ನವೆಂಬರ್‌ನಿಂದ ಹಿರಿಯರ ಬಾಯಿತುಂಬಾ ನಗು

-60 ವರ್ಷ ತುಂಬಿದ ಬಿಪಿಎಲ್ ಮಂದಿಗೆ ಸರ್ಕಾರದಿಂದಲೇ ಹಲ್‌ಸೆಟ್
ಬೆಂಗಳೂರು: ಬಡವರ್ಗದ ಜನರು ವಯಸ್ಸಾದ ಮೇಲೆ ಚೆನ್ನಾಗಿ ನಗಾಡಬೇಕು, ಊಟದ ರುಚಿ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಬಿಪಿಎಲ್ ವರ್ಗದ 60 ವರ್ಷ ಮೀರಿದವರಿಗೆ ಉಚಿತವಾಗಿ ಕೃತಕ ದಂತಪಂಕ್ತಿ ನೀಡುವ 'ದಂತ ಭಾಗ್ಯ' ಯೋಜನೆಯನ್ನು ಸರ್ಕಾರ ನವೆಂಬರ್‌ನಿಂದ ಜಾರಿಗೆ ತರಲಿದೆ.
ಬಾಯಿ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ನಿರ್ಧರಿಸಿರುವ ಸರ್ಕಾರ, ಇದರ ಭಾಗವಾಗಿ ರಾಜ್ಯದಲ್ಲಿರುವ ಬಿಪಿಎಲ್ ವರ್ಗಕ್ಕೆ ಸೇರಿದ 60 ವರ್ಷ ಮೀರದವರಿಗೆ ಸಂಪೂರ್ಣ ದಂತಪಂಕ್ತಿ ಇಲ್ಲದವರಿಗೆ ಉಚಿತವಾಗಿ ಕೃತಕ ದಂತಪಂಕ್ತಿ ನೀಡಲಿದೆ.
ಈ 'ದಂತ ಭಾಗ್ಯ' ಯೋಜನೆಯನ್ನು ಆರೋಗ್ಯ ಇಲಾಖೆ ಮತ್ತು 45 ದಂತ ವೈದ್ಯ ಕಾಲೇಜುಗಳ ಸಹಭಾಗಿತ್ವದಲ್ಲಿ ಈ ಯೋಜನೆ ನವೆಂಬರ್ 3ನೇ ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಈ ಯೋಜನೆಗಾಗಿ ಆರೋಗ್ಯ ಇಲಾಖೆ ಮತ್ತು ದಂತ ವೈದ್ಯ ಕಾಲೇಜುಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅರ್ಹ ಫಲಾನುಭವಿಗಳನ್ನು ಗ್ರಾಮಾಂತರದಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಗುರುತಿಸಲಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳು ಗುರುತಿನ ಕಾರ್ಡ್ ನೀಡುತ್ತಾರೆ.
ಈ ಗುರುತಿನ ಚೀಟಿಯೊಂದಿಗೆ ಸೂಚಿಸಿದ ದಂತ ವೈದ್ಯ ಕಾಲೇಜಿನಲ್ಲಿ ದಂತಪಂಕ್ತಿ ಅಳವಡಿಸಿಕೊಳ್ಳಬಹುದು ಎಂದರು.
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕ್ಷೇತ್ರಮಟ್ಟದಲ್ಲಿ ಯಾವುದೇ ಕಾರ್ಯಕರ್ತರು ಇಲ್ಲದಿರುವುದರಿಂದ ಅಲ್ಲಿ ಆಯಾ ಆಸ್ಪತ್ರೆಯ ದಂತ ವೈದ್ಯರು ಅಥವಾ ಆಡಳಿತ ವೈದ್ಯಾಧಿಕಾರಿಗಳಿಂದ ಗುರುತಿನ ಚೀಟಿ ಪಡೆಯಬಹುದು.
ಬಿಪಿಎಲ್ ಕಾರ್ಡ್ ಹಾಗೂ ವಯಸ್ಸಿನ ದಾಖಲೆಗಳನ್ನು ನೀಡಬೇಕಾಗುತ್ತದೆ. ಫಲಾನುಭವಿಗಳನ್ನು ಗುರುತಿಸುವ ಆಶಾ ಕಾರ್ಯಕರ್ತೆಯರಿಗೆ ಪ್ರತಿ ಫಲಾನುಭವಿಗೆ ಅನುಗುಣವಾಗಿ ತಲಾ ರು.100 ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಈ ಕಾರ್ಯಕ್ರಮ ಜಾರಿಗೊಳಿಸಲು ಹಾಗೂ ರೂಪುರೇಷೆ ಸಿದ್ಧಪಡಿಸಲು ಮಂಗಳೂರಿನ ಎನೆಪೋಯ ದಂತ ಕಾಲೇಜಿನ ಹಿರಿಯ ಪ್ರೋಫೆಸರ್ ಡಾ. ಗಣೇಶ್ ಶಣೈ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು.
ಪ್ರತಿ ಫಲಾನುಭವಿಗಳಿಗೆ ದಂತಪಂಕ್ತಿ ನೀಡಲು ಸರ್ಕಾರಕ್ಕೆ ರು.500 ವೆಚ್ಚವಾಗಲಿದೆ. ಇದಕ್ಕಾಗಿ ರು.2 ಕೋಟಿ ಮೀಸಲಿಡಲಾಗಿದ್ದು, ಅಗತ್ಯಬಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


