ಜಿಲ್ಲಾ ಸುದ್ದಿ

ಕಿರಾತಕರಿಗೆ ಬೇಟೆಯಾದ ಪಾಲಾರ್‌ಗೇಟ್; ಉದ್ವಿಗ್ನ

ಕಿರಾತಕರಿಗೆ ಬೇಟೆಯಾದ ಪಾಲಾರ್‌ಗೇಟ್; ಉದ್ವಿಗ್ನ
Published On :

ಕೊಳ್ಳೇಗಾಲ: ಕಡವೆ ಬೇಟೆಗೆ ತೆರಳಿದ್ದ ವ್ಯಕ್ತಿಯನ್ನು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಾಯಿಸಿದ್ದಾರೆ ಎಂಬ ಶಂಕೆಯಿಂದ ತಮಿಳುನಾಡಿನ ಗಡಿಯಂಚಿನ ನೂರಾರು ಉದ್ರಿಕ್ತರು ಶುಕ್ರವಾರ ಪಾಲಾರ್ ಗೇಟ್‌ನಲ್ಲಿರುವ ಕರ್ನಾಟಕ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಧ್ವಂಸಗೊಳಿಸಿದ್ದಾರೆ.

ಉದ್ರಿಕ್ತರು ಅರಣ್ಯ ಇಲಾಖೆಯ ಲ್ಯಾಪ್‌ಟಾಪ್ ಹಾಗೂ ಮಹತ್ವದ ದಾಖಲೆಗಳನ್ನು ನಾಶ ಮಾಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೆ ಇಲಾಖೆಯ ತಾತ್ಕಾಲಿಕ ಕಚೇರಿ, ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಕೊನೆಗೆ ಸಮಯ ಸಾಧಿಸಿ ಸುಮಾರು 20 ಕೆಜಿ ತೂಕದ 1 ಜೋಡಿ ದಂತ ಹಾಗೂ 5 ಬಂದೂಕು ದೋಚಿಸಿದ್ದಾರೆ.

ಆಗಿದ್ದೇನು?
ಕೊಳ್ಳೇಗಾಲ ತಾಲೂಕಿನ ಗಡಿಯಂಚಿನ ಅಡಿಪಾಲಾರ್ ಅರಣ್ಯ ಪ್ರದೇಶದಲ್ಲಿ ಕಳೆದ ಮಂಗಳವಾರ ಎರಡು ಕಡವೆಗಳನ್ನು ಕೊಲ್ಲಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಮಾದೇಶ ನೇತೃತ್ವದ ಸಿಬ್ಬಂದಿ ಅರಣ್ಯಕ್ಕೆ ತೆರಳಿದ್ದರು. ಅಧಿಕಾರಿಗಳನ್ನು ಕಾಣುತ್ತಿದ್ದಂತೆ ಐವರು ಬೇಟೆಗಾರರಿದ್ದ ತಂಡ ಗುಂಡಿನ ದಾಳಿ ನಡೆಸಿತು. ಪ್ರತಿದಾಳಿಯಲ್ಲಿ ಗಾಯಗೊಂಡ ತಮಿಳುನಾಡಿನ ಸೆಟ್ಟಿಪಟ್ಟಿ ಗ್ರಾಮದ ಪಳನಿ(42) ಎಂಬಾತ ತಪ್ಪಿಸಿಕೊಳ್ಳಲು ನದಿಗೆ ಹಾರಿದ. ಮತ್ತೊಬ್ಬ ಬೇಟೆಗಾರ ರಾಜು ಎಂಬಾತನಿಗೂ ಗುಂಡು ತಗುಲಿರುವ ಸಾಧ್ಯತೆ ಇದೆ. ಮುತ್ತುಸ್ವಾಮಿ ಸೇರಿದಂತೆ ಇನ್ನಿತರರು ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ನದಿಗೆ ಬಿದ್ದಿದ್ದ ಪಳನಿ ಶವ ಶುಕ್ರವಾರ ನದಿ ತೀರದಲ್ಲಿ ಪತ್ತೆಯಾಗಿದೆ.

ಇದರಿಂದ ಉದ್ರಿಕ್ತರಾದ ಪಳನಿ ಸಂಬಂಧಿಕರು, ತಮಿಳುನಾಡಿನ ಗಡಿ ಗ್ರಾಮಗಳ ಜನ ಪಾಲಾರ್‌ಗೇಟ್ ಮೇಲೆ ದಾಳಿ ನಡೆಸಿದರು. ಪಳನಿ ಬೇಟೆಗಾರನಲ್ಲ, ಆತನನ್ನು ಕರ್ನಾಟಕ ಅಧಿಕಾರಿಗಳು ಸಾಯಿಸಿದ್ದಾರೆ. ಎನ್ನುವುದ ಅವರ ಆರೋಪ. ಉದ್ವಿಗ್ನಸ್ಥಿತಿ ನಿರ್ಮಾಣವಾದ್ದರಿಂದ ಕೆಲವು ಗಂಟೆಗಳ ಕಾಲ ಬಸ್ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಪಾಲಾರ್ ಚೆಕ್ ಪೋಸ್ಟ್‌ಗೂ ಮಹದೇಶ್ವರ ಬೆಟ್ಟ ಠಾಣೆಗೂ ಸುಮಾರು 50 ಕಿಲೋ ಮೀಟರ್ ದೂರವಿದೆ. ಹೀಗಾಗಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಪರಿಸ್ಥಿತಿ ತಹಬಂದಿಗೆ ತರುವಲ್ಲಿ ವಿಳಂಬವಾಗಿದೆ. ಕೊಳತ್ತೂರು ಪೊಲೀಸರು ವಾತಾವರಣ ತಿಳಿಗೊಳಿಸುವಲ್ಲಿ ವಿಫಲರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಕಾವೇರಿ ವನ್ಯಧಾನದ ಡಿಸಿಎಫ್ ವಸಂತರೆಡ್ಡಿ, ಮಹದೇಶ್ವರ ವನ್ಯಧಾಮದ ಡಿಸಿಎಫ್ ಜಾವೇದ್ ಮುಮ್ತಾಜ್, ಜಿಲ್ಲಾ ವರಿಷ್ಠಾಧಿಕಾರಿ ರಂಗಸ್ವಾಮಿ ನಾಯಕ್, ವಲಯ ಅರಣ್ಯಾಧಿಕಾರಿ ಹನುಮಂತಯ್ಯ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.


-ಎನ್. ನಾಗೇಂದ್ರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.