ಮರುಕಳಿಸಿದ ಗತ ವೈಭವ

ಮೈಸೂರು: ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಯಶಸ್ವಿಯಾಗಿ ಬನ್ನಿ ಮಂಟಪ ತಲುಪಿದ್ದು, 90 ನಿಮಿಷಗಳ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಯಶಸ್ವಿಯಾಗಿ ಬನ್ನಿ ಮಂಟಪ ತಲುಪಿಸಿದ್ದಾನೆ.
ಸತತ ಮೂರನೇ ಬಾರಿಯೂ ಅಂಬಾರಿ ಹೊತ್ತಿದ್ದ ಅರ್ಜುನ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 750 ಕೆಜಿ ತೂಕದ ಅಂಬಾರಿ ಬನ್ನಿ ಮಂಟಪ ತಲುಪಿದೆ. ಮೈಸೂರು ನಗರದ ಪ್ರಮುಖ ಮಾರ್ಗಗಳಲ್ಲಿ ಸುಮಾರು 5 ಕಿ.ಮೀ ಕ್ರಮಿಸಿದ ಜಂಬೂಸವಾರಿ, ಸಂಜೆ ಸಮಯ 5.32ಕ್ಕೆ ಬನ್ನಿ ಮಂಟಪ ತಲುಪಿತು. ಆ ಮೂಲಕ 2014ರ ದಸರಾ ಜಂಬೂಸವಾರಿಗೆ ತೆರೆ ಬಿದ್ದಿತು.
ಅಸ್ವಸ್ಥನಾಗಿ ವಾಪಸಾದ ಅಭಿಮನ್ಯು
ಇಂದು ಮಧ್ಯಾಹ್ನ 3.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಜಂಬೂ ಸವಾರಿ ಸಾಮಾನ್ಯವಾಗಿಯೇ ನೆರವೇರಿತ್ತಾದರೂ ನಾದಸ್ವರ ತಂಡದವರನ್ನು ಹೊತ್ತಿದ್ದ ಅಭಿಮನ್ಯು ಆನೆ, ತೀವ್ರ ಅಸ್ವಸ್ಥವಾಗಿ ಅರ್ಧದಾರಿಯಲ್ಲೇ ನಿಂತಿತು. ಅಷ್ಟು ಹೊತ್ತಿಗಾಗಲೇ ಜಂಬೂ ಸವಾರಿ ಹೈವೇ ಸರ್ಕಲ್ ಬಳಿಗೆ ತಲುಪಿತ್ತು. ಅಭಿಮನ್ಯು ಅಸ್ವಸ್ಥತೆಯಿಂದ ಗೊಂದಲಕ್ಕೀಡಾದ ಅಧಿಕಾರಿಗಳು ಮತ್ತು ಮಾವುತರು ಆನೆಗೆ ಸತತ ನೀರು ಕುಡಿಸಿದರಾದರೂ ಅದು ಫಲಕಾರಿಯಾಗಲಿಲ್ಲ.
ನೀರು ಕುಡಿದಾಗ ಕೊಂಚ ದೂರ ಸಾಗಿದ ಅಭಿಮನ್ಯು ಮತ್ತೆ ಅಲ್ಲಿಯೇ ನಿಂತುಬಿಡುತ್ತಿದ್ದ. ಕೆಲವೊಂದು ವೇಳೆ ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಇದರಿಂದ ಆತಂಕಕ್ಕೀಡಾದ ಅಧಿಕಾರಿಗಳು ಅಭಿಮನ್ಯು ಆನೆಯನ್ನು ಮೆರವಣಿಗೆಯಿಂದ ವಾಪಸ್ ಕಳುಹಿಸಲು ನಿರ್ಧರಿಸಿದರು. ಕೊನೆಗೆ ಹೈವೇ ಸರ್ಕಲ್ ನಿಂದಲೇ ಆನೆಯನ್ನು ಬಿಡಾರಕ್ಕೆ ವಾಪಸ್ ಕಳುಹಿಸಲಾಯಿತು.
ದಸರಾ ಮಹೋತ್ಸವಕ್ಕೆ ಇಂದು ಅಧಿಕೃತ ತೆರೆ
ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಇಂದು ಅಧಿಕೃತ ತೆರೆ ಬೀಳಲಿದ್ದು, ಬನ್ನಿ ಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತು ಮತ್ತು ಸಿಡಿಮದ್ದು ಪ್ರದರ್ಶನದ ಬಳಿಕ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಪಂಜಿನ ಕವಾಯತು ಕಾರ್ಯಕ್ರಮವನ್ನು ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಚಾಲನೆ ನೀಡಿದರು.
ರಾಣಿ ಗೈರು ಹಾಜರಿಯಿಂದ ಕಳೆಗುಂದಿದ ಜಂಬೂ ಸವಾರಿ
ಇನ್ನು ಇಂದು ನಡೆದ ಜಂಬೂಸವಾರಿ ವೇಳೆಯಲ್ಲಿ ರಾಣಿ ಪ್ರಮೋದಾ ದೇವಿ ಅವರ ಗೈರು ಹಾಜರಿಯಿಂದ ಕಳೆಗುಂದಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದಾಗಿ ರಾಣಿ ಪ್ರಮೋದಾ ದೇವಿ ಅವರು ಈ ಬಾರಿಯ ದಸರೆಯಲ್ಲಿ ರಾಜಮನೆತನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಹೀಗಾಗಿಯೇ ಅವರು ಜಂಬೂಸವಾರಿಯಲ್ಲಿಯೂ ಕೂಡ ಪಾಲ್ಗೊಂಡಿರಲಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ದಸರೆ ಕಳೆಗುಂದಿತ್ತು. ರಾಣಿ ಪ್ರಮೋದಾ ದೇವಿ ಅವರ ಗೈರು ಹಾಜರಿ ಜಂಬೂ ಸವಾರಿಯಲ್ಲಿ ಎದ್ದು ಕಾಣುತ್ತಿತ್ತು.
ಮೈಸೂರು ದಸರಾ ಎಂದೊಡನೇ ನೆನಪಾಗುವುದು ಮೈಸೂರು ರಾಜಮನೆತನ ಮತ್ತು ಅವರು ನಡೆಸುವ ಖಾಸಗಿ ದರ್ಬಾರ್. ಆದರೆ ಈ ಬಾರಿ ರಾಜಮನೆತನದವರ ಗೈರು ಹಾಜರಿ ಮತ್ತು ಖಾಸಗಿ ದರ್ಬಾರ್ ರಹಿತ ದಸರಾ ನಿಜಕ್ಕೂ ಕಳೆಗುಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


