ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀ ಪ್ರಕರಣ: ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ರಾಘವೇಶ್ವರ ಶ್ರೀ ಪ್ರಕರಣ: ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
Published On :

ಬೆಂಗಳೂರು: ರಾಮಚಂದ್ರಾಪುರದ ಮಠಾಧೀಶ ರಾಘವೇಶ್ವರ ಭಾರತಿ ಶ್ರೀಗಳಿಗೆ ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಮತ್ತು ಶ್ರೀಗಳಿಂದ ಲೈಂಗಿಕ ಕಿರುಕುಳ ಎರಡೂ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಲಾಗಿದೆ.

ಕಳೆದ ಹಲವು ದಿನಗಳಿಂದ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ರಾಮಚಂದ್ರಾಪುರದ ಮಠದ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಎರಡೂ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಡಿಜಿಪಿ ಲಾಲ್ ರುಕುಮ್ ಪಚಾವೋ ಅವರು ಆದೇಶ ಹೊರಡಿಸಿದ್ದಾರೆ.

ಮಠದ ಕಲಾವಿದರಾದ ಪ್ರೇಮಲತಾ ಮತ್ತು ಅವರ ಪತಿ ದಿವಾಕರ್ ಅವರು ಶ್ರೀಗಳಿಗೆ ಬ್ಲ್ಯಾಕ್ ಮಾಡಿದ್ದಾರೆ ಮತ್ತು ಇತರೆ ಕಲಾವಿದರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಮಚಂದ್ರಾಪುರ ಮಠದ ಆಡಳಿತ ಮಂಡಳಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಹೊನ್ನಾವರ ಪೊಲೀಸರು ಪ್ರೇಮಲತಾ ಮತ್ತು ದಿವಾಕರ್ ದಂಪತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಪ್ರೇಮಲತಾ ಅವರ ಪುತ್ರಿ ಕೂಡ ಪ್ರತಿ ದೂರು ದಾಖಲಿಸಿದ್ದು, ರಾಘವೇಶ್ವರ ಭಾರತಿ ಶ್ರೀಗಳು ತಮ್ಮ ತಾಯಿ ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣವನ್ನು ಗಿರಿನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಕರಣ ಸಂಬಂಧ ರಾಘವೇಶ್ವರ ಭಾರತಿ ಶ್ರೀಗಳನ್ನು ಗಿರಿನಗರ ಪೊಲೀಸರು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಮಠದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಬೇರೆ ವಿಧಿಯಿಲ್ಲದೆ ಪೊಲೀಸರು ಶ್ರೀಗಳ ವಿರುದ್ಧ ವಾರಂಟ್ ಜಾರಿ ಮಾಡಿ ಬೆಂಗಳೂರಿಗೆ ವಾಪಸಾಗಿದ್ದರು. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಲಾಲ್ ರುಕುಮ್ ಪಚಾವೋ ಅವರು ಎರಡೂ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.