ಕನ್ನಡ ಸಂಘಟನೆಗಳು ಹುಬ್ಬಳ್ಳಿಯತ್ತ

ಯಳ್ಳೂರು: ಪರ್ಯಾಯ ದಾರಿ ಕಾಣದೇ ಹುಬ್ಬಳಿಗೆ ಬರುತ್ತಿರುವ ಕನ್ನಡ ಸಂಘಟನೆಗಳು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 8: ಬೆಳಗಾವಿಯ ಯಳ್ಳೂರು ವಿಷಯವಾಗಿ ಸೊಲ್ಲೆತ್ತದಂತೆ ಬೆಳಗಾವಿ ಜಿಲ್ಲಾಡಳಿತ ನಿಷೇದಾಜ್ಞೆ ಹೊರಡಿಸಿರುವ ಪರಿಣಾಮ, ಕನ್ನಡ ಸಂಘಟನೆಗಳು ಹುಬ್ಬಳ್ಳಿಗೆ ಬಂದು ಪತ್ರಕಾಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸರ್ಕಾರದ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದೆ.
ಕನ್ನಡ ಸಂಘಟನೆಗಳಾಗಲಿ, ಮರಾಠಿ ಸಂಘಟನೆಯಾಗಲಿ ಬೆಳಗಾವಿ ಜಿಲ್ಲೆಯಾದ್ಯಂತ ಯುಳ್ಳೂರು ವಿಷಯವಾಗಿ ಭಾಷಣ, ಪತ್ರಿಕಾಗೋಷ್ಠಿ ಅಥವಾ ಪ್ರತಿಭಟನೆ ಮಾಡುವುದರ ಮೇಲೆ ಜಿಲ್ಲಾಡಳಿತ ನಿಷೇಧಾಜ್ಞೆ ಹೊರಡಿಸಿದೆ. ಹೀಗಾಗಿ ದಾರಿ ಕಾಣದಾಗಿರುವ ಕನ್ನಡ ಸಂಘಟನೆಗಳು ಹುಬ್ಬಳ್ಳಿಯತ್ತ ಮುಖ ಮಾಡಿವೆ.
ನಿಷೇಧಾಜ್ಞೆ ಪರಿಣಾಮ: ಯಳ್ಳೂರು ವಿಷಯ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಬೆಳಗಾವಿ ಜಿಲ್ಲಾಡಳಿತ ನಿಷೇದಾಜ್ಞೆ ಹೊರಡಿಸಿತು. ಮೊಟ್ಟ ಮೊದಲು ಬೆಳಗಾವಿ ನಗರ, ಖಾನಾಪುರ ಹಾಗೂ ನಿಪ್ಪಾಣಿ ವ್ಯಾಪ್ತಿಯಲ್ಲಿ ಮಾತ್ರ ನಿಷೇದಾಜ್ಞೆ ಹೊರಡಿಸಿ ಪ್ರಚೋದನಾಕರಿ ಕೃತ್ಯವೆಸಗಬಾರದೆಂದು ಹೇಳಿತ್ತು. ಆ ಬಳಿಕ ಸಂಪೂರ್ಣ ಬೆಳಗಾವಿ ಜೆಲ್ಲೆಯಲ್ಲಿ ಯಳ್ಳೂರು ವಿಷಯವಾಗಿ ಯಾರೇ ಚಕಾರವೆತ್ತಿದ್ದರೂ ಕಾನೂನು ಪ್ರಕಾರಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಆ.10ರ ವರೆಗೆ ನಿಷೇದಾಜ್ಞೆ ಮುಂದುವರಿಸಿತು. ಈ ನಿಷೇದಾಜ್ಞೆಯ ಮಧ್ಯೆಯೂ ಕನ್ನಡ ಹಾಗೂ ಮರಾಠಿ ಸಂಘಟನೆಗಳು ಯಳ್ಳೂರು ವಿಷಯವಾಗಿ ಮಾತನಾಡಿದ್ದರ ಪರಿಣಾಮ ಕಾನೂನು ಕ್ರಮ ಎದುರಿಸಬೇಕಾಯಿತು.
ಕನ್ನಡ ಸಂಘಟನೆಗಳ ಆಕ್ರೋಶ: ಕನ್ನಡ ನಾಡಿನಲ್ಲಿಯೇ ಕನ್ನಡದ ಪರವಾಗಿ ದನಿ ಎತ್ತಿದರೆ ಕಾನೂನು ಕ್ರಮ ಎದುರಿಸುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಬೆಳಗಾವಿ ಕನ್ನಡ ಸಂಘಟನಗೆಳು ಸರ್ಕಾರದ ವಿರುದ್ಧ ಹರಿಹಾಯಲಾರಂಭಿಸಿವೆ. ಬೆಳಗಾವಿ ಜಿಲ್ಲೆಯಲ್ಲಿ ಯಳ್ಲೂರು ವಿಷಯವಾಗಿ ಮಾತನಾಡಕೂಡದು ಎಂದಿರುವ ಪರಿಣಾಮ ಬೆಳಗಾವಿಯಿಂದ ಹೊರ ಬಂದು ಪ್ರತಿಕಾಗೋಷ್ಠಿಯ ಮೂಲಕವಾದರೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲಾರಂಭಿಸಿವೆ. ಅದರಲ್ಲೂ ಮುಖ್ಯವಾಗಿ ಹುಬ್ಬಳ್ಳಿಗೆ ಬಂದು ಪತ್ರಿಕಾಗೋಷ್ಠಿ ನಡೆಸುತ್ತಿರುವ ಕನ್ನಡ ಸಂಘಟನೆಗಳು ಮೊಟ್ಟ ಮೊದಲು ಮಹಾರಾಷ್ಟ್ರ ಸರ್ಕಾರ, ಮರಾಠಿ ಸಂಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಜತೆಗೆ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಖಂಡಿಸುತ್ತಿವೆ. ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗ ಬಾರದು ಎನ್ನುವ ಕಾರಣಕ್ಕೆ ಕನ್ನಡ ಸಂಘಟನೆಗಳಾಗಲಿ, ಮರಾಠಿ ಸಂಘಟೆಗಳಾಗಲಿ ಪ್ರತಿಭಟನೆ ನಡೆಸಬಾರದು ಎನ್ನುವ ಜಿಲ್ಲಾಡಳಿತ ನಿರ್ಧಾರ ಒಂದು ಹಂತದಲ್ಲಿ ಸಮಂಜಸ ಎಂದು ಒಪ್ಪಿಕೊಳ್ಳಬಹುದು. ಆದರೆ ಪತ್ರಿಕಾಗೋಷ್ಠಿ ನಡೆಸುವುದೂ ತಪ್ಪು ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಕನ್ನಡ ಸಂಘಟನೆಗಳ ಪ್ರಶ್ನೆ.
ವಸತಿ ನೀಡಕೂಡದು: ಗಮನಾರ್ಹ ಸಂಗತಿಯೆಂದರೆ ಕನ್ನಡ, ಮರಾಠಿ ಸಂಘಟನೆಗಳ ಯಾವುದೇ ಮುಖಂಡರು, ಕಾರ್ಯಕರ್ಥರು ಬೆಳಗಾವಿಗೆ ಬಂದರೆ ಲಾರ್ಡ್ಜ್ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬಾರದು. ಲಾಡ್ಜ್ ಕೇಳಿ ಬಂದವರು ಯಾವುದಾದರೂ ಸಂಘಟನೆಗೆ ಸಂಬಂಧಪಟ್ಟವರೇ ಎನ್ನುವುದನ್ನು ಪರಿಶೀಲಿಸಿ ಆ ಬಳಿಕ ವಸತಿ ನೀಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿರುವುದು ಅತಿರೇಕದ ವರ್ತನೆ ಎಂದು ಕನ್ನಡ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ. ಬೆಳಗಾವಿಗೆ ಅನ್ಯ ಕಾರ್ಯನಿಮ್ಮಿತ್ತ ತೆರಳಬೇಕಾದರೂ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ವಸತಿಯುಳಿದು ಮುಂದೆ ಬೆಳಗಾವಿಗೆ ಪ್ರಯಾಣಿಸಬೇಕಾದ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಕನ್ನಡ ಸಂಘಟನೆಗಳ ಕಾರ್ಯಕರ್ತರಿಗೆ ತಂದೊಡ್ಡಿದೆ. ಸರ್ಕಾರದ ಈ ನೀತಿಗೆ ಕನ್ನಡ ಸಂಗಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಯಳ್ಳೂರು ವಿಷಯವಾಗಿ ಯಾವುದೇ ಅಭಿಪ್ರಾಯ, ವಿಚಾರ ವ್ಯಕ್ತ ಪಡಿಸಬೇಕೆನಿಸಿದರೆ ಅನ್ಯದಾರಿ ಕಾಣದೆ ಹುಬ್ಬಳಿಯತ್ತ ಬರಲಾರಂಭಿಸಿವೆ.
-ಪ್ರಕಾಶ ಎಸ್.ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


