ದೇವೇಗೌಡ ಕುಟುಂಬ ಕೆಪಿಎಸ್ಸಿ ಭ್ರಷ್ಟಾಚಾರದ ಫಲಾನುಭವಿ: ಎ.ಕೆ.ಸುಬ್ಬಯ್ಯ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬವೇ ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟಾಚಾರದ ಫಲಾನುಭವಿಗಳಾಗಿದ್ದಾರೆ ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2011ನೇ ಸಾಲಿನ ಕೆಪಿಎಸ್ಸಿ ನೇಮಕಾತಿಯನ್ನು ರದ್ದು ಮಾಡಿರುವ ಸರ್ಕಾರದ ನಿಲುವಿಗೆ ನನ್ನ ಬೆಂಬಲವಿದೆ. ಕೆಪಿಎಸ್ಸಿ ನೇಮಕಾತಿಯ ಆರಂಭಿಕ ಪ್ರಕ್ರಿಯೆಯಲ್ಲೇ ಹಗರಣ ಪ್ರಾರಂಭವಾಗಿರುವುದು ಸಿಒಡಿ ತನಿಖೆಯಿಂದ ಸಾಬೀತಾಗಿದೆ. ಆರಂಭಿಕ ಪ್ರಕ್ರಿಯೆಯಲ್ಲೇ ಭ್ರಷ್ಟಾಚಾರ ನಡೆದಿರುವಾಗ ಇಂದು ಪ್ರತಿಭಟನೆ ಮಾಡುತ್ತಿರುವವರು ಪ್ರಾಮಾಣಿಕ ಅಭ್ಯರ್ಥಿಗಳು ಎಂದು ಕುಮಾರಸ್ವಾಮಿ ಅವರು ಹೇಗೆ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ನಿರತರಾಗಿರುವವರು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೆ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಮುಂದಿನ ಪರೀಕ್ಷೆಗೆ ಸಿದ್ದರಾಗಿ ಎಂದು ಸುಬ್ಬಯ್ಯ ಅವರು ಹೇಳಿದರು.
ಕುಮಾರಸ್ವಾಮಿ ನಡೆಸುತ್ತಿರುವ ಚಳುವಳಿಯು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿಯೇ ತೊಡಗಿರುವ ಅವರಿಗೆ ಪ್ರತಿಭಟನೆಯಲ್ಲಿ ತೊಡಗುವ ನೈತಿಕತೆ ಇಲ್ಲ. ಕುಮಾರಸ್ವಾಮಿ ಅವರ ಈ ನಡೆ ನಾಚಿಕೆಗೇಡಿತನದ ಕೆಲಸವಾಗಿದ್ದು, ಪ್ರತಿಭಟನೆಯನ್ನು ಹೀಗೆ ಮುಂದುವರೆಸಿದರೆ ಭ್ರಷ್ಟಾಚಾರ ನಿರ್ಮೂಲನ ಜನಾಂದೋಲನವನ್ನು ಆರಂಭಮಾಡಲಾಗುತ್ತದೆ ಎಂದು ಸುಬ್ಬಯ್ಯ ಹೇಳಿದರು.
2011ರ ನೇಮಕಾತಿ ರದ್ದತಿಯನ್ನು ವಿರೋಧಿಸುತ್ತಿರುವ ಕುಮಾರಸ್ವಾಮಿ ಅವರು, ಆಯ್ಕೆಯಾಗಿರುವ 360 ಅಭ್ಯರ್ಥಿಗಳ ಪೈಕಿ ಪ್ರಾಮಾಣಿಕವಾಗಿ ಆಯ್ಕೆಯಾಗಿರುವವರೆಷ್ಟು, ಭ್ರಷ್ಟಚಾರದಿಂದ ಆಯ್ಕೆಯಾಗಿರುವವರೆಷ್ಟು ಎಂಬುದನ್ನು ಸ್ಪಷ್ಟಪಡಿಸಿ ನಂತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಪ್ರತಿಭಟನಾಕಾರರ ಪರ ವಕೀಲರಾಗಿರುವ ದ್ವಾರಾಕಾನಾಥ್ ಬಗ್ಗೆ ಮಾತನಾಡಿದ ಸುಬ್ಬಯ್ಯ ಅವರು, 'ದ್ವಾರಕಾನಾಥ್ ಈ ಹಿಂದೆ ಪ್ರಮಾಣಿಕರಾಗಿದ್ದರು ಇಂದು ಕೊಳಚೆಗೆ ಬಿದ್ದಿದ್ದಾರೆ. ಗೌರವಾನ್ವಿತ ವ್ಯಕ್ತಿಯೊಬ್ಬ ಈ ರೀತಿ ಭ್ರಷ್ಟಾಚಾರದ ಪರವಾಗಿ ವಾದಿಸುತ್ತಿರುವುದು ಸಮಾಜಕ್ಕೆ ದುರಂತದ ಸಂಗತಿ ಎಂದು ಹೇಳಿದರು. ದ್ವಾರಕಾನಾಥ್ ಅವರು ನ್ಯಾಯಾಲಯದಲ್ಲಿ ಅವರ ಪರವಾಗಿ ವಾದಿಸಬೇಕೇ ಹೊರತು ಬಯಲು ಪ್ರದೇಶದಲ್ಲಿ ಅಲ್ಲ ಎಂದು ಕಿಡಿಕಾರಿದರು.
ಉತ್ತರ ಪತ್ರಿಕೆ ಬದಲಾಯಿಸಿದ್ದ ದೇವೇಗೌಡ: ಸುಬ್ಬಯ್ಯ ಆರೋಪ
ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸುಬ್ಬಯ್ಯ ಅವರು,1998 ರಿಂದ ದೇವೇಗೌಡ ಕುಟುಂಬ ಕೆಪಿಎಸ್ಸಿ ಫಲಾನುಭವಿಯಾಗಿದೆ. ಎಚ್.ಡಿ. ಬಾಲಕೃಷ್ಣೆ ಗೌಡ ಕೆಪಿಎಸ್ಸಿಗೆ ಆಯ್ಕೆಯಾಗಿದ್ದು ಹೇಗೆ ? ಉತ್ತರ ಪತ್ರಿಕೆ ಅದಲು ಬದಲಿಸಿ ಬಾಲಕೃಷ್ಣೆ ಗೌಡ ಆಯ್ಕೆಯಾದರು. 1976ರ ಅವಧಿಯಲ್ಲಿ ದೇವೇಗೌಡ ಪಕ್ಷದ ಕಚೇರಿಗೆ ಫೈಲ್ ತಂದಿದ್ದರು. ಏನು ಅಂತ ಕೇಳಿದಾಗ ಮಕ್ಕಳ ಭವಿಷ್ಯಕ್ಕೆ ಏನಾದ್ರೂ ಮಾಡಬೇಕಲ್ವಾ ಅಂತ ಅಡಗಿಸಿಕೊಂಡರು ಎಂದು ಎ.ಕೆ. ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.
1978ರಲ್ಲಿ ದೇವೇಗೌಡರಿಗೆ ಓಡಾಡೋಕೆ ಕಾರು ಇರಲಿಲ್ಲ, ನನ್ನ ಕಾರಿನಲ್ಲಿ ಓಡಾಡುತ್ತಿದ್ದರು. ಈಗ ದೇವೇಗೌಡ ಕುಟುಂಬದ ಆಸ್ತಿ ಎಷ್ಟು ? ದೇವೇಗೌಡರ ಮೊಮ್ಮಗ 3 ಕೋಟಿಯ ಕಾರಿನಲ್ಲಿ ಓಡಾಡುತ್ತಿದ್ದಾರೆ. ಮಾನ ಮಾರ್ಯದೆ ಇದ್ದರೆ ಕುಮಾರಸ್ವಾಮಿ ಹೋರಾಟ ಕೈಬಿಡಲಿ, ಡಾ. ಮೈತ್ರಿ ಹೋರಾಟ ಅಭಿನಂದನಾರ್ಹವಾಗಿದೆ ಎಂದ ಎ.ಕೆ. ಸುಬ್ಬಯ್ಯ, ರವಿವರ್ಮಾ ಕುಮಾರ್ ಎಜಿ ಹುದ್ದೆಯ ಘನತೆ ಎತ್ತಿ ಹಿಡಿದಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


