ಜಿಲ್ಲಾ ಸುದ್ದಿ

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ: ಕೆಎಂಎಫ್ ನಿರ್ದೇಶಕರ ಮಗನ ಬಂಧನ

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ: ಕೆಎಂಎಫ್ ನಿರ್ದೇಶಕರ ಮಗನ ಬಂಧನ
Published On :

ಬೆಂಗಳೂರು: ತಡರಾತ್ರಿಯಲ್ಲಿ ಡ್ರಾಪ್ ಕೇಳಿದ ಯುವತಿಯನ್ನು ಬೆಂಗಳೂರಿನ ಹೊರವಲಯಕ್ಕೆ ಹೊತ್ತೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ.

ಕುಡಿದ ಅಮಲಿನಲ್ಲಿ ಇದ್ದ ಮೂವರು ಗಣ್ಯ ವ್ಯಕ್ತಿಗಳ ಮಕ್ಕಳು ಈಕೆಯನ್ನು ಡ್ರಾಪ್ ಮಾಡುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ಬೆಂಗಳೂರಿನ ಹೊರವಲಯದ ತಾವರೆಕೆರೆ ಸಮೀಪವಿರುವ ತಿಪ್ಪಗೊಂಡನಹಳ್ಳಿಯ ತೋಟದ ಮನೆಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಮುಂಜಾನೆ ಇವರು ಕುಡಿತದ ಅಮಲಿನಲ್ಲಿ ನಿದ್ದೆಗೆ ಶರಣಾಗಿದ್ದಾಗ ನೊಂದ ಯುವತಿ ಅರೆ ನಗ್ನಾವಸ್ಥೆಯಲ್ಲಿಯೇ ತಪ್ಪಿಸಿಕೊಂಡು ಬಂದಿದ್ದಾಳೆ.

ಅರೆ ನಗ್ನ ಸ್ಥಿತಿಯಲ್ಲಿದ್ದ ಯುವತಿಯನ್ನು ಕಂಡ ಕಾರುಚಾಲಕನೋರ್ವ ಸ್ಥಳೀಯರ ಸಹಾಯದೊಂದಿಗೆ ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ತಾವರೆಕೆರೆ ಪೊಲೀಸ್ ಠಾಣೆಗೆ ತೆರಳಿದ ಯುವತಿ ತನ್ನೊಂದಿಗಾದ ದುಷ್ಕೃತ್ಯವನ್ನು ವಿವರಿಸಿ, ಘಟನಾ ಸ್ಥಳವನ್ನು ತೋರಿಸಿದ್ದಾಳೆ. ಕುಡಿದ ಮತ್ತಿನಲ್ಲಿ ಮಲಗಿದ್ದ ಯುವಕರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರೆಲ್ಲರೂ ಸಮಾಜದ ಗಣ್ಯವಕ್ತಿಗಳ ಮಕ್ಕಳೆಂದು ತಿಳಿದುಬಂದಿದ್ದು, ಈ ಪೈಕಿ ಕೆಎಂಎಫ್‌ನ ಬೆಂಗಳೂರು ಘಟಕದ ನಿರ್ದೇಶಕರಲ್ಲಿ ಒಬ್ಬರಾದ ನರಸಿಂಹ ಮೂರ್ತಿ ಅವರ ಮಗ ಅರುಣ್‌ಗೌಡ ಮತ್ತು ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಅವರ ಸಹೋದರನ ಮಗ ಎಂದು ಹೇಳಲಾಗುತ್ತಿದೆ. ಅರುಣ್ ಕುಮಾರ್ ಗೌಡ ಸೇರಿದಂತೆ ಆತನ ಸ್ನೇಹಿತರಾದ ಕೆಂಪ ಮತ್ತು ಮಹಾದೇವ ಎಂಬವವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಎಸ್ಪಿ ಅನುಪಮ್ ಅಗರ್ವಾಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಪ್ರಸ್ತುತ ಯುವತಿ ತಾವರೆಕೆರೆ ಪೊಲೀಸರ ರಕ್ಷಣೆಯಲ್ಲಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಘಟನೆಯ ವಿವರ:
ನಿನ್ನೆ ತಡರಾತ್ರಿಯಲ್ಲಿ ಮೆಜೆಸ್ಟಿಕ್‌ನಿಂದ ಜೆ.ಪಿ.ನಗರಕ್ಕೆ ತೆರಳಬೇಕಿದ್ದ ಬಿಹಾರ ಮೂಲದ ಯುವತಿ, ಬಸ್ ಮತ್ತು ಆಟೋಗಳಿಲ್ಲದ್ದರಿಂದ ಡ್ರಾಪ್ ಮಾಡುವಂತೆ ಕೋರಿದ್ದಳು. ಇದನ್ನೇ ನೆಪವಾಗಿಸಿಕೊಂಡ ಮೂವರು ಯುವಕರು ಆಕೆಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ತಾವರೆಕೆರೆ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿರುವ ತೋಟದ ಮನೆಗೆ ಬಲವಂತವಾಗಿ ಕರೆದೊಯ್ದು ರಾತ್ರಿ ಇಡೀ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.

ಕುಡಿದ ಅಮಲಿನಲ್ಲಿದ್ದ ದುಷ್ಕರ್ಮಿಗಳು ಮುಂಜಾನೆ ನಿದ್ದೆಗೆ ಜಾರುತ್ತಿದ್ದಂತೆಯೇ ಯುವತಿ ಅರೆನಗ್ನಾವಸ್ಥೆಯಲ್ಲಿಯೇ ರೆಸಾರ್ಟ್‌ನಿಂದ ಹೊರಗೆ ಓಡಿಬಂದಿದ್ದಾಳೆ. ಬಳಿಕ ಕಾರು ಚಾಲಕನ ಸಹಾಯದೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ತಂದೆಯಿಂದಲೇ ಬುದ್ಧಿಮಾಂದ್ಯ ಯುವತಿಯ ಮೇಲೆ ನಿರಂತರ ಅತ್ಯಾಚಾರ

ಮತ್ತೊಂದು ಪ್ರಕರಣದಲ್ಲಿ ಶ್ರೀರಾಂಪುರದಲ್ಲಿ ದುರುಳ ತಂದೆಯೋರ್ವ ತನ್ನ ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ಷಣ್ಮುಖ ಎಂಬಾತನನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದು, ಆತನ ಪತ್ನಿಯೇ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.

ಷಣ್ಮುಖ ಮತ್ತು ಆತನ ಪತ್ನಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಮನೆಯಲ್ಲಿ ಬುದ್ಧಿಮಾಂದ್ಯ ಯುವತಿ ಮಾತ್ರ ಇರುತ್ತಿದ್ದಳು. ಇದನ್ನೇ ತನ್ನ ದುಷ್ಕೃತ್ಯಕ್ಕೆ ಬಳಿಸಿಕೊಂಡ ತಂದೆ ಷಣ್ಮುಖ ತನ್ನ ಪತ್ನಿ ಕೆಲಸಕ್ಕೆ ಹೋದಾಗ ಮತ್ತು ತಾನು ಕೆಲಸದಿಂದ ಮನೆಗೆ ವಾಪಸಾದಾಗ ತನ್ನ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಆತನ ಪತ್ನಿ ದೂರಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಾಂಪುರ ಪೊಲೀಸರು ಷಣ್ಮುಖನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.