ವೀಕೆಂಡ್ ಮಜಾಕ್ಕೆ ತಣ್ಣೀರು

ಬೆಂಗಳೂರು: ಹಬ್ಬ ಮುಗಿಯುತ್ತಿದ್ದಂತೆ ಶನಿವಾರ ನಗರಕ್ಕೆ ಮತ್ತೆ ಆಗಮಿಸಿದ ವರುಣ ವೀಕೆಂಡ್ ಮಜಾ ಅನುಭವಿಸುವವರ ಯೋಜನೆಗಳಿಗೆ ತಣ್ಣೀರೆರೆದ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಮಳೆಯಿಂದಾಗಿ ಸಂಚಾರ ದಟ್ಟಣೆಯಾಗುವುದರೊಂದಿಗೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಮೆಜೆಸ್ಟಿಕ್, ಕೆ.ಆರ್.ವೃತ್ತ, ಶೇಷಾದ್ರಿಪುರ, ಕಬ್ಬನ್ ಪಾರ್ಕ್, ಶಿವಾನಂದ ವೃತ್ತ, ಎಂಜಿ ರಸ್ತೆ, ಶಾಂತಿನಗರ, ಕೋರಮಂಗಲ ಬೊಮ್ಮನಹಳ್ಳಿ, ಚನ್ನಮ್ಮನ ಅಚ್ಚುಕಟ್ಟು ಪ್ರದೇಶ, ರಾಮಚಂದ್ರಾಪುರ, ಜಾಲಹಳ್ಳಿ, ಯಲಹಂಕ, ಶಿವಾಜಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯಿತು.
ದಿಡೀರ್ ಮಳೆಯಿಂದಾಗಿ ಸಚಂರಾವ ಅಸ್ತವ್ಯಸ್ತವಾಯಿತಲ್ಲದೆ ಕೆಲವೆಡೆ ಮರಗಳು ಧರೆಗುರುಳಿದವು. ಹಬ್ಬದ ರಜೆ ಕಳೆದು ನಗರಕ್ಕೆ ಮರಳುತ್ತಿದ್ದವರಿಗೆ ಮಳೆ ಸ್ವಾಗತ ಕೋರಿತು. ಸಂಜೆಯ ವೇಳೆಗೆ ಕಚೇರಿಗಳಿಂದ ಮನೆಗೆ ತೆರಳುವವರ ಸಂಖ್ಯೆಯೂ ಹೆಚ್ಚಿ ವಾಹನ ದಟ್ಟಣೆ ಕಂಡು ಬಂತು.
ಶೇಷಾದ್ರಿಪುರ ಕಿನೋ ಚಿತ್ರಮಂದಿರ ಬಳಿ ವಾಹನ ದಟ್ಟಣೆಯಾಗುವ ಸಂಭವ ಹಾಗೂ ನೀರು ಕಟ್ಟಿದ್ದರಿಂದ ಕೆಲಕಾಲ ಸಂಚಾರ ನಿಷೇಧ ಮಾಡಲಾಗಿತ್ತು. ಮೈಸೂರು ರಸ್ತೆ, ಅರಮನೆ ರಸ್ತೆ, ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲೂ ನೀರಿನ ಮಟ್ಟ ಏರಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.
ಜರ್ನಲಿಸ್ಟ್ ಕಾಲೋನಿ ಹಾಗೂ ಬಾಪೂಜಿನಗರದಲ್ಲಿ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸಂಜೆ ಆರಂಭವಾದ ಮಳೆ ರಭಸವಾಗಿ ಸುರಿಯುತ್ತಲೇ ಇದ್ದಿದ್ದರಿಂದ ರಸ್ತೆಯಲ್ಲಿ ನೀರಿನ ಮಟ್ಟ ಏರಿ ಮನೆಗಳಿಗೆ ನೀರು ನುಗ್ಗಿತು.
ಹಂಪಿನಗರದಲ್ಲಿ ರಾಜಕಾಲುವೆಗೆ ಸಂಪರ್ರ್ಕ ಕಲ್ಪಿಸುವ ಮೋರಿ ಕುಸಿದಿದ್ದರಿಂದ ಮನೆಗಳಿಗೆ ನೀರು ನುಗ್ಗಿತು. ಚಾಮರಾಜಪೇಟೆಯ ನಂಜಾಂಬ ಅಗ್ರಹಾರ ಹಾಗೂ ಜಯನಗರ 4ನೇ ಹಂತದಲ್ಲಿ ಮರ ಧರೆಗುರುಳಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಪೀಣ್ಯ 3ನೇ ಹಂತದಲ್ಲಿ ಮರದ ರೆಂಬೆ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಕೆಲಕಾಲ ವಿದ್ಯುತ್ ಸರಬರರಾಜು ಸ್ಥಗಿತಗೊಂಡಿತ್ತು.
ಇಂದು ಸಂಜೆಯೂ ಮಳೆ
ಅರಬ್ಬಿ ಸಮುದ್ರದಲ್ಲಿ ವಾಯೂಭಾರ ಕುಸಿತವಾಗಿರುವದರಿಂದ ನಗರದಲ್ಲಿ ಮಳೆ ಸೋಮವಾರದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಭಾನುವಾರ ಸಂಜೆಯೂ ನಗರದಲ್ ಧಾರಾಕಾರ ಮಳೆಯಾಗುವ ಸಂಭವವಿದೆ. ಸೋಮವಾರದಿಂದ ಮೋಡ ಕವಿದ ವಾತಾವರಣ ಕಂಡುಬರಲಿದೆ. ನಗರದಲ್ಲಿ 20 ಡಿ.ಸೆ.ನಿಂದ 27 ಡಿ.ಸೆ. ತಾಪಮಾನವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಪ್ರಮಾಣ
ನಗರದಲ್ಲಿ ಪ್ರತಿ ವಾರ್ಡನಲ್ಲಿ 7.5 ಮೀ.ಮೀ ನಿಂದ 35 ಮಿ. ಮೀ. ವರೆಗೂ ಮಳೆಯಾಗಿದೆ. ನಗರದ ಪಶ್ಚಿಮ ವಿಭಾಗದಲ್ಲಿ ಎಲ್ಲ ಪ್ರದೇಶಗಳೂ ಸೇರಿದಂತೆ ಒಟ್ಟು 91 ಮಿ. ಮೀ ಪೂರ್ವ ವಿಭಾಗದಲ್ಲಿ 46 ಮಿ.ಮೀ, ಉತ್ತರ ವಿಭಾಗದಲ್ಲಿ 91 ಮಿ.ಮೀ ದಕ್ಷಿಣ ವಿಭಾಗದಲ್ಲಿ 68.8 ಮಿ.ಮೀ ಹಾಗೂ ಆನೇಕಲ್‌ನಲ್ಲಿ ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


