ಜಿಲ್ಲಾ ಸುದ್ದಿ

ಮೈತ್ರಿಯಾಗೌಡ ಪ್ರಕರಣ: ಡಿವಿಎಸ್‌ಗೆ ನೋಟಿಸ್?

ಮೈತ್ರಿಯಾಗೌಡ ಪ್ರಕರಣ: ಡಿವಿಎಸ್‌ಗೆ ನೋಟಿಸ್?
Published On :

ಬೆಂಗಳೂರು: ಮೈತ್ರಿಯಾಗೌಡ ವಿವಾ(ದ)ಹ ಪ್ರಕರಣ ಸಂಬಂಧ ಬಂಧನ ವಾರೆಂಟ್ ಇದ್ದರೂ ವಿಚಾರಣೆಗೆ ಕಾರ್ತಿಕ್ ಗೌಡ ಹಾಜರಾಗದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರಿಗೆ ಆರ್.ಟಿ.ನಗರ ಪೊಲೀಸರು ನೋಟಿಸ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಮೈತ್ರಿಯಾ ಗೌಡ ಮತ್ತು ಕಾರ್ತಿಕ್ ಗೌಡ ಅವರ ವಿವಾ(ದ)ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿದ್ದು, ಸೋಮವಾರ ಅದರ ಅಂತಿಮ ತೀರ್ಪು ಹೊರಬೀಳಲಿದೆ. ಆದರೆ ಈ ನಡುವೆ ಕಾರ್ತಿಕ್ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದ್ದರೂ ಆತ ವಿಚಾರಣೆಗೆ ಹಾಜರಾಗಿಲ್ಲ. ಅಲ್ಲದೆ ಕಾರ್ತಿಕ್ ಎಲ್ಲಿದ್ದಾನೆ ಎಂದೂ ತಿಳಿಯುತ್ತಿಲ್ಲ. ಪೊಲೀಸ್ ಅಧಿಕಾರಿ ಓಂಕಾರಯ್ಯ ಅವರ ನೇತೃತ್ವದಲ್ಲಿ ಮೂರು ತಂಡಗಳು ಕಾರ್ತಿಕ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಈವರೆಗೂ ಕಾರ್ತಿಕ್ ಎಲ್ಲಿದ್ದಾನೆ ಎಂದು ತಿಳಿದುಬಂದಿಲ್ಲ.

ಹೀಗಾಗಿ ಪೊಲೀಸರು ಕಾರ್ತಿಕ್ ತಂದೆ ಡಿ.ವಿ.ಸದಾನಂದಗೌಡ ಅವರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ. ಅಲ್ಲದೆ ಈಗಾಗಲೇ ಅಂದರೆ ಸೆಪ್ಟೆಂಬರ್ 2ರಂದು ವಿಚಾರಣೆಗೆ ಸಹಕರಿಸುವಂತೆ ಮತ್ತು ತನಿಖೆಗೆ ಸಹಾಯ ಮಾಡುವಂತೆ ಕೋರಿ ಪೊಲೀಸರು ಸದಾನಂದಗೌಡರಿಗೆ ಇ-ಮೇಲ್‌ವೊಂದನ್ನು ಕಳುಹಿಸಿದ್ದರು. ಆದರೆ ಈ ವರೆಗೂ ಅವರಿಂದ ಪ್ರತ್ಯುತ್ತರ ಬಂದಿಲ್ಲ. ನಾಳೆ ಕಾರ್ತಿಕ್ ಗೌಡ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ಅಂತಿಮ ತೀರ್ಪು ಹೊರಬೀಳಲಿದ್ದು, ಈ ಹಿಂದಿನ ವಿಚಾರಣೆಯಲ್ಲಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಮುದಿಗೌಡರ್ ಅವರು ತೀರ್ಪನ್ನು ಸೆ.8ಕ್ಕೆ ಕಾಯ್ದಿರಿಸಿದ್ದಾರೆ.

ಕಾರ್ತಿಕ್ ಗೌಡ ತಮ್ಮನ್ನು ವಿವಾಹವಾಗಿದ್ದು, ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಅವರಿಗೆ ಸಮನ್ಸ್ ಕೂಡ ನೀಡಿದ್ದರು. ಆದರೆ ಕಾರ್ತಿಕ್ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.