ಜಿಲ್ಲಾ ಸುದ್ದಿ

ಗೌಡರನ್ನು ಹುಟ್ಟೂರಿಗೆ ಮರಳಿಸಿರುವ ಕುಟುಂಬ ರಾಜಕೀಯ!

ಗೌಡರನ್ನು ಹುಟ್ಟೂರಿಗೆ ಮರಳಿಸಿರುವ ಕುಟುಂಬ ರಾಜಕೀಯ!
Published On :

ಬೆಂಗಳೂರು: ತುಂಬು ಪ್ರೀತಿಯಿಂದ ತಾವೇ ನೀರೆರದು ಪೋಷಿಸಿದ 'ಕುಟುಬಂ ರಾಜಕೀಯ'ದ ಸುಳಿಯೊಳಗೆ ಸಿಕ್ಕಿ ಖಿನ್ನರಾಗಿರುವ ಮಾಜಿ ಪ್ರಧಾನಿ ದೇವೇಗೌಡರು, ಪರಿಹಾರ ಅನ್ವೇಷಣೆಗಾಗಿ ಬೆಂಗಳೂರು ಬಿಟ್ಟು ಹಾಸನ ಸೇರಿದ್ದಾರೆ.

ರಾಜಕೀಯ ತಂತ್ರಗಾರಿಕೆಗೆ ಹೆಸರಾದ ದೇವೇಗೌಡರು ತಮ್ಮ ಕುಟುಂಬದೊಳಗಿನ ರಾಜಕೀಯ ನಿಭಾಯಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಒಂದೆಡೆ ಕುಟುಂಬ ಸದಸ್ಯರ ಆಶೋತ್ತರಗಳಿಗಾಗಿ ಪಕ್ಷದ ಇತರ ನಾಯಕರ ಬೇಸರಕ್ಕೆ ತುತ್ತಾದ ದೇವೇಗೌಡರು, ಇದೀಗ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಕುಟುಂಬ ಸದಸ್ಯರ ನಡುವೆ ಸಮನ್ವಯ ಸಾಧಿಸಲಾಗದೆ ಪರಿತಪಿಸುತ್ತಿದ್ದಾರೆ. ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕಳ ರಾಜಕೀಯ ಲೇಪಿತ ಒತ್ತಡಗಳಿಗೆ ಸ್ಪಂದಿಸಲಗಾದೆ ರಾಜಧಾನಿ ತೊರೆದು ತವರು ಜಿಲ್ಲೆಗೆ ಮರಳಿದ್ದಾರೆ.

ಮೊದಲಿಗೆ ದೇವೇಗೌಡರ ಕುಟುಂಬ ರಾಜಕೀಯ ಪುತ್ರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೆ ಮಾತ್ರ ಸೀಮಿತವಾಗಿತ್ತು. ನಂತರ ಮತ್ತಿಬ್ಬರು ಪುತ್ರರಾದ ಬಾಲಕೃಷ್ಣ ಹಾಗೂ ರಮೇಶ್ ಅಳರ ತೆರೆಮರೆ ಚಟುವಟಿಕೆಗಳಿಗೆ ವ್ಯಾಪಿಸಿತು. ತದನಂತರ ಸೊಸೆ ಅನಿತಾ ಕುಮಾರಸ್ವಾಮಿ ರಾಜಕೀಯ ಅಖಾಡಕ್ಕೆ ಇಳಿದರು. ಇದರಿಂದ ಪ್ರೇರಣೆ ಪಡೆದ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಅವರು ಕಣಕ್ಕಿಳಿಯಲು ನಡೆಸಿದ ಸತತ ಪ್ರಯತ್ನಗಳೆಲ್ಲವೂ ವಿಫಲವಾದವು. ಆದರೂ ಛಲ ಬಿಟ್ಟಿಲ್ಲ. ಇದೀಗ ರಾಜಕೀಯ ಮಹತ್ವಾಕಾಂಕ್ಷೆ ಎಂಬುದು ಗೌಡರ ಮೊಮ್ಮಕ್ಕಳಾದ ಪ್ರಜ್ವಲ್ (ರೇವಣ್ಣ ಪುತ್ರ) ಹಾಗೂ ಗೌಡರ ನಿಖಿಲ್ ಗೌಡ(ಕುಮಾರಸ್ವಾಮಿ ಪುತ್ರ) ನಡುವೆಯೂ ಪೈಪೋಟಿ ಸೃಷ್ಟಿಸಿದೆ. ಸಮಾನಾಂತರ ಗೆರೆಗಳನ್ನೂ ಮೂಡಿಸಿದೆ. ಈ ಎಲ್ಲ ಅನಪೇಕ್ಷಿತ ಬೆಳವಣಿಗೆಗಳಿಂದ ಉದ್ಬವಿಸಿರುವ ಒತ್ತಡಗಳಿಗೆ ಪರಿಹಾರ ಕಂಡು ಹಿಡಿಯುವುದರ ಜತೆಗೆ ತವರು ಕ್ಷೇತ್ರ ಉಳಿಸಿಕೊಳ್ಳಲು ಗೌಡರು ವಾಸ್ತವ್ಯ ಬದಲಿಸಿದ್ದಾರೆ. ಹಾಸನ ಸಿಟಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಭಾವಮೈದ ಕಾಳೇಗೌಡರ(ಚನ್ನಮ್ಮನವರ ಸಹೋದರ) ಮನೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದು, ಬಾಡಿಗೆ ಮನೆ ಹುಡುಕುತ್ತಿದ್ದಾರೆ. ಅಲ್ಲಿನ ಕೆ.ಆರ್ ಪುರದಲ್ಲಿರುವ ಉದ್ಯಮಿ ಪರಮೇಶ್ವರಪ್ಪ ನಿವಾಸ ಗೌಡರಿಗೆ ಹಿಡಿಸಿದ್ದು, ಎಲ್ಲವೂ ಸರಿ ಹೋದರೆ ಅದೇ ಅವರ 'ಕಾರ್ಯತಾಣ' ಆಗಲಿದೆ.

ಕಾರಣ ಬೇರೆಯದೇ!:
ಉಳಿದ ಬದುಕನ್ನು ಹುಟ್ಟೂರಾದ ಹಾಸನದಲ್ಲೇ ಕಳೆಯಲು ನಿರ್ಧರಿಸಿದ್ದು, ಅಲ್ಲಿದ್ದುಕೊಂಡೇ ಕ್ಷೇತ್ರದ ಜನರ ಸೇವೆ ಸಲ್ಲಿಸುವುದಾಗಿ ಗೌಡರು ಇತ್ತೀಚೆಗೆ ಹೇಳಿಕೊಂಡಿದ್ದು ನಿಜ.  ಆದರೆ ಸ್ಥಳಾಂತರಕ್ಕೆ ಅದೊಂದೇ ಕಾರಣವಲ್ಲ ಎಂಬುದೂ ಅಷ್ಟೇ ನಿಜ. 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆಯಿತು' ಎಂಬಂತೆ ಕುಟುಂಬದೊಳಗೆ ಸೃಷ್ಟಿ ಆಗಿರುವ ಭಿನ್ನಾಭಿಪ್ರಾಯಗಳು ಅವರ ತೀರ್ಮಾನದ ಹಿಂದೆ ಮಹತ್ವರ ಪಾತ್ರ ವಹಿಸಿವೆ.

ಆದರೆ ಸ್ಥಳಾಂತರಕ್ಕೆ ಅದೊಂದೇ ಕಾರಣವಲ್ಲ ಎಂಬುದೂ ಅಷ್ಟೇ ನಿಜ. 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆಯಿತು' ಎಂಬಂತೆ ಕುಟುಂಬದೊಳಗೆ ಸೃಷ್ಟಿ ಆಗಿರುವ ಭಿನ್ನಾಭಿಪ್ರಾಯಗಳು ಅವರ ತೀರ್ಮಾನದ ಹಿಂದೆ ಮಹತ್ತರ ಪಾತ್ರವಹಿಸಿವೆ.

ಗೌಡರ ಕುಟುಂಬದೊಳಗಿನ ಪ್ರಮುಖ ರಾಜಕೀಯ ಭಿನ್ನಾಭಿಪ್ರಾಯವನ್ನು ಗುರುತಿಸುವಾಗ ಕಾಲದ ಮುಳ್ಳು 2008ಕ್ಕೆ ಮರಳುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಮುಗಿದಾಗ. ವಾಗ್ದಾನದಂತೆ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಬೇಕಿತ್ತು. ಯಡಿಯೂರಪ್ಪ ಸಿಎಂ ಹಾಗೂ ಎಚ್.ಡಿ.ರೇವಣ್ಣ ಉಪಮುಖ್ಯಮಂತ್ರಿ ಆಗಬೇಕು ಎಂಬುದು ಪೂರ್ವನಿರ್ಧರಿತ ಮಾತಾಗಿತ್ತು. ಆದರೆ ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದೇ ಹೋದುದರ ಹಿಂದೆ ಯಡಿಯೂರಪ್ಪ ಸಿಎಂ ಆಗುವುದನ್ನು ತಡೆಯುವುದಕ್ಕಿಂತಲೂ ಹೆಚ್ಚಾಗಿ ರೇವಣ್ಣ ಡಿಸಿಎಂ ಆಗುವುದನ್ನು ತಡೆಯುವ ಹುನ್ನಾರವಿದೆ ಎಂಬ ಅನುಮಾನ ಭವಾನಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ಅವರನ್ನು ಕಾಡಿತು.

ಇದಕ್ಕೆ ಮೊದಲು ರೇವಣ್ಣ ಅವರು ಕುಮಾರಸ್ವಾಮಿ ಸಂಪುಟ ಸೇರಲು ವಿಳಂಬ ಆಗಿದ್ದುದು ಬೇರೆ ಈ ಅನುಮಾನಕ್ಕೆ ಮತ್ತಷ್ಟು ಇಂಬುಗೊಟ್ಟಿತ್ತು. ಆಗ ದೇವೇಗೌಡರೇ ಮಧ್ಯಪ್ರವೇಶಿಸಿ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಕೈಗೆ ಅಧಿಕಾರ ಹೋಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬಂದಿದ್ದಾಗಿ ಸಮಜಾಯಿಷಿ ಕೊಟ್ಟರೂ 'ರೇವಣ್ಣ ಕುಟುಂಬ' ದ ಅಸಮಾಧಾನ ಸಂಪೂರ್ಣ ಶಮನಗೊಂಡಿರಲಿಲ್ಲ.
'ಪಕ್ಷಕ್ಕೆ ದುಡಿಯಲು ರೇವಣ್ಣ, ಅಧಿಕಾರ ಅನುಬವಿಸಲು ಕುಮಾರಸ್ವಾಮಿ' ಎಂಬ ಗೊಣಗಾರಿಕೆ ಅಲ್ಲಿಂದ ಆರಂಭವಾಯಿತು.

ಭವಾನಿ ರೇವಣ್ಣ ಅವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರದ ಸಾಲಿಗ್ರಾಮದವರು. 2008ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್.ನಗರದಿಂದ ಸ್ಪರ್ಧಿಸಬಯಸಿದರು. ಅಲ್ಲಾಗದಿದ್ದರೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಿಂದಲಾದರೂ ಟಿಕೆಟ್ ಕೊಡುವಂತೆ ಗೌಡರನ್ನು ಒತ್ತಾಯಿಸಿದ್ದರು. ಆದರೆ ಎರಡೂ ಕಡೆ ಟಿಕೆಟ್ ಕೊಡಲಿಲ್ಲ. ಇದಕ್ಕೆ ಕುಟುಂಬ ರಾಜಕೀಯ ವಿಸ್ತರಣೆ ಆರೋಪ ಬರುತ್ತದೆ ಎಂಬ ನೆಪ ಕೊಡಲಾಗಿತ್ತು. ಆದರೆ ಅದೇ ವರ್ಷ 'ಆಪರೇಷನ್ ಕಮಲ'ದ ದೆಸೆಯಿಂದ ಮಾಜಿ ಸಚಿವ ಚೆನ್ನಗಪ್ಪ ಪುತ್ರ ಗೌರಿಶಂಕರ್ ರಾಜೀನಾಮೆ ನೀಡಿದ್ದರ ಪರಿಣಾಣ ತೆರವಾದ ಮಧುಗಿರಿ ವಿಧಾನಸಭೆ ಕ್ಷೇತ್ರದ ಮರುಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದು ಭವಾನಿ ಅವರನ್ನು ಕೆರಳಿಸಿತ್ತು. ಆಗಲೂ ಭವಾನಿ ಅವರ ಕೋಪ ಶಮನಕ್ಕೆ ದೇವೇಗೌಡರು ಸಾಕಷ್ಟು ಕಾವೇರಿ ನೀರು ಕುಡಿಯಬೇಕಾಯಿತು.

ಆಪರೇಷನ್ ಕಮಲ ಪ್ರಯುಕ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಯೋಗೀಶ್ವರ್ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾವೆ ಕೊಟ್ಟು 2009ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಗೆದ್ದ ಕುಮಾರಸ್ವಾಮಿ ರಾಮನಗರ ವಿಧಾನಸಭೆ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ಈ ಅವಳಿ ಕ್ಷೇತ್ರಗಳಿಗೆ ನಡೆದ ಮರುಚುನಾವಣೆ ಸಂದರ್ಭ ಒಂದು ಕಡೆ ಅಭ್ಯರ್ಥಿ ಆಗಲು ಭವಾನಿ ರೇವಣ್ಣ ಮತ್ತೆ ಬಯಸಿದ್ದರು. ಬರೀ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸುವುದರಿಂದ ಪಕ್ಷದೊಳಗೆ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸಿ ತೋರಿಸಬೇಕು ಎಂದು ಗೌಡರ ಅಳಿಯ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಕಿವಿ ಮಾತು ಹೇಳಿದ್ದರಿಂದ, ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಕ್ರಮವಾಗಿ ಅಶ್ವತ್ಥ್ ಹಾಗೂ ರಾಜು ಅಭ್ಯರ್ಥಿಗಳಾಗಿ ಗೆದ್ದರು. ಆಗಲೂ ಭವಾನಿ ಅವರ ಆಸೆಗೆ ತಣ್ಣೀರು ಬಿದ್ದುತ್ತು. ಅವರ ಕೋಪ ಕುಮಾರಸ್ವಾಮಿ ಅವರತ್ತಲೇ ತಿರುಗಿತ್ತು.

ಭವಾನಿ ಅನ್ವೇಷಣೆ

ಭವಾನಿ ಅವರು ಇಷ್ಟಕ್ಕೆ ಸುಮ್ಮನಾಗಲಿಲ್ಲ. 'ಮರಳಿ ಯತ್ನವ ಮಾಡು' ಎಂಬಂತೆ ರಾಜಕೀಯ ಭವಿಷ್ಯದ ಅನ್ವೇಷಣೆಯನ್ನು ಹಾಸನ ಜಿಲ್ಲೆಗೆ ವರ್ಗಾಯಿಸಿದರು. ಜತೆಗೆ ಪುತ್ರ ಪ್ರಜ್ವಲ್ ಅವರನ್ನೂ ಅಲ್ಲಿನ ರಾಜಕೀಯಕ್ಕೆ ಪರಿಚಯಿಸಿದರು. ಹೇಗಿದ್ದರೂ ಪತಿ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರದ ಸಂಪರ್ಕ ಇತ್ತು. ಇದನ್ನೇ ರಾಜಕೀಯ ಕಾರ್ಯಾಚರಣೆಗೆ ಬಳಿಸಿಕೊಂಡರು. ಈಗ ಪ್ರಜ್ವಲ್ ಬೇಲೂರು ಹಾಗೂ ಭವಾನಿ ಅವರು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ರಾಜಕೀಯ ನೆಲೆಯ ಗುರಿಯಾಗಿಟ್ಟುಕೊಂಡು, ಹಾಸನ ಜಿಲ್ಲೆಯಾದ್ಯಂತ ರಾಜಕೀಯ ಚಟುವಟುಕೆ ನಡೆಸುತ್ತಿದ್ದಾರೆ.
ಫಿಲ್ಮಿ ಶೈಲಿಯ ಪ್ರಜ್ವಲ್ ಉತ್ತಮ ಮಾತುಗಾರಿಕೆ, ಚುರುಕು ಬುದ್ಧಿ ಹೊಂದಿದ್ದು, ಈಗಾಗಲೇ ಜಿಲ್ಲೆಯಲ್ಲಿ ಅಭಿಮಾನಿಗಳ ಸಂಘ ಸೃಷ್ಟಿಸಿಕೊಂಡಿದ್ದಾರೆ. ಆದರೆ ಅವರ ಅತಿಯಾದ ವರ್ತನೆ, ದೊಡ್ಡ ನಾಯಕರಂತೆ ಬಿಂಬಿಸಿಕೊಳ್ಳುವ ಯತ್ನ ಪಕ್ಷದ ಸ್ಥಳಈಯ ಮುಖಂಡರ ಅಸಮಾಧಾನ ಹಾಗೂ ಮುಜುಗರಕ್ಕೂ ಕಾರಣವಾಗಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವೇಗೌಜರ ಪರವಾಗಿ ರೇವಣ್ಣ, ಭವಾನಿ ಅವರ ಜತೆ ಪ್ರಜ್ವಲ್ ಓಡಾಟವೂ ಜೋರಾಗಿತ್ತು. ಆದರೆ 2009ರ ಚುನಾವಣೆಯಲ್ಲಿ ಸುಮಾರು ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಗೌಡರು, ಈ ಬಾರಿ ಲಕ್ಷ ಮತಗಳ ಅಂತರಕ್ಕೆ ಕುಸಿದಿದ್ದಾರೆ.

ಭವಾನಿ ಹಾಗೂ ಪ್ರಜ್ವಲ್‌ಗೆ ರಾಜಕೀಯ ಹಂಬಲ ಇದೆ. ಹೀಗಾಗಿ ಹಾಸನ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಶ್ರಮಿಸುತ್ತಿದ್ದಾರೆ.
ಇದರ ಜತೆಗೆ ಇರಲಿ ಎಂದು ಮೈಸೂರು, ಮಂಡ್ಯ ರಾಜಕೀಯದಲ್ಲೂ ಕೈಯಾಡಿಸುತ್ತಿದ್ದಾರೆ. ಭವಿಷ್ಯದ ಚುನಾವಣೆಗಳನ್ನು ಗಮನದಲ್ಲಿಟುಕೊಂಡು ಹೊಳೆನರಸೀಪುರದಲ್ಲಿ ಭವಾನಿ ಹಾಗೂ ಬೇಲೂರಿನಲ್ಲಿ ಪ್ರಜ್ವಲ್ ರಾಜಕೀಯ ಚಟುವಟಿಕೆ ನಡೆಸುತ್ತಿದ್ದಾರೆ.

ಆದರೆ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರಾಜಕೀಯ ಹಸ್ತಕ್ಷೇಪ ಸ್ಥಳೀಯ ನಾಯಕರ ದೂರಿನ ಸ್ವರೂಪದಲ್ಲಿ ದೇವೇಗೌಡರ ನಿದ್ದೆಗೆಡಿಸಿದೆ. ಪ್ರಜ್ವಲ್ ಪ್ರಖರತೆಯಲ್ಲಿ ರೇವಣ್ಣ ಕೂಡ ಮಸುಕಾಗುತ್ತಿದ್ದಾರೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪ್ರಜ್ವಲ್‌ಗೆ ಬುದ್ಧಿ ಮಾತು ಹೇಳಲು ಆಗದೆ, ಸುಮ್ಮನಿರಲೂ ಆಗದೇ ರೇವಣ್ಣ ಮೂಕವೇದನೆ ಅನುಭವಿಸುತ್ತಿದ್ದಾರೆ.

ರೇವಣ್ಣ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳದ ಪ್ರಜ್ವಲ್ ಹಾಗೂ ಭವಾನಿ ಅವರ ವರ್ತನೆ ಚುನಾವಣೆ ಭವಿಷ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಗೌಡರು ಚಿಂತಿತರಾಗಿದ್ದಾರೆ.

ಹಾಸನ ಕ್ಷೇತ್ರ ಉಳಿಸಿಕೊಳ್ಳಬೇಕಾದರೆ ಅಲ್ಲೇ ಇದ್ದು, ರಾಜಕೀಯ ಉಸ್ತುವಾರಿ ವಹಿಸಿಕೊಳ್ಳುವುದು ಸೂಕ್ತ ಎಂದು ಅವರಿಗೆ ಬಲವಾಗಿ ಅನ್ನಿಸಿದೆ. ಇನ್ನು ತಡ ಮಾಡಿದರೆ ಯಡವಟ್ಟು ಎಂದೆನಿಸಿದೆ. ಹೀಗಾಗಿ ಹುಟ್ಟೂರಿಗೆ ಮರಳಿದ್ದಾರೆ.

ಈ ಮಧ್ಯೆ, ಭವಾನಿ ಅವರು 2013 ರಲ್ಲಿ ನಡೆದೆ ಮಂಡ್ಯ ಲೋಕಸಭೆಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದರು. ಆದರೆ ಆಗಲೂ ಟಿಕೆಟ್ ಕೊಡಲಿಲ್ಲ. ಟಿಕೆಟ್ ಸಿಕ್ಕ ಪುಟ್ಟರಾಜು ನಟಿ ರಮ್ಯಾ ವಿರುದ್ಧ ಸೋತಿದ್ದರು. ಕಳೆದ ಚುನಾವಣೆಯಲ್ಲಿ ಅದೇ ರಮ್ಯಾ ವಿರುದ್ದ ಗೆದ್ದರು ಎಂಬುದು ಬೇರೆ ಮಾತು. ಕಳೆದ ಲೋಕಸಭೆ ಚುನಾವಣೆಯಲ್ಲೂ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ಮತ್ತೆ ಪ್ರಯತ್ನಿಸಿದರು. ಈ ಬಾರಿಯಾದರೂ ತಾಯಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅಭಿಲಾಷೆಯೊಂದಿಗೆ ಪ್ರಜ್ವಲ್ ಮೈಸೂರು-ಕೊಡಗು ಸುತ್ತಿ ಸರ್ವೇ ಮಾಡಿ ಬಂದಿದ್ದರು. ಆದರೆ ಗೌಡರು ಆಗಲೂ ಟಿಕೆಟ್ ಕೊಡಲಿಲ್ಲ. ಇದಕ್ಕೂ ಕುಮಾರಸ್ವಾಮಿ ಅವರೇ ಕಾರಣ ಎಂಬುದು ಭವಾನಿ ಮತ್ತು ಪ್ರಜ್ವಲ್ ನಂಬಿಕೆ. ಈ ನಂಬಿಕೆಯೇ ಗೌಡರ ಕುಟುಂಬದಲ್ಲಿ ಒಂದಷ್ಟು ಅಂತರಗಳಿಗೂ ಕಾರಣವಾಗಿದೆ.

ನಿಖಿಲ್ ಮಹತ್ವಾಕಾಂಕ್ಷೆ
ಇನ್ನೊಂದೆಡೆ ಕುಮಾರಸ್ವಾಮಿ ಪುತ್ರ ನಿಖಿಲ್‌ಗೌಡ ಕೂಡ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಆದರೆ ಹಿರಿಯರು ಈಗಲೇ ಬೇಡ ಎಂದಿದ್ದರಿಂದ ಸುಮ್ಮನಾದರು.

ಈ ಮಧ್ಯೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಟೋಲ್ ಸಂಗ್ರಹ ಘಟಕದ ಮೇಲೆ ನಡೆದ ಜೆಡಿಎಎಸ್ ಕಾರ್ಯಕರ್ತರ ದಾಳಿಯ ನೇತೃತ್ವವನ್ನು ನಿಖಿಲ್ ಗೌಡವಹಿಸಿದ್ದರು.

ಈ ಪ್ರತಿಭಟನೆಗೆ ತಮ್ಮನ್ನು ಆಹ್ವಾನಿಸಲಿಲ್ಲ ಎಂದ ಪ್ರಜ್ವಲ್ ದೂರವಾಣಿ ಮೂಲಕ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವೇಗೌಡರ ಕುಟುಂಬದೊಳಗಿನ ರಾಜಕೀಯ ಪೈಪೋಟಿ, ಮೇಲಾಟ ಮೂರನೇ ತಲೆಮಾರಿಗೆ ವಿಸ್ತಿರಿಸಿರುವ ಬಗೆ ಇದು. ಗೌಡರ ಬೇಸರಕ್ಕೆ ಜಮಾ ಆಗಿರುವ ಕಾರಣಗಳಲ್ಲಿ ಇದೂ ಒಂದು.

ಇನ್ನೂ ದೇವೇಗೌಡರು ಹಾಗೂ ಕುಮಾರಸ್ವಾಮಿ ನಡುವಣ ಸಂಬಂಧ. ಮಾತುಗಾರಿಕೆ, ಪಕ್ಷ ಸಂಘಟನೆ, ಚುನಾವಣೆ ತಂತ್ರ ಹೆಣೆಯುವ ವಿಚಾರದಲ್ಲಿ ಕುಟುಂಬದ ಇತರ ಸದಸ್ಯರಿಗೆ ಹೋಲಿಸಿದಲ್ಲಿ ಕುಮಾರಸ್ವಾಮಿ ಸಮರ್ಥರು, ಅವರಿಗೆ ಜನರನ್ನು ತಲುಪುವ ಬಗೆ ಕರಗತ ಎಂಬುದು ದೇವೇಗೌಡರಿಗೆ ಗೊತ್ತಿದೆ. ಆದರೆ ಇತ್ತೀಚೆಗೆ ಕುಮಾರಸ್ವಾಮಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದು ಅವರಲ್ಲಿ ನಿರಾಸೆ ಮೂಡಿಸಿದೆ. ನಾನಾ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ತಮಗೆ ಇಷ್ಟ ಬಂದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಪಕ್ಷದ ಇತರ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಅವರೆಲ್ಲ ಪಕ್ಷದಿಂದ ವಿಮುಖರಾಗಿದ್ದಾರೆ ಎಂಬುದು ಗೌಡರ ನೋವು. ಆಗಾಗ್ಗೆ ಕುಮಾರಸ್ವಾಮಿ ನೀಡುವ ವಿವಾದಾತ್ಮಕ ಹೇಳಿಕೆಗಳು, ಅದರಲ್ಲೂ ವಿಶೇಷವಾಗಿ ಶಾಸಕರಿಗೆ ನೀಡಲೆಂದೇ ಚುನಾವಣೆ ಅಭ್ಯರ್ಥಿಗಳಿಂದ ದೇಣಿಗೆ ಪಡೆಯಲಾಗಿದೆ ಎಂದು ಇತ್ತೀಚೆಗೆ ಆಡಿದ ಮಾತಂತೂ ಅವರಿಗೆ ಬಾರಿ ಮುಜುಗರ ಉಂಟು ಮಾಡಿದೆ. ಈ ಬಗ್ಗೆ ಅವರು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿರುವುದೂ ಉಂಟು. ಆದರೆ ಕುಮಾರಸ್ವಾಮಿ ಅವರ ವಾದವೇ ಬೇರೆ. ವಿಧಾನಸಭೆ, ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೌಡರು ತಮಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತಿಲ್ಲ. ಎಲ್ಲದಕ್ಕೂ ತಕರಾರು ತೆಗೆಯುತ್ತಾರೆ. ಬಾಲಕೃಷ್ಣ, ರಮೇಶ್ ಸೇರಿದಂತೆ ಕುಟುಂಬದ ಇತರ ಸದಸ್ಯರ ಒತ್ತಡಗಳಿಗೆ ಮಣಿದು, ಅನರ್ಹರಿಗೆ ಟಿಕೆಟ್ ಕೊಡುತ್ತಿದ್ದಾರೆ.

ಮೇಲಿಂದ ಮೇಲೆ ಚುನಾವಣೆಗಳ ಸೋಲಿಗೆ ಇದೂ ಒಂದಿ ಕಾರಣ ಎಂಬುದು ಕುಮಾರಸ್ವಾಮಿ ಅವರ ಮುನಿಸು, ಇದನ್ನು ಆತ್ಮೀಯರ ಬಳಿ ಅವರೇ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್‌ಗೆ ಚಿನ್ನದ ವ್ಯಾಪಾರಿ ಶರವಣ ನೇಮಕವಂತೂ ಕುಮಾರಸ್ವಾಮಿ ಅವರಿಗೆ ಬಿಲ್‌ಕುಲ್ ಇಷ್ಟವಿರಲಿಲ್ಲ.

ಆಗದ ಸಮನ್ಯಯ


ಇದೆಲ್ಲದರ ಪರಿಣಾಮ ಕುಮಾರಸ್ವಾಮಿಯವರೇ ಒಂದು, ಇತರ ಸದಸ್ಯರೇ ಒಂದು ಎಂಬಂತಾಗಿದೆ. ಇದು ಕೂಡ ವಿಷಯಾಧಾರಿತವೇ. ಮೊದಲಾದರೆ ದೇವೇಗೌಡರ ಮಾತೇ ಅಂತಿಮವಾಗಿತ್ತು. ಅವರಿಗೆ ಯಾರೂ ಎದುರಾಡುತ್ತಿರಲಿಲ್ಲ. ಹೇಳಿದ್ದನ್ನು ಮೌನವಾಗಿ ಪಾಲಿಸುತ್ತಿದ್ದರು. ಆದರೆ ಕಾಲ ಈ ನಿಯಮವನ್ನು ಬದಲಿಸಿದೆ. ರಾಜಕೀಯ ಮತ್ತಿತರ ಮಹತ್ವಾಕಾಂಕ್ಷೆಗಳು ತನ್ನ ಆಳ, ವಿಸ್ತಾರಕ್ಕೆ ಅನುಗುಣವಾಗಿ ಕುಟುಂಬ ಸದಸ್ಯರನ್ನು ಬೇರೇ-ಬೇರೆ ಕೋನಗಳಲ್ಲಿ ಚಿಂತನೆ ನಡೆಸುವಂತೆ ಮಾಡಿದೆ.

ಹಿಂದಾದರೆ ಕುಟುಂಬದ ಒಳಗೆ ಎಷ್ಟೇ ವ್ಯತ್ಯಾಸವಿದ್ದರೂ, ಹೋರಗಿನ ವಿಚಾರಗಳ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲುತ್ತಿದ್ದರು. ವಿರೋಧಿಗಳನ್ನು ಸದೆಬಡಿಯಲು, ಅವರ ಎಡಮುರಿಗೆ ಕಟ್ಟಲು ಸಂಘಟಿತ ಯೋಜನೆ ರೂಪಿಸುತ್ತಿದ್ದರು. ಆದರೆ ಈಗ ಅದೇ ಮಾತನ್ನು ಹೇಳುವಂತಿಲ್ಲ. ವೈಯಕ್ತಿಕ ಹಿತಾಸಕ್ತಿಗಳು ಕುಟುಂಬದ ಒಗ್ಗಟ್ಟನ್ನು ಮೀರಿ ಬೆಳೆದಿವೆ. ಕುಟುಂಬ ವಿಸ್ತಾರವಾದಂತೆ ಸಂಬಂಧಗಳು ಟೊಳ್ಳಾಗುತ್ತಾ ಬಂದಿವೆ.

ಎಂಥೆಂಥ ರಾಜಕೀಯ ಸವಾಲುಗಳನ್ನು ಅರಗಿಸಿಕೊಂಡಿದ್ದ, ರಾಜಕೀಯ ವೈರಿಗಳನ್ನು ಧೂಳೀಪಟ ಮಾಡಿದ್ದ ದೇವೇಗೌಡರಿಗೆ ಬಾಳ ಇಳಿಸಂಜೆಯಲ್ಲಿ ಕುಟುಂಬದೊಳಗಿನ ಪ್ರತಿಕೂಲ ಬೆಳವಣಿಗೆಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಇಬ್ಬರನ್ನೂ ದಿಲ್ಲಿಗೆ ಕರೆಸಿಕೊಂಡು ನಡೆಸಿದ ಸಮನ್ವಯ ಮಾತುಕತೆಗಳು ನಿರೀಕ್ಷಿತ ಫಲ ಕೊಟ್ಟಿಲ್ಲ, ಹೀಗಾಗಿ ಅವರ ಮನಸ್ಸನ್ನು ನೋವು ಹಾಗೂ ದುಗುಡ ಆವರಿಸಿಕೊಂಡಿದೆ.

ಗೌಡರ ಮನೆಯೊಳಗಣ ಈ ಬೆಳವಣಿಗೆಗಳು ಜೆಡಿಎಸ್‌ನ ಇತರ ಮುಖಂಡರಲ್ಲಿ ಅಧೀರತೆ, ಪಕ್ಷದ ಬಗ್ಗೆ ಅನಾಸಕ್ತಿ, ವಿಮುಖತೆಗೆ ಕಾರಣವಾಗಿದೆ. ತಮ್ಮನ್ನು ವಿಚಾರಿಸಿಕೊಳ್ಳುವವರಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುವವರಿಲ್ಲ ಎಂಬ ಅನಾಥಪ್ರಜ್ಞೆ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೈಹಿಕವಾಗಿ ಜೆಡಿಎಸ್ ಜತೆಗಿದ್ದರೂ ಮಾನಸಿಕವಾಗಿ ಒಬ್ಬೊಬ್ಬರೇ ಗೌಡರು, ಕುಮಾರಸ್ವಾಮಿ ಅವರಿಂದ, ಆ ಮೂಲಕ ಜೆಡಿಎಸ್‌ನಿಂದಲೂ ದೂರ ಸರಿಯುತ್ತಿದ್ದಾರೆ. ಒಂದೆಡೆ ಕುಟುಂಬ ಸದಸ್ಯರ ಮೇಲೆ ಹಿಡಿತ ಕಳೆದುಕೊಂಡಿರುವ ಗೌಡರು, ಅವರ ನಡುವೆ ಸಮನ್ಯಯ ಸಾಧಿಸಲು ಒದ್ದಾಡುತ್ತಿದ್ದಾರೆ.

ಇನ್ನೊಂದೆಡೆ ಕುಟುಂಬ ರಾಜಕೀಯಕ್ಕೆ ಸೀಮಿತ ಎಂಬ ಆಪಾದನೆಗೆ ಒಳಗಾಗಿರುವ ಪಕ್ಷ ಹಾಗೂ ಇತರ ನಾಯಕರ ನಡುವೆ ಸಂಬಂಧ ಗಟ್ಟಿಗೊಳಿಸುವ ಹೆಣಗಾಟದೊಂದಿಗೆ ಗೌಡರು ಬೆಂಗಳೂರು ಬಿಟ್ಟು ಹಾಸನ ಸೇರಿದ್ದಾರೆ. ಅಲ್ಲಿಯೂ ಅವರಿಗೆ ಕುಟುಂಬ ಸದಸ್ಯರೇ ಸೃಷ್ಟಿಸಿರುವ ಅನೇಕ ಸವಾಲುಗಳು ಕೈ ಬೀಸಿ ಕರೆಯುತ್ತಿವೆ. ಮುಂದೇನು ಎಂಬ ಕುತೂಹಲ ಮೂಡಿಸಿವೆ.




-ಪಿ.ತ್ಯಾಗರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.