ಸೀಮೆ ಉಲ್ಲಂಘಿಸಿ ಆಂಧ್ರಕ್ಕೆ ಬನ್ನಿ

ಬೆಂಗಳೂರು: ರಾಜ್ಯದಿಂದ ಒಂದಾದ ಮೇಲೊಂದು ಕಂಪನಿಗಳು ಹೊರಹೋಗುತ್ತಿರುವ ಸಂದರ್ಭದಲ್ಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಆಹ್ವಾನಿಸಿರುವುದು ರಾಜ್ಯದ ಹೂಡಿಕೆ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಭಾರತೀಯ ಕೈಗಾರಿಕೆ ಒಕ್ಕೂಟ ಮಂಗಳವಾರ ಸಂಜೆ ಆಯೋಜಿಸಿದ್ದ ಉದ್ಯಮಿಗಳ ಸಭೆಯಲ್ಲಿ ಬೆಂಗಳೂರಿನ ಪ್ರತಿಷ್ಟಿತ ಉದ್ಯಮಗಳೊಂದಿಗೆ ದಿನವಿಡೀ ಚರ್ಚೆ ನಡೆಸಿದ ನಾಯ್ಡು, ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವುದಾದರೆ, ಒಂದು ತಿಂಗಳಲ್ಲಿ ಎಲ್ಲ ಅನುಮತಿ ನೀಡುತ್ತೇವೆ. ಇಲ್ಲವಾದಲ್ಲಿ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದು. ಆಂಧ್ರ ಪ್ರದೇಶದಲ್ಲಿ ನಿಮಗೆ ಬೇಕಾದ ಸವಲತ್ತು ನೀಡುತ್ತೇವೆ. ಕಡಿಮೆಯಾದರೆ ನನ್ನನ್ನು ಬಂದು ಕೇಳಿ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿ, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನಡುಕ ಹುಟ್ಟಿಸಿದ್ದಾರೆ.
ರಾಜ್ಯಕ್ಕೆ ಕಂಟಕ?
ಹೀರೋ ಹಾಗೂ ಇನ್ಫೋಸಿಸ್ ಸಂಸ್ಥೆಗಳು ಈಗಾಗಲೇ ಆಂಧ್ರದತ್ತ ಮುಖ ಮಾಡಿವೆ. ಇಂಥ ಆತಂಕದ ಪರಿಸ್ಥಿತಿಯಲ್ಲಿ, ನಾಯ್ಡು ಅವರ ಬೆಂಗಳೂರು ರೋಡ್ ಶೋ ರಾಜ್ಯಕ್ಕೆ ಮತ್ತಷ್ಟು ಕಂಟಕವಾಗುವ ಸಾಧ್ಯತೆಯಿದೆ. ವಿಭಜನೆಯ ನಂತರ ಉದಯವಾಗಿರುವ ಹೊಸ ರಾಜ್ಯ ಆಂಧ್ರಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶ ಕುರಿತಂತೆ ಸುಮಾರು ಅರ್ಧಗಂಟೆಗಳ ಕಾಲ ಮಾತನಾಡಿದ ನಾಯ್ಡು, ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯವನ್ನು ಐಟಿ ಹಾಗೂ ಆಹಾರ ಸಂಸ್ಕರಣಾ ಹಬ್ ಆಗಿ ಪರಿವರ್ತಿಸುವ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.
ಮಹಾನಗರಗಳ ಸ್ಪರ್ಧೆ:
ಈ ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ಬೆಂಗಳೂರು ಹಾಗೂ ಹೈದ್ರಾಬಾದ್ ನಡುವೆ ಐಟಿ ಉದ್ಯಮಕ್ಕಿದ್ದ ಸ್ಪರ್ಧೆ ಮತ್ತೆ ಮರುಕಳಿಸಲಿದೆ ಎಂಬ ಸ್ಪಷ್ಟ ಸೂಚನೆಯನ್ನು ಚಂದ್ರಬಾಬು ನಾಯ್ಡು ನೀಡಿದ್ದಾರೆ. ಹೈದ್ರಾಬಾದ್ ಅನ್ನು ಐಟಿ ಹಬ್ ಮಾಡಿದಂತೆ ವಿಶಾಖಪಟ್ಟಣ ಹಾಗೂ ವಿಜಯವಾಡವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದಿರುವ ಅವರು, ಈ ಹಿಂದೆ ಎರಡು ನಗರಗಳ ಮಧ್ಯೆ ಸ್ಪರ್ಧೆ ಹೆಚ್ಚಾದಾಗ ಒಟ್ಟಾಗಿ ನಡೆಯುವ ಮಾತನ್ನು ಎಸ್.ಎಂ.ಕೃಷ್ಣ ಹೇಳಿದ್ದರು. ಆದರೆ ಈ ಬಾರಿ ಮತ್ತಷ್ಟು ವ್ಯವಸ್ಥಿತ ಹಾಗೂ ಕ್ರಿಯಾತ್ಮಕವಾಗಿ ಸಿಲಿಕಾನ್ ಸಿಟಿ ಕಟ್ಟುತ್ತೇವೆ. ಇದು ಆಂಧ್ರಪ್ರದೇಶವನ್ನು ಮತ್ತೊಮ್ಮೆ ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸುವಂತೆ ಮಾಡಲಿದೆ ಎಂದು ಹೇಳಿದ್ದಾರೆ.
ರದ್ದಾದ ನಾಯ್ಡು ಸಿಎಂ ಭೇಟಿ
ಹುಡ್ ಹುಡ್ ಚಂಡಮಾರುತ ಅಪ್ಪಳಿಸಿದಾಗ ರಾಜ್ಯದಿಂದ ಮಾನವೀಯ ನೆರವು ಕೇಳಿದ್ದ ಚಂದ್ರಬಾಬು ನಾಯ್ಡು, ಈಗ ರಾಜ್ಯದ ಕೈಗಾರಿಕಾ ವಲಯಕ್ಕೆ ಚಂಡಮಾರುತದ ರೀತಿ ಲಗ್ಗೆ ಇಡಲು ಮುಂದಾಗಿದ್ದಾರೆ. ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳನ್ನು ಆಂಧ್ರಕ್ಕೆ ಸೆಳೆಯಲು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿರುವ ನಾಯ್ಡು, ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರದ ಸ್ನೇಹ ಮುದ್ರೆ ಒತ್ತಲು ನಡೆಸಿದ ಕೊನೆ ಪ್ರಯತ್ನ ಕೊನೆ ಹಂತದಲ್ಲಿ ವಿಫಲವಾಗಿದೆ.
ರೋಡ್ ಶೋ ನಡೆಸಲು ಬಂದಾಗಲೇ ಸಿಎಂ ಸಿದ್ದರಾಮಯ್ಯ ಜತೆ ಸೈಹಾರ್ದ ಮಾತುಕತೆಗೆ ಸಮಯ ನಿಗದಿ ಮಾಡುವಂತೆ ಕೋರಿ ಅವರು ಪತ್ರ ವ್ಯವಹಾರ ನಡೆಸಿದ್ದರು. ಆ ಸಂದಭಂದಲ್ಲಿ ಕೃಷ್ಣಾ ಮತ್ತು ಗೋದಾವರಿ ನೀರು ಮರು ಹಂಚಿಕೆ ಪ್ರಸ್ತಾಪವನ್ನು ಮುಂದಿಡುವ ಹವಣಿಕೆ ನಡೆಸಿದ್ದರು. ಇದಕ್ಕಾಗಿ ಸಮಯ ನಿಗದಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಕೊನೆ ಹಂತದಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಈ ಭೇಟಿಯನ್ನು ನಿರಾಕರಿಸಿತು. ನ.9ರಂದು ಸಿದ್ದರಾಮಯ್ಯರನ್ನು ಭೇಟಿ ಮಾಡಲು ನಾಯ್ಡು ಪ್ರಯತ್ನ ನಡೆಸಿದ್ದಾರೆ.
ಚಂಡಮಾರುತ ಹಾಗೂ ಹೊಸ ರಾಜ್ಯ ಉದಯದಿಂದ ಆಂಧ್ರ ಪ್ರದೇಶ ತತ್ತರಿಸಿವುದು ನಿಜ. ಇದನ್ನು ಸವಾಲಾಗಿ ಸ್ವೀಕರಿಸಿ, ಆಧುನಿಕ ಆಂಧ್ರಪ್ರದೇಶ ಕಟ್ಟುತ್ತೇವೆ. ಬಂಡವಾಳ ಹೂಡಿಕೆಯ ವಿಚಾರಕ್ಕೆ ನನ್ನ ಸರ್ಕಾರ ಪ್ರತಿಯೊಂದು ಕಚೇರಿ ದಿನದ 24 ಗಂಟೆ ತೆರೆದಿರುತ್ತದೆ.
-ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ ಮುಖ್ಯಮಂತ್ರಿ
ಐಟಿಐಆರ್ನಿಂದ ಹೊರಹೋಗಲು ನೀರಿನ ಸಮಸ್ಯೆಯೂ ಒಂದು ಕಾರಣ. ನಾವು ನಿರ್ಮಿಸುವ ದೊಡ್ಡ ಕ್ಯಾಂಪಸ್ಗಳಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಟ 50 ಲೀಟರ್ ನೀರಿನ ಅಗತ್ಯವಿರುತ್ತದೆ. ನಮ್ಮದೇ ಆದ ಆಹಾರ ಕೇಂದ್ರಗಳನ್ನು ಹೊಂದಿರಬೇಕಿರುತ್ತದೆ. ಇದಕ್ಕೆಲ್ಲ ಚರಂಡಿಯ ಸಂಸ್ಕರಿತ ನೀರನ್ನು ಬಳಸಲು ಸಾಧ್ಯವಿಲ್ಲ.
-ರಾಮದಾಸ್ ಕಾಮತ್, ಇನ್ಫೋಸಿಸ್ ಉಪಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


