ನಕಲಿ 'ಲೋಕಾ'ದಿಂದ ಮೋಸ, ಅಸಲಿ 'ಲೋಕಾ'ಗೆ ಸಿಕ್ಕಿ ಬಿದ್ದ ಅರಣ್ಯಾಧಿಕಾರಿ

ದಕ್ಷಿಣ ಕನ್ನಡ: ನಕಲಿ ಲೋಕಾಯುಕ್ತ ಅಧಿಕಾರಿಯಿಂದ ಮೋಸ ಹೋದ ಅರಣ್ಯ ಅಧಿಕಾರಿಯೊಬ್ಬ ಬಾಕಿ ಲಂಚದ ಹಣ ನೀಡುವ ವೇಳೆ ಅಸಲಿ ಲೋಕಾಯುಕ್ತ ಅಧಿಕಾರಿಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಕಾರವಾರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ನಗರದ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ ರಾಮಕೃಷ್ಣ ಭಟ್ ಎಂಬುವವರ ಮನೆ ಮೇಲೆ ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿಯಾಗಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ರಾಜು ಕೃಷ್ಣಪ್ಪ ಅರ್ಮಾನಿ ಎಂಬಾತ ತಾನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಅರಣ್ಯಾಧಿಕಾರಿ ಅಶೋಕ ರಾಮಕೃಷ್ಣ ಅವರಿಂದ ಸುಲಿಗೆಗೆ ಇಳಿದಿದ್ದಾನೆ.
ಧಾರವಾಡದ ಕೇಂದ್ರ ಕಾರಾಗೃಹ ಆಸ್ಪತ್ರೆಯ ಡಿ ಗ್ರೂಪ್ ಉದ್ಯೋಗಿ ಕಾರ್ಯನಿರ್ವಹಿಸುತ್ತಿರುವ ರಾಜು ಕೃಷ್ಣಪ್ಪ ಅರ್ಮಾನಿ ಅಶೋಕ ರಾಮಕೃಷ್ಣ ಭಟ್ ಅವರಿಗೆ ಕರೆ ಮಾಡಿ ತಾನು ಉತ್ತರ ಕನ್ನಡ ಜಿಲ್ಲೆಯ ಲೋಕಾಯುಕ್ತ ಎಸ್.ಪಿ. ಸಿದ್ದೇಗೌಡ ಎಂದು ಹೇಳಿ, 1.5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ತನ್ನ ಅಕೌಂಟ್ ನಂಬರ್ ನೀಡಿ ಆ ಖಾತೆಗೆ ಹಣ ಹಾಕುವಂತೆ ಸೂಚಿಸುತ್ತಾನೆ.
ದೂರವಾಣಿ ಕರೆಗೆ ಹೆದರಿದ್ದ ಅರಣ್ಯ ಅಧಿಕಾರಿ ಅಶೋಕ್ ರಾಮಕೃಷ್ಣ ಅವರು ನಕಲಿ ಲೋಕಾಯುಕ್ತನ ಅಕೌಂಟ್ ನಂಬರ್ಗೆ 50,000 ರುಪಾಯಿ ಹಾಕಿ, ಬಾಕಿ ಹಣವನ್ನು ಕೆಲವು ದಿನಗಳ ನಂತರ ನೀಡುವುದಾಗಿ ತಿಳಿಸುತ್ತಾನೆ. ಅದಾದ ಕೆಲವು ದಿನಗಳ ನಂತರ ಅರಣ್ಯಾಧಿಕಾರಿ ಅಶೋಕ ರಾಮಕೃಷ್ಣ ಭಟ್ ಲೋಕಾಯುಕ್ತ ಕಛೇರಿಗೇ ಭೇಟಿ ನೀಡಿ, ಬಾಕಿ ಹಣಕ್ಕೆ ಕೆಲವು ದಿನಗಳ ಕಾಲ ಕಾಲವಕಾಶ ನೀಡುವಂತೆ ಕೇಳುತ್ತಾನೆ. ಅರಣ್ಯಾಧಿಕಾರಿಯ ಮಾತುಗಳನ್ನು ಕೇಳಿದ ನಿಜವಾದ ಲೋಕಾಯುಕ್ತ ಅಧಿಕಾರಿ ಸಿದ್ದೇಗೌಡರಿಗೆ ಆಶ್ಚರ್ಯವಾಗಿ, ಹೇಳಿಕೆಯನ್ನು ಬರವಣಿಗೆಯಲ್ಲಿ ನೀಡುವಂತೆ ತಿಳಿಸಿದ್ದಾರೆ.
ಬಳಿಕವಷ್ಟೇ ಅರಣ್ಯಾಧಿಕಾರಿ ಅಶೋಕ ರಾಮಕೃಷ್ಣ ಭಟ್ಗೆ ತಾವು ಮೋಸ ಹೋಗಿರುವುದು ತಿಳಿದಿದೆ. ನಂತರ ಈ ವಿಷಯವನ್ನು ಪೋಲೀಸರಿಗೆ ತಿಳಿಸಿದ ಭಟ್ ಅವರು ಪ್ರಕರಣ ದಾಖಲಿಸಿದ್ದಾರೆ. ನಂತರ ಪೋಲೀಸರು ರಾಜುವಿನ ಫೋನ್ ನಂಬರ್ ಆಧರಿಸಿ ಆತನಿದ್ದ ಸ್ಥಳವನ್ನು ಗುರ್ತಿಸಿ ಬಂಧಿಸಿದ್ದಾರೆ. ಅಲ್ಲದೆ ಸ್ವತಃ ಅರಣ್ಯಾಧಿಕಾರಿ ಅಶೋಕ ರಾಮಕೃಷ್ಣ ಭಟ್ ಅವರು ಕೂಡ ಲಂಚ ನೀಡಿದ ಆರೋಪದ ಮೇಲೆ ತಾವಾಗಿಯೇ ಲೋಕಾಯುಕ್ತ ಅಧಿಕಾರಿಗಳ ಬಳಿ ಸಿಕ್ಕಿಹಾಕಿಕೊಂಡಿದ್ದಾರೆ.
ಒಟ್ಟಾರೆ ಭ್ರಷ್ಟ ಅಧಿಕಾರಿಯೊಬ್ಬ, ನಕಲಿ ಲೋಕಾಯುಕ್ತನಿಗೆ ಲಂಚ ನೀಡಲು ಹೋಗಿ ಅಸಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


