ಕಾರಂತರ ಬಾಲವನಕ್ಕೆ ಕೊನೆಗೂ ಕಾಯಕಲ್ಪ

ಮಂಗಳೂರು: ಮೇರು ಸಾಹಿತಿ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಬಾಲವನದಲ್ಲಿ ಶಿಥಿಲಗೊಂಡ ಅವರ ಮನೆಗೆ ಶೀಘ್ರವೇ ಕಾಯಕಲ್ಪ ಸಿಗಲಿದೆ. ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾರಂತರ ನಿವಾಸವನ್ನು ಪುನರುಜ್ಜೀವಗೊಳಿಸಲಿದೆ,
ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಹಕಾರದಲ್ಲಿ ಕಾರಂತರ ಮನೆ ನವೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು.30 ಲಕ್ಷ ಬಿಡುಗಡೆಗೊಳಿಸಿದೆ. ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ .
ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರು 1932ರಲ್ಲಿ ಪರ್ಲಡ್ಕದಲ್ಲಿ ಸ್ವಂತಮನೆ ನಿರ್ಮಿಸಿದ್ದರು. ಆ ಪ್ರದೇಶಕ್ಕೆ ಬಾಲವನ ಎಂದು ಹೆಸರಿಸಿದ್ದರು. ಬಾಲವನದಲ್ಲಿ ಮನೆಯಲ್ಲದೆ, ಮುದ್ರಣಾಲಯ, ನಾಟ್ಯಶಾಲೆ ಸೇರಿದಂತೆ ಇನ್ನೆರಡು ಕಟ್ಟಡ ನಿರ್ಮಿಸಿದ್ದರು. ಸುಮಾರು 40 ವರ್ಷಕ್ಕೂ ಅಧಿಕ ಕಾಲ ಪುತ್ತೂರನ್ನು ಕರ್ಮಭೂಮಿಯಾಗಿ ಮಾಡಿಕೊಂಡಿದ್ದ ಕಾರಂತರು, ಪ್ರಮುಖ ಸಾಹಿತ್ಯಗಳನ್ನು ರಚಿಸಿದ್ದರು. 1973ರಲ್ಲಿ ಪುತ್ತೂರನ್ನು ತ್ಯಜಿಸಿದ್ದರು. ಅವರ ಮನೆ ಈಗ ವಸ್ತು ಸಂಗ್ರಹಾಲಯ
ಶಿಥಿಲಗೊಂಡ ಮನೆ: ಕಾರಂತರು ಪತ್ನಿ ಮಕ್ಕಳೊಂದಿಗೆ ವಾಸಿಸುತ್ತಿದ್ದ ಮನೆ ಶಿಥಿಲಗೊಂಡ ಐದಾರು ವರ್ಷ ಕಳೆದಿದೆ. ಮನೆಯ ಮಾಡು ಮಳೆಗಾಲದಲ್ಲಿ ಸೋರುತ್ತಿದ್ದು, ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಪ್ರತಿ ವರ್ಷ ಪ್ಲಾಸ್ಟಿಕ್ ಹೊದಿಕೆ ಬದಲಾಯಿಸುತ್ತಿದ್ದಾರೆ. ಮಣ್ಣು ಮತ್ತು ಕಲ್ಲಿನಿಂದ ನಿರ್ಮಿಸಿದ ಗೋಡೆ ಗಟ್ಟಿಯಾಗಿದ್ದರೂ, ಅಲ್ಲಲ್ಲಿ ಹೆಂಚು ಒಡೆದಿದೆ. ಮರಮಟ್ಟುಗಳು ಪೂರ್ತಿ ಹಾಳಾಗಿದ್ದು, ಯಾವುದೇ ಕ್ಷಣದಲ್ಲಿ ಮಾಡು ಬೀಳುವ ಅಪಾಯವಿದೆ. ಬಾಲವನ ವೀಕ್ಷಣೆಗೆ ಬರುವ ಪ್ರವಾಸಿಗರು ಕಾರಂತರ ಮನೆಗೂ ಭೇಟಿ ಕೊಡುತ್ತಾರೆ. ಈ ಮನೆಯಲ್ಲಿ ಕಾರಂತರ ಅಪರೂಪದ ಚಿತ್ರಗಳು , ಅಪರೂಪದ ಪಾತ್ರೆ ಪರಿಕರಗಳು, ಎಲ್ಲದಕ್ಕಿಂತ ಹೆಚ್ಚಾಗಿ ಕಾರಂತರಿಗೆ 1979ರಲ್ಲಿ ಸಿಕ್ಕಿದ ಜ್ಞಾನಪೀಠ ಪ್ರಶಸ್ತಿ ಫಲಕ ಕೂಡಾ ಇದೆ. ಇದನ್ನು ಕಾಂಕ್ರಿಟ್ ಹಾಸಿನ ಗ್ರಿಲ್ನಲ್ಲಿ ಗುಂಡು ನಿರೋಧಕ ಗಾಜಿನೊಳಗೆ ಭದ್ರವಾಗಿ ಇಡಲಾಗಿದೆ. ಇವೆಲ್ಲವನ್ನು ಸಂರಕ್ಷಿಸುವ ಸಲುವಾಗಿ ಶಿಥಿಲಗೊಂಡ ಮನೆ ದುರಸ್ತಿಗೆ ಮೂರು ವರ್ಷ ಹಿಂದೆ ಸಹಾಯಕ ಆಯುಕ್ತರು ನಿರ್ಧರಿಸಿದ್ದರು. ಯಾರದೂ ಆರೈ ಕೆಯಿಲ್ಲದೆ ಪಾಳು ಬಿದ್ದಿದ್ದ ಬಾಲವನಕ್ಕೆ ಮೊದಲ ಬಾರಿಗೆ ಪುನಶ್ಚೇತನ ಸಿಕ್ಕಿದ್ದು 1998ರಲ್ಲಿ. ಹರ್ಷಗುಪ್ತ ಪುತ್ತೂರು ಸಹಾಯಕ ಕಮಿಷನರ್ ಆಗಿದ್ದಾಗ ಬಾಲವನಕ್ಕೆ ಹೊಸ ಸ್ವರೂಪ ನೀಡಿದರು. ಬಾಲವನವನ್ನು ಕಾಂಕ್ರಿಟೀಕರಣಗೊಳಿಸುತ್ತಾರೆ ಎಂಬ ಟೀಕೆಯೂ ಕಾರಂತಾಭಿಮಾನಿಗಳಿಂದ ವ್ಯಕ್ತವಾಗಿತ್ತು.
ಕೆಡವಿ ನಿರ್ಮಿಸಲು ವಿರೋಧ: ಮೂಲ ಸ್ವರೂಪ ಉಳಿಸಿಕೊಂಡು ಕಾರಂತರ ಮನೆಯನ್ನು ಪುನರುಜ್ಜೀವಗೊಳಿಸಲು ಹಿಂದಿನ ಸಹಾಯ ಕಮಿಷನರ್ ಆಗಿದ್ದ ಪ್ರಸನ್ನ ಹಾಹೂ ಕೃಷ್ಣಮೂರ್ತಿ ನಿರ್ಧರಿಸಿದ್ದರು. ಮನೆಯನ್ನು ಕೆಡವಿ ಪುನರ್ ನಿರ್ಮಿಸುವ ಕಾಮಗಾರಿ ನಡೆಯಲಿಲ್ಲ. ಆ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಾಚ್ಯವಸ್ತು ಇಲಾಖೆ ಸಹಕಾರದಲ್ಲಿ ಕಾರಂತರ ಮನೆಯನ್ನು ಯಥಾಸ್ಥಿತಿಯಲ್ಲೇ ಪುನಶ್ಚೇತನಗೊಳಿಸುವ ಭರವಸೆ ನೀಡಿದ್ದರು.
ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮೀರು ಬಾರಿ ಬಾಲವನಕ್ಕೆ ಭೇಟಿ ನೀಡಿ, ಕಾರಂತರ ಶಿಥಿಲಗೊಂಡ ಮನೆಯ ಎರಡು ಮೂಲೆಗಳಿಂದ ಮಣ್ಣು ಹಾಗೂ ಕಲ್ಲಿನ ಸ್ಯಾಂಪಲ್ ಅಗೆದು ಸಂಗ್ರಹಿಸಿದ್ದಾರೆ. ಕಲ್ಲಿನ ಆಧಾರ ಸ್ತಂಭ ಹಾಗೂ ಮಣ್ಣಿನ ಗೋಡೆ ಇದ್ದು ಕಟ್ಟಡ ಭದ್ರವಾಗಿದೆ. ಆದ್ದರಿಂದ ಗೋಡೆ ಶಿಥಿಲಗೊಂಡಿಲ್ಲ . ಆದರೆ ಮಾಡು ಹೊಸದಾಗಿ ರಚಿಸಬೇಕು, ಶಿಥಿಲಗೊಂಡ ಮರಮಟ್ಟುಗಳನ್ನು ಬದಸಲಿಸಬೇಕು. ಹಾಳಾದ ಕಿಟಕಿ, ಬಾಗಿಲನ್ನು ಸರಿಪಡಿಸಬೇಕು. ಅಲ್ಲದೆ ಗೋಡೆಗಳಿಗೆ ಸುಣ್ಣಬಣ್ಣ ಬಳಿಯಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿ ದೊರೆರಾಜು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈಗ ಬಾಲವನದ ಸ್ವರೂಪ
ಕಾರಂತರ ಬಾಲವನ ಈಗ ಹಚ್ಚಹಸಿರಿನಿಂದ ಕೂಡಿದ್ದರೂ ಕಾಂಕ್ರಿಟ್ ಛಾಪಿನಿಂದ ಹೊರತಾಗಿಲ್ಲ. ಮಕ್ಕಳ ಆಟದ ವಿವಿಧ ಪರಿಕರ, ಹಸಿರು ಸೌಂದರ್ಯ ಸವಿಯಲು ಕಾಲು ಹಾದಿ , ಕಾರಂತರ ಬರಹ ಕೊಠಡಿ ಗ್ರಂಥಾಲಯವಾಗಿದೆ. ಕಾರಂತರ ಮನೆ ವಸ್ತು ಸಂಗ್ರಹಾಲಯ. ನಾಟ್ಯಶಾಲೆ ಚೈತನ್ಯ ಹಾಲ್ ಆಗಿದೆ. ಬಯಲು ರಂಗಮಂದಿರ, ಅದರ ಪಕ್ಕದಲ್ಲೇ ವಾಚನಾಲಯ, ನಂತರ ಈಜುಕೊಳವಿದೆ. ಪುತ್ತೂರು ಪೇಟೆಯಿಂದ ಒಂದು ಕಿ.ಮೀ ದೂರ ಪರ್ಲಡ್ಕದಲ್ಲಿರುವ ಬಾಲವನಕ್ಕೆ ಸೋಮವಾರ ಹೊರತುಪಡಿಸಿದರೆ ಬೇರೆಲ್ಲ ದಿನ ಸಾರ್ವಜನಿಕರ ಭೇಟಿಗೆ ಅವಕಾಶವಿದೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


