ಜಿಲ್ಲಾ ಸುದ್ದಿ

ಭೂಕಬಳಿಕೆ: ಖಮರುಲ್ ವಿರುದ್ಧ ದೂರು

ಭೂಕಬಳಿಕೆ: ಖಮರುಲ್ ವಿರುದ್ಧ ದೂರು
Published On :

ಬೆಂಗಳೂರು: ವಕ್ಛ್ ಇಲಾಖೆ ಸದಸ್ಯರಾಗಿದ್ದ ವೇಳೆ ಅಧಿಕಾರ ದುರುಪಯೋಗಪಡಿಸಿಕೊಂಡು ವಕ್ಛ್ ಜಮೀನು ಕಬಳಿಕೆ ಮಾಡಿದ ಆರೋಪದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ದೂರಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಡಿಸೆಂಬರ್ ಅಂತ್ಯದ ವೇಳೆಗೆ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕೋಲಾರ ಮೂಲದ ತಬ್ರೇಜ್ ಪಾಷಾ ಎಂಬುವರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಲಯ ಗುರುವಾರ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?
ಗುಲ್ಬರ್ಗ ನಗರದ ಬಡೇಪುರದಲ್ಲಿರುವ 8 ಎಕರೆ 34 ಗುಂಟೆ ಜಮೀನು, ವಕ್ಛ್ ಅಡಿಯಲ್ಲಿ ಬರುವ ಹಜರತ್ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಮಂಜೂರಾಗಿತ್ತು. ಈ ಜಮೀನನ್ನು ಸೈಯ್ಯದ್ ದಸ್ತಗೀರ್ ಎಂಬುವರು ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಹೊಂದಿರುವುದಾಗಿ ಹೇಳಿ ಖಮರುಲ್ ಇಸ್ಲಾಂ ಅವರಿಗೆ ಹಸ್ತಾಂತರಿಸಿದ್ದಾರೆ.

ನಿಯಮ ಉಲ್ಲಂಘಿಸಿ ವಕ್ಛ್ ಜಮೀನು ಹಸ್ತಾಂತರ ನಡೆಸಿದ್ದರಿಂದ ವಕ್ಛ್ ಸಮಿತಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಆದರೆ. 1988ರಲ್ಲಿ ವಕ್ಛ್ ಸಮಿತಿ ಸದಸ್ಯರಾಗಿದ್ದ ಖಮರುಲ್ ಇಸ್ಲಾಂ, ಪ್ರಭಾವ ಬಳಸಿ ತಮಗೆ ಜಮೀನು ಮಂಜೂರು ವಿರೋಧಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಾಪಸ್ ತೆಗೆದುಕೊಳ್ಳುವಂತೆ ವಕ್ಛ್ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಮೇಲ್ಮನವಿ ವಾಪಸ್ ಆಗಿತ್ತು.

ನಂತರ ಅವರು ತಮ್ಮ ಸಹೋದರನ ಜತೆ ಸೇರಿ ವಕ್ಛ್ ಜಮೀನನ್ನು ಸೈಟ್‌ಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದರು. ಈ ಮೂಲಕ ಖಮರುಲ್ ಇಸ್ಲಾಂ ಅವರು ಕೋಟ್ಯಂತರ ಬೆಲೆ ಬಾಳುವ ವಕ್ಛ್ ಜಮೀನನ್ನು ಕಬಳಿಸಿದ್ದಾರೆ ಎಂದು ತಬ್ರೇಜ್ ಪಾಷಾ ಆರೋಪಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, 2014ರ ಡಿಸೆಂಬರ್ ಅಂತ್ಯದ ವೇಳೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.