ಜಿಲ್ಲಾ ಸುದ್ದಿ

ಉದ್ಯಮಿ ತಲೆಗೆ ಗುಂಡಿಕ್ಕಿ ಕೊಲೆ

ಉದ್ಯಮಿ ತಲೆಗೆ ಗುಂಡಿಕ್ಕಿ ಕೊಲೆ
Published On :

ಬೆಂಗಳೂರು: ಆಪ್ತ ಸಹಾಯಕಿ ಜತೆಗಿನ ಅನೈತಿಕ ಸಂಬಂಧ ವಿಷಯಕ್ಕೆ ಉದ್ಯಮಿ ತಲೆಗೆ ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಉದ್ಯಮಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಹೈದ್ರಬಾದ್‌ನ ಸುಭಾಷ್(35) ಆರೋಪಿಯನ್ನು ಮಹದೇವಪುರ ಪೊಲೀಸರು ಸೀಮಾಂಧ್ರದಲ್ಲಿ ಬಂಧಿಸಿದ್ದಾರೆ. ವಿಜಯವಾಡದ ವೆಂಕಟರಾಮ(51) ಕೊಲೆಯಾದವರು. ಮತ್ತೊಬ್ಬ ಆರೋಪಿ ಹಾಗೂ ಮೃತರ ಆಪ್ತ ಸಹಾಯಕಿ ನಿರಂಜನಿ(29) ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.

ಅನೈತಿಕ ಸಂಬಂಧ?
ವಿಜಯವಾಡದ ನಿವಾಸಿ ವೆಂಕಟರಾಮ, ವೈಟ್ ಫೀಲ್ಡ್ ಸಮೀಪದ ಬಿಎಂಟಿಸಿ ವಾಣಿಜ್ಯ ಸಂಕೀರ್ಣದ 3ನೇ ಮಹಡಿಯನ್ನು 1 ವರ್ಷದ ಹಿಂದೆ ಗುತ್ತಿಗೆ ಪಡೆದಿದ್ದರು. ಅದನ್ನು ಶುಭ ಸಮಾರಂಭಗಳಿಗೆ ನೀಡುತ್ತಿದ್ದರು. ಆದರೆ ಪತ್ನಿ ಮತ್ತು ಮಕ್ಕಳ ಜತೆ ವಿಜಯಾವಡದಲ್ಲಿದ್ದ ಅವರು ವಾರಕ್ಕೊಮ್ಮೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.

ವ್ಯವಹಾರ ನೋಡಿಕೊಳ್ಳಲು ಚೆನ್ನೈನ ನಿರಂಜನಿಯನ್ನು ಆಪ್ತ ಸಹಾಯಕಿಯಾಗಿ ನೇಮಿಸಿದ್ದರು. ಈ ನಡುವೆ ಹೈದ್ರಾಬಾದ್ ಮಾರ್ಬಲ್ ಉದ್ಯಮಿ ಸುಭಾಷ್, ಇತ್ತೀಚೆಗೆ ವೆಂಕಟರಾಮ ಅವರಿಗೆ ಪರಿಚಯವಾಗಿದ್ದ. ಹಾಗಾಗಿ ಆತನೂ ಸಹ ಬೆಂಗಳೂರಿಗೆ ಬಂದಾಗ ವಾಮಿಜ್ಯ ಸಂಕೀರ್ಣದಲ್ಲೇ ತಂಗುತ್ತಿದ್ದ. ಈ ನಡುವೆ ನಿರಂಜನಿ ಹಾಗೂ ಸುಭಾಷ್ ವಿವಾಹವಾಗಲು ನಿರ್ಧರಿಸಿದ್ದರು.

ಆದರೆ, ವೆಂಕಟರಾಮ ಮತ್ತು ನಿರಂಜನಿ ನಡುವೆ ಅನೈತಿಕ ಸಂಬಂಧವಿತ್ತು ಎಂಬ ವಿಷಯ ತಿಳಿದ ಸುಭಾಷ್, ವೆಂಕಟರಾಮ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ.

ಆ.24ರಂದು ನಗರಕ್ಕೆ ಆಗಮಿಸಿದ್ದ ವೆಂಕಟರಾಮ ನಗರದಲ್ಲಿ ತಂಗಿದ್ದರು. ಆದೇ ದಿನ ಸುಭಾಷ್ ಕೂಡ ನಗರಕ್ಕೆ ಬಂದಿದ್ದ. ರಾತ್ರಿ 11.30ರ ವೇಳೆಗೆ ನಿರಂಜನಿ ವಿಚಾರವಾಗಿ ಆಕೆ ಮುಂದೆಯೇ ಅವರಿಬ್ಬರಿಗೂ ಜಗಳವಾಗಿದೆ. ಈ ವೇಳೆ ಸುಭಾಷ್ ತನ್ನ ಬಳಿಯಿದ್ದ ರಿವಾಲ್ವರ್‌ನಿಂದ ವೆಂಕಟರಾಮರ ತಲೆಗೆ ಗುಂಡು ಹಾರಿಸಿ, ನಿರಂಜಿನಿ ಜತೆ ಪರಾರಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಂದು ರಾತ್ರಿ 2 ಗಂಟೆಗೆ ಕಾರು ಚಾಲಕ ರಾಜು ಕೊಠಡಿಗೆ ಬಂದಾಗ ವೆಂಕಟರಾಮ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಆ.27ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮಹದೇಪುರ ಪೊಲೀಸರು ವೆಂಕಟರಾಮ ಸಾವಿನ ಬಳಿಕ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ನಿಂದ ಸುಭಾಷ್‌ನನ್ನು ಶುಕ್ರವಾರ ರಾತ್ರಿ ನೆಲ್ಲೂರಲ್ಲಿ ಬಂಧಿಸಿದ್ದಾರೆ. ನಿರಂಜನಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.