ಕ್ರಿಕೆಟ್

'ಪ್ರತಿಯೊಬ್ಬ ಆಟಗಾರನೂ ಎಲ್ಲವನ್ನು ಅರ್ಪಿಸಲು ಸಿದ್ಧರಿದ್ದರು': ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕುಲದೀಪ್ ಯಾದವ್ ಮೆಚ್ಚುಗೆ!

'ಪ್ರತಿಯೊಬ್ಬ ಆಟಗಾರನೂ ಎಲ್ಲವನ್ನು ಅರ್ಪಿಸಲು ಸಿದ್ಧರಿದ್ದರು': ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕುಲದೀಪ್ ಯಾದವ್ ಮೆಚ್ಚುಗೆ!
ಕುಲದೀಪ್ ಯಾದವ್ - ವಿರಾಟ್ ಕೊಹ್ಲಿ
Published On :

ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದ ಅವಧಿಯಲ್ಲಿ ಕ್ರಿಕೆಟ್ ಮೈದಾನದಲ್ಲಿ ತಂಡ ಪ್ರದರ್ಶಿಸಿದ ಆಕ್ರಮಣಕಾರಿ ಮನಸ್ಥಿತಿಗೆ ಸದಾ ಸ್ಮರಣೀಯ. ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿದ್ದರು ಮತ್ತು ಅದೇ ಮನಸ್ಥಿತಿಯೊಂದಿಗೆ ಆಡಿದರು, ಅದು ಅವರ ತಂಡದ ಸಹ ಆಟಗಾರರ ಮೇಲೂ ಪರಿಣಾಮ ಬೀರಿತು. ಕೊಹ್ಲಿ ನಾಯಕತ್ವದಲ್ಲಿ ಮೂರು ಪ್ರಕಾರದ ಪಂದ್ಯಗಳಲ್ಲಿ ಹಲವಾರು ಪಂದ್ಯಗಳನ್ನು ಆಡಿದ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್, ಅವರಿಗಾಗಿ ಎಲ್ಲ ಆಟಗಾರರು ಎಲ್ಲವನ್ನು ಪಣಕ್ಕಿಟ್ಟು ಆಡುವಂತಹ ಮನಸ್ಥಿತಿಯನ್ನು ಹೊಂದಿದ್ದರು ಎಂದು ಬಣ್ಣಿಸಿದರು.

ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ಶ್ರೇಷ್ಠ ನಾಯಕರ ಅಡಿಯಲ್ಲಿ ಆಡಿದ್ದರೂ, ಆಟಗಾರರು ಸಕಾರಾತ್ಮಕ ಆಕ್ರಮಣಕಾರಿಯಾಗಿ ಆಡುವುದು ಮತ್ತು ಮೈದಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ವಿರಾಟ್ ಕೊಹ್ಲಿ ಸ್ಫೂರ್ತಿ ನೀಡಿದರು ಎಂದು ಕುಲದೀಪ್ ತಿಳಿಸಿದರು.

'ನಾನು ನನ್ನ ಹೆಚ್ಚಿನ ಕ್ರಿಕೆಟ್ ಅನ್ನು ವಿರಾಟ್ ನೇತೃತ್ವದಲ್ಲಿ ಆಡಿದೆ ಮತ್ತು ನಂತರ ರೋಹಿತ್ ನೇತೃತ್ವದಲ್ಲಿ. ವಿರಾಟ್ ನಾಯಕತ್ವದಲ್ಲಿ ತುಂಬಾ ತೀವ್ರತೆ ಇತ್ತು - ತಂಡವು ಉತ್ತಮ ಶಕ್ತಿ, ಉತ್ಸಾಹ ಮತ್ತು ಆಕ್ರಮಣಶೀಲತೆಯಿಂದ ಆಡಿತು. ಪ್ರತಿಯೊಬ್ಬ ಆಟಗಾರನು ತಂಡಕ್ಕಾಗಿ ಶೇ 100 ರಷ್ಟು ಪ್ರಯತ್ನ ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದರು. ಏಕೆಂದರೆ, ಕಠಿಣವಾಗಿ ಹೋರಾಡಲು ಮತ್ತು ಎಂದಿಗೂ ಬಿಟ್ಟುಕೊಡದಂತಹ ಸ್ಫೂರ್ತಿಯನ್ನು ಕೊಹ್ಲಿ ಆಟಗಾರರಿಗೆ ನೀಡಿದರು' ಎಂದು ಕುಲದೀಪ್ ಕ್ರಿಕ್ಇನ್ಫೋಗೆ ತಿಳಿಸಿದರು.

'ವಿರಾಟ್ ನನ್ನ ಪಾತ್ರ ಏನೆಂಬುದನ್ನು ಸ್ಪಷ್ಟವಾಗಿ ಹೇಳಿದ್ದರು: ತಂಡಕ್ಕೆ ವಿಕೆಟ್ ಪಡೆಯಲು ಸಹಾಯ ಮಾಡಿ ಎಂದಿದ್ದರು. ಚಾಹಲ್ ಮತ್ತು ನಾನು ಒಂದೇ ರೀತಿಯ ಪಾತ್ರಗಳನ್ನು ಹೊಂದಿದ್ದೆವು. ವಿರಾಟ್ ನಾಯಕನಾಗಿದ್ದಾಗ ಮಂತ್ರ ಸರಳವಾಗಿತ್ತು: ನಿಮ್ಮ ಆಟವನ್ನು ನೀವು ಆನಂದಿಸಿ ಮತ್ತು ಬಿಂದಾಸ್ ಆಗಿ ಆಡಿ ಎನ್ನುವುದಾಗಿತ್ತು. ರನ್ ಬಿಟ್ಟುಕೊಡುವ ಬಗ್ಗೆ ಯಾವುದೇ ಒತ್ತಡವಿರಲಿಲ್ಲ - ಬ್ಯಾಟರ್‌ಗಳು ಅದನ್ನು ನೋಡಿಕೊಳ್ಳುತ್ತಾರೆ. ನಮಗೆ ವಿಕೆಟ್ ಪಡೆಯುವುದು ನಿಮ್ಮ ಕೆಲಸ ಎಂದು ಹೇಳಿದ್ದರು' ಎಂದು ಅವರು ಹೇಳಿದರು.

ಕೊಹ್ಲಿ 2014ರ ಅಂತ್ಯದಿಂದ 2022ರ ಆರಂಭದವರೆಗೆ ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು. 2017ರ ಆರಂಭದಿಂದ 2021ರ ಅಂತ್ಯದವರೆಗೆ ಅವರು ವೈಟ್-ಬಾಲ್ ನಾಯಕರಾಗಿದ್ದರು. ಈ ಅವಧಿಯಲ್ಲಿ ಭಾರತ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆಲ್ಲದಿದ್ದರೂ, ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವುಗಳನ್ನು ಸಾಧಿಸಿದರು ಮತ್ತು ತವರು ಟೆಸ್ಟ್‌ಗಳಲ್ಲಿ ಅಜೇಯರಾಗುಳಿದರು.

'ನಾನು ವಿರಾಟ್ ಅವರಿಂದ ಬಹಳಷ್ಟು ಕಲಿತಿದ್ದೇನೆ - ಕ್ರಿಕೆಟ್ ಬಗ್ಗೆ ಮಾತ್ರವಲ್ಲ, ಆಟದ ಹೊರಗಿನ ಜೀವನದ ಬಗ್ಗೆಯೂ ಸಹ. ನಾವು ಕ್ರಿಕೆಟಿಗ ಅಥವಾ ಕ್ರೀಡಾಪಟುವಾಗಿ ಮಾತ್ರವಲ್ಲದೆ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುವ ಬಗ್ಗೆ ಮಾತನಾಡಿದ್ದೇವೆ. ನೀವು ಸಿಲುಕಿಕೊಳ್ಳಬಹುದಾದ ಸಂದರ್ಭಗಳಿವೆ ಮತ್ತು ಅವುಗಳನ್ನು ಹೇಗೆ ಎದುರಿಸುವುದು ಮತ್ತು ಮುಂದುವರಿಯುವುದು ಎಂಬುದನ್ನು ನಾವು ಚರ್ಚಿಸಿದ್ದೇವೆ. ಕ್ರಿಕೆಟ್‌ನ ಆಚೆಗಿನ ಜೀವನದ ಬಗ್ಗೆ ಅವರು ನನಗೆ ಸಾಕಷ್ಟು ದೃಷ್ಟಿಕೋನವನ್ನು ನೀಡಿದ್ದಾರೆ. ವಿರಾಟ್ ಜೊತೆ ಮಾತನಾಡಿದ ನಂತರ ನನಗೆ ಯಾವಾಗಲೂ ಒಳ್ಳೆಯದಾಗುತ್ತದೆ ಏಕೆಂದರೆ ನಾವು ಆಟಕ್ಕಿಂತ ಹೆಚ್ಚಿನದನ್ನು ಮಾತನಾಡುತ್ತೇವೆ' ಎಂದರು.

ಕೊಹ್ಲಿ ನಾಯಕತ್ವದಲ್ಲಿ ಕುಲದೀಪ್ ಭಾರತದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದರು. ಪ್ರಾಥಮಿಕವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ, 2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.