ಜಿಲ್ಲಾ ಸುದ್ದಿ

ಎಲ್ಲೂ ತ್ಯಾಜ್ಯ ಸುರಿಯ ಕೂಡದು

ಎಲ್ಲೂ ತ್ಯಾಜ್ಯ ಸುರಿಯ ಕೂಡದು
Published On :

ಬೆಂಗಳೂರು: ಮಾವಳ್ಳಿಪುರದಲ್ಲಿ ವಿಲೇವಾರಿ ಮಾಡಿರುವ ತ್ಯಾಜ್ಯದ ಮೇಲೆ ಏಳು ದಿನಗಳಲ್ಲಿ ಹೊದಿಕೆ ಹೊದಿಸಬೇಕು ಎಂದು ಸಂಸ್ಕರಣಾ ಘಟಕದ  ಗುತ್ತಿಗೆ ಪಡೆದಿರುವ ರಾಮ್ಕಿ ಕಂಪನಿಗೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಮಂಡೂರು ಘಟಕದಲ್ಲಿ ನ.30ರ ನಂತರ ತ್ಯಾಜ್ಯವಿಲೇವಾರಿ ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು ನೀಡಿದ್ದಾರೆ. ಬಿಬಿಎಂಪಿ 30ರ ನಂತರ ಮಂಡೂರಿಗೆ ತ್ಯಾಜ್ಯ ವಿಲೇವಾರಿ ಮಾಡಬಾರದು.

ಕೇವಲ ಮಂಡೂರು ಮಾತ್ರವಲ್ಲದೆ ಮಾವಳ್ಳಿಪುರದಲ್ಲಿ ನಿತ್ಯ 300 ಟನ್ ಕಸ ಸಂಸ್ಕರಣೆ ಮಾಡಬೇಕು. ಹಾಗೆಯೇ, ಬೆಂಗಳೂರು ಸ್ವಚ್ಛಗೊಳಿಸಲು ಬಿಬಿಎಂಪಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪೀಠ ಇದೇ ವೇಳೆ ತಿಳಿಸಿದೆ.

ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿಯಿಂದ ನೀರು ಮಲಿನಗೊಂಡಿರುವ ಕಾರಣ ಮಾವಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಗ್ರಾಮಸ್ಥರಿಗೆ ಉಚಿತವಾಗಿ ಸೊಳ್ಳೆಪರದೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಿಚಾರಣೆ ವೇಳೆ ವಾಯುಪಡೆ ಅಧಿಕಾರಿಗಳ ಪರ ವಕೀಲರು, ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯಿಂದ ಮಾವಳ್ಳಿಪುರದಲ್ಲಿ ಹಕ್ಕಿಗಳ ಹಾರಾಟ ಹೆಚ್ಚಾಗುತ್ತದೆ. 

ಇದರಿಂದ ಜಕ್ಕೂರು ಹಾಗೂ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ತೊಂದರೆಯಾಗುತ್ತಿದೆ. ಕಸ ಸಂಸ್ಕರಣೆಗೆ ವಾಯುಪಡೆಯ ಅನುಮತಿ ಪಡೆಯಬೇಕು ಎಂದು ಕೋರ್ಟ್ ಗಮನಕ್ಕೆ ತಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮೊದಲು ಮಾವಳ್ಳಿಪುರದಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ನೀವು ಅರಿತುಕೊಳ್ಳಬೇಕು. ಸುತ್ತಲಿನ ಪ್ರದೇಶದ 1 ಲಕ್ಷದ ಜನರ ಜೀವ ಅಪಾಯದಲ್ಲಿದೆ. ಮಾವಳ್ಳಿಪುರದಲ್ಲಿ ವಿಲೇವಾರಿ ಸ್ಥಗಿತಗೊಳಿಸಲಾಗಿದೆ. ಸದ್ಯ ನ್ಯಾಯಾಲಯದ ಮುಂದೆ ಎರಡು ಪರಿಹಾರ ಮಾರ್ಗಗಳಿವೆ. ಅದು ಸಂಸ್ಕರಣೆಗೆ ನೀವು ಅನುಮತಿ ನೀಡಬೇಕು ಅಥವಾ ಸಂಪೂರ್ಣ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕು ಎಂದು ಹೇಳಿತು.

ಜತಗೆ, ಈ ಎರಡು ಮಾರ್ಗದಲ್ಲಿ ಯಾವುದು ನಿಮಗೆ ಉಚಿತವೋ ತಿಳಿಸಿ, ಅದರಂತೆ ನ್ಯಾಯಾಲಯ ಆದೇಶಿಸಲಿದೆ ಎಂದು ವಿಭಾಗೀಯ ಪೀಠ ತಿಳಿಸಿತು. ಮೊದಲು ಸಂಸ್ಕರಣಾ ಕೆಲಸ ಆರಂಭವಾಗಬೇಕಿದೆ. ನಂತರವಷ್ಟೇ ಈ ಜಾಗದಲ್ಲಿ ತ್ಯಾಜ್ಯ ಕಡಿಮೆಯಾಗುವುದು ಎಂದು ಪೀಠ ತಿಳಿಸಿತು. ಗ್ರಾಮಸ್ಥರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಪೀಠ, ನ.30ರ  ನಂತರ ಮಂಡೂರಿನಲ್ಲಿ ಕಸ ಸುರಿಯುವುದಿಲ್ಲ ಮುಖ್ಯಮಂತ್ರಿಗಳು ಮಾತು ನೀಡಿದ್ದಾರೆ. ಹಾಗಾಗಿ ಅಂದಿನಿಂದ ಕಸವಿಲೇವಾರಿ ಮಾಡಬಾರದು. ಒಂದು ವೇಳೆ ವಿಲೇವಾರಿಗೆ ಸರ್ಕಾರ ಮುಂದಾದರೂ, ನ್ಯಾಯಾಲಯ ಅದಕ್ಕೆ ಅನುಮತಿ ನೀಡುವುದಿಲ್ಲ.

ನ್ಯಾಯಾಲಯ ಅಲ್ಲಿನ ಜನರ ಪರಿಸ್ಥಿತಿಯನ್ನು ಕಂಡಿದೆ. ಆ ಕುರಿತು ವಿಷಾಧಿಸುತ್ತೇವೆ ಎಂದು ತಿಳಿಸಿದ ಪೀಠ, ಸಂಸ್ಕರಣೆ ಕಾರ್ಯ ಪ್ರಗತಿ ಕಾಣುವವರೆಗೂ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಯಾವುದೇ ಹಿತಾಸಕ್ತಿ ಇಲ್ಲಲಾಗಿದ್ದು, ಸಾರ್ವಜನಿಕರಿಗೆ ಸಮಸ್ತೆ ನಿವಾರಿಸುವ ಮಾರ್ಗದಲ್ಲಿ ಆದೇಶ ಹೊರಡಿಸಲಾಗುವುದು ಎಂದು ದ್ವಿ ಸದಸ್ಯ ಪೀಠ ತಿಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.