಗೆ ಮೊದಲ ಸರಣಿ ಜಯ

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ತವರಿನ ಹೊರಗೆ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಸತತ ಎಂಟು ಸೋಲುಗಳನ್ನು ಕಂಡಿದ್ದ ಪಾಕಿಸ್ತಾನ, ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೋಲಿನ ಸರಪಳಿಗೆ ಅಂತ್ಯ ಹಾಡಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಅಬ್ದುಲ್ಲಾ ಶಫೀಕ್ ಹಾಗೂ ನಾಯಕನಾಗಿ ಮರುನೇಮಕಗೊಂಡ ಬಳಿಕ ಆಡಿದ ಮೊದಲ ಸರಣಿಯಲ್ಲಿರುವ ಬಾಬರ್ ಅಜಂ, ತಲಾ 24 ರನ್‌ಗಳ ಅಜೇಯ ಆಟದೊಂದಿಗೆ ಪಾಕಿಸ್ತಾನವನ್ನು 77-2ಕ್ಕೆ ಮುನ್ನಡೆಸಿದರು. ಎರಡನೇ ಟೆಸ್ಟ್‌ನ ನಾಲ್ಕನೇ ದಿನ ಮಧ್ಯಾಹ್ನದ ಊಟದ ಬಳಿಕವೇ ಪ್ರವಾಸಿ ಪಾಕಿಸ್ತಾನ ಗೆಲುವಿನ ಗುರಿ ತಲುಪಿತು.

ಎಡಗೈ ಸ್ಪಿನ್ನರ್ ಜೋಮೆಲ್ ವಾರಿಕನ್ ಎಸೆತದಲ್ಲಿ ಬಾಬರ್ ಅಜಂ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗೆಲುವಿನ ಗುರಿಯನ್ನು ಪೂರ್ಣಗೊಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ವಾರಿಕನ್ 6 ವಿಕೆಟ್‌ಗಳ ಗೊಂಚಲು ಪಡೆದಿದ್ದು, ಪಾಕಿಸ್ತಾನದ ಮುನ್ನಡೆಯನ್ನು ಕೇವಲ 43 ರನ್‌ಗಳಿಗೆ ಸೀಮಿತಗೊಳಿಸಿದ್ದರು.

ಇದಕ್ಕೂ ಮೊದಲು ಟರುಬಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 90 ರನ್‌ಗಳಿಂದ ಗೆಲುವು ಸಾಧಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ಕ್ವೀನ್ಸ್ ಪಾರ್ಕ್ ಓವಲ್‌ನ ಸವಾಲಿನ, ಸವೆತಕ್ಕೊಳಗಾದ ಪಿಚ್‌ನಲ್ಲಿ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ಅಲಿ ಉಸ್ಮಾನ್ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದರು. ಇವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ 2000ರ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಅಜೇಯ ದಾಖಲೆ ಮುಂದುವರಿಸಿತು.

ಬುಧವಾರ ಜಯದತ್ತ ಸಾಗುತ್ತಿದ್ದ ಪಾಕಿಸ್ತಾನಕ್ಕೆ ಇಮಾಮ್-ಉಲ್-ಹಕ್ ವಿಕೆಟ್ ಕಳೆದುಕೊಂಡಿತು. ಜಯ್ಡನ್ ಸೀಲ್ಸ್ ಅವರ ಮೊದಲ ಓವರ್‌ನಲ್ಲೇ 9 ರನ್ ಗಳಿಸಿದ್ದ ಇಮಾಮ್ ಅವರನ್ನು ಸ್ಲಿಪ್‌ನಲ್ಲಿ ಜಸ್ಟಿನ್ ಗ್ರೀವ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದು ಔಟ್ ಮಾಡಿದರು. ಬಳಿಕ ಅಜಾನ್ ಅವೈಸ್ 18 ರನ್ ಗಳಿಸಿದ್ದಾಗ ಶಮಾರ್ ಜೋಸೆಫ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಆದರೆ ಅಬ್ದುಲ್ಲಾ ಶಫೀಕ್ ಮತ್ತು ಬಾಬರ್ ಅಜಂ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ನಾಲ್ಕು ದಿನಗಳೊಳಗೇ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು.

ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 117 ರನ್‌ಗಳಿಗೆ ಆಲೌಟ್ ಆಗಿ ಪಾಕಿಸ್ತಾನದ ಮುಂದೆ ಕೇವಲ 75 ರನ್‌ಗಳ ಸಾಧಾರಣ ಗುರಿ ನೀಡಿತ್ತು. ಆಫ್-ಬ್ರೇಕ್ ಬೌಲರ್ ಸಾಜಿದ್ 32 ರನ್‌ಗಳಿಗೆ 4 ವಿಕೆಟ್ ಹಾಗೂ ಎಡಗೈ ಸ್ಪಿನ್ನರ್ ಉಸ್ಮಾನ್ 39 ರನ್‌ಗಳಿಗೆ 4 ವಿಕೆಟ್ ಪಡೆದು ಒಟ್ಟು ಎಂಟು ವಿಕೆಟ್‌ಗಳನ್ನು ಹಂಚಿಕೊಂಡರು.

X
Kannada Prabha
www.kannadaprabha.com