ರೌಡಿ ಶೀಟರ್ ವೆಂಕಟೇಶ್ ಮೇಲೆ ಗುಂಡಿನ ದಾಳಿ

ಬೆಂಗಳೂರು: ಕಾರ್ಪೋರೇಟರ್ ಸೊಸೆ ಅಪಹರಣ ಯತ್ನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿ ಶೀಟರ್ ವೆಂಕಟೇಶ್ ಮೇಲೆ ನಿನ್ನೆ ರಾತ್ರಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ತಡರಾತ್ರಿ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಇನ್ಸ್‌ಪೆಕ್ಟರ್ ರಂಗಪ್ಪ ನೇತೃತ್ವದ ತಂಡ ವೆಂಕಟೇಶ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಆಗಸ್ಟ್ 13ರ ರಾತ್ರಿ ಕಾರ್ಪೋರೇಟರ್ ಸೊಸೆ ಅಪಹರಣಕ್ಕೆ ರೌಡಿ ವೆಂಕಟೇಶ್ ಯತ್ನಿಸಿದ್ದನು. ಈ ಪ್ರಕರಣದ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ವೆಂಕಟೇಶ್‌ನನ್ನು ಬಂಧಿಸಲು ಮುಂದಾದರು. ಕಾರ್ಯಾಚರಣೆ ವೇಳೆ ಪರಾರಿಯಾಗಲು ಯತ್ನಿಸಿದ ವೆಂಕಟೇಶ್‌ನನ್ನು ಹಿಡಿಯಲು ಪೇದೆ ಮುಂದಾದಾಗ ಹಲ್ಲೆ ಮಾಡಿದ್ದಾನೆ. ತಕ್ಷಣ ಪೊಲೀಸರು ವೆಂಕಟೇಶ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಪೇದೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಕಾನ್ಸ್‌ಟೇಬಲ್ ಮತ್ತು ಗುಂಡೇಟು ತಗುಲಿದ ರೌಡಿ ಶೀಟರ್ ವೆಂಕಟೇಶ್ ಇಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ರೌಡಿಶೀಟರ್ ವೆಂಕಟೇಶ್, ಆಕೆಯೊಂದಿಗೆ ಜಗಳವಾಡಿಕೊಂಡು ಬೆಂಗಳೂರಿಗೆ ಬಂದಿದ್ದನು. ಈ ಮಾಹಿತಿ ತಿಳಿದ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾರೆ.
ವೆಂಕಟೇಶ್ ಅಲಿಯಾಸ್ ಕೆಂಚ ಬೆಂಗಳೂರಿನ ಗಾಯತ್ರಿನಗರದ ನಿವಾಸಿ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿದ್ದವು. ಆದರೆ ಈತ 45ಕ್ಕೂ ಹೆಚ್ಚು ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಸುಬ್ರಹ್ಮಣ್ಯನಗರ, ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್, ಉಡುಪಿ ಪೊಲೀಸ್ ಠಾಣೆಯಲ್ಲಿ ದರೋಡೆ, ಸುಲಿಗೆ, ಕಿಡ್ನ್ಯಾಪ್, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು.
ಉಡುಪಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಣೆ ಪ್ರಕರಣದಲ್ಲಿ ವೆಂಕಟೇಶ್ ಭಾಗಿಯಾಗಿದ್ದ. 18ನೇ ವರ್ಷಕ್ಕೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ವೆಂಕಟೇಶ್ ಯಾವುದೇ ನಿರ್ದಿಷ್ಠ ಮನೆಯೊಂದರಲ್ಲಿ ಉಳಿಯುತ್ತಿರಲಿಲ್ಲ. ಸಾಮಾನ್ಯವಾಗಿ ಖಾಸಗಿ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಬಿಡದಿ, ರಾಮನಗರದಲ್ಲಿ ಹೆಚ್ಚು ಅಡಗುತಾಣ ಹೊಂದಿದ್ದ ರೌಡಿಶೀಟರ್ ವೆಂಕಟೇಶ್ ನಿನ್ನೆ ಕುಂಬಳಗೋಡಿನಲ್ಲಿ ರೌಡಿ ಪರಮಗಿರಿ ಜತೆ ಜಗಳವಾಡಿ, ಕಾರೊಂದರ ಗಾಜನ್ನು ಒಡೆದು ಹಾಕಿದ್ದ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


