

ಬೆಂಗಳೂರು: ಅಹಮದಾಬಾದ್‌ನಲ್ಲಿ ಕಳೆದ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(GT) ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದೆ.
2ನೇ ಬಾರಿ ಚಾಂಪಿಯನ್ ಆದ ಬೆನ್ನಲ್ಲೇ, ಫೈನಲ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಆರ್ ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ಮತ್ತು ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
ಇದರ ಬೆನ್ನಲ್ಲೇ ಟಿಮ್ ಡೇವಿಡ್ ಸಿಗರೇಟ್ ಸೇದುವ ವಿಡಿಯೋ ವೈರಲ್ ಆಗಿದ್ದು, RCB ಸ್ಫೋಟಕ ಬ್ಯಾಟರ್ ಮತ್ತೆ ನಿಯಮ ಉಲ್ಲಂಘಿಸಿದ್ರಾ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಆರ್ ಸಿಬಿ ಗೆಲುವಿನ ನಂತರ ಟಿಮ್ ಡೇವಿಡ್ ಅವರು ಮೈದಾನದಲ್ಲೇ ಸಿಗರೇಟು ಹಚ್ಚಿ ಸಂಭ್ರಮಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ಪ್ರಶಸ್ತಿ ಗೆದ್ದ ನಂತರ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಿಗಾರ್‌ನೊಂದಿಗೆ ಸಂಭ್ರಮಾಚರಣೆ ಮಾಡುವುದು ಸಾಮಾನ್ಯ ಸಂಪ್ರದಾಯವೆಂದು ಪರಿಗಣಿಸಲಾಗಿದೆ. ಅದೇ ರೀತಿ, ಡೇವಿಡ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಾಯಿಯಲ್ಲಿ ಸಿಗಾರ್ ಮತ್ತು ಟ್ರೋಫಿಯೊಂದಿಗೆ ಫಿಲ್ ಸಾಲ್ಟ್‌ನೊಂದಿಗೆ ಪೋಸ್ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೊ ವೈರಲ್ ಆದ ನಂತರ, ಐಪಿಎಲ್ ಸಂಘಟಕರು ಡೇವಿಡ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಗೆಲುವಿನ ನಂತರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ಮತ್ತೊಂದು ವಿಭಾಗವು ವಿಡಿಯೋವನ್ನು ಕೃತಕ ಬುದ್ಧಿಮತ್ತೆಯಿಂದ(ಎಐ) ರಚಿಸಲಾಗಿದೆ ಮತ್ತು ಅದನ್ನು ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ.
Advertisement