

ಬೆಂಗಳೂರು: ನಂದನ್ ನಿಲೇಕಣಿ ಅವರನ್ನು ರಾಜ್ಯ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮಕ್ಕೆ ಕಾಂಗ್ರೆಸ್‌ನಲ್ಲೇ ಭಾರಿ ಆಕ್ರೋಶ ಹಾಗೂ ವಿರೋಧ ವ್ಯಕ್ತವಾಗಿದೆ.
ಕಾಂಗ್ರೆಸ್‌ಅನ್ನು ಧಿಕ್ಕರಿಸಿ ದೆಹಲಿಗೆ ಹೊರಟಿರುವ ನಂದನ್ ನಿಲೇಕಣಿ ಅವರನ್ನು ಉಳಿಸಿಕೊಳ್ಳುವ ಯತ್ನ ಮಾಡಬಾರದು. ಅವರಿಗೆ ಯಾವುದೇ ಹುದ್ದೆ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಅವರನ್ನು ನಾಯಕರು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೋ ಹುದ್ದೆ ನೀಡುತ್ತಾರೆ ಎಂಬ ಉದ್ದೇಶದಿಂದ ನಂದನ್ ನಿಲೇಕಣಿ ಕಾಂಗ್ರೆಸ್ ತೊರೆದು ಅಲ್ಲಿಗೆ ಹೊರಟಿದ್ದಾರೆ. ಅವರನ್ನು ನಾವು ಉಳಿಸಿಕೊಳ್ಳುವುದು ಬೇಡ. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿ ಫಾರಂ ತೆಗೆದುಕೊಂಡು ಹೋದ ಮೇಲೆ ಪಕ್ಷದ ಕಚೇರಿ ಹಾಗೂ ಕಾರ್ಯಕರ್ತರೊಂದಿಗೆ ಅವರು ಬೆರೆತೇ ಇಲ್ಲ.
ಪಕ್ಷವನ್ನು ಮರೆತಿರುವ ಅವರಿಗೆ ಏಕೆ ಹುದ್ದೆ ಕೊಡಬೇಕು. ಮುಖ್ಯಮಂತ್ರಿಯವರು ಈ ಹೆಜ್ಜೆ ಇರಿಸಬಾರದು ಎಂದು ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರಧಾನಿ ಕರೆಗೆ ಓಗೊಡದೆ, ನಾಲ್ಕೈದು ದಿನ ಕಾಯಿರಿ. ನಾವೇ ಇಲ್ಲೊಂದು ಹುದ್ದೆ ನಿಮಗೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಮಾಯ್ಯ ಅವರು ನಂದನ್ ನಿಲೇಕಣಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕಾಗಿ ಅವರನ್ನು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಪ್ರಕ್ರಿಯೆಗೂ ಸಿಎಂ ಚಾಲನೆ ನೀಡಿದ್ದು, ನಾಲ್ಕೈದು ದಿನದಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ.