

ಬೆಳಗಾವಿ: ಪ್ರತ್ಯೇಕ ರಾಜ್ಯಬೇಕು ಎಂಬ ತಮ್ಮ ಹಳೆಯ ವರಸೆಯನ್ನು ಮಾಜಿ ಸಚಿವ ಉಮೇಶ್ ಕತ್ತಿ ಅವರು ಮತ್ತೆ ಮುಂದುವರೆಸಿದ್ದು, ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ ಅವರು, ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಮಾತನಾಡುತ್ತಾ ಬೆಳಗಾವಿ ರಾಜ್ಯದ 2ನೇ ರಾಜಧಾನಿಯಲ್ಲ. ರಾಜ್ಯಕ್ಕೆ ಒಂದೇ ರಾಜಧಾನಿ ಎಂದು ಹೇಳಿದ್ದರು. ಅವರ ಮಾತುಗಳು ಖಂಡನಾರ್ಹವಾಗಿದ್ದು, ಬೆಳಗಾವಿ ನಮ್ಮ ರಾಜ್ಯದ ಎರಡನೇ ರಾಜಧಾನಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದು, ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು. ಬೆಳಗಾವಿಯನ್ನು ನೂತನ ರಾಜ್ಯದ ರಾಜಧಾನಿಯನ್ನಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯದ ಪ್ರಸ್ತಾವಕ್ಕಾಗಿ ನಿಯೋಗವೊಂದನ್ನು ಕೇಂದ್ರ ಸರ್ಕಾರದ ಬಳಿ ಕರೆದುಕೊಂಡು ಹೋಗುತ್ತೇನೆ. ಒಂದು ವೇಳೆ ತಮ್ಮ ಬೇಡಿಕೆಗೆ ಮಾನ್ಯತೆ ದೊರೆಯದೇ ಇದ್ದ ಪಕ್ಷದಲ್ಲಿ ಉತ್ತರ ಕರ್ನಾಟಕದ ಪ್ರತ್ಯೇಕತೆಗಾಗಿ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಮುಖಂಡ ಉಮೇಶ್ ಕತ್ತಿ ಹೇಳಿದ್ದಾರೆ.
ಬಿಜೆಪಿ ವಿರೋಧ
ಕತ್ತಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂವಿಧಾನದಲ್ಲಿ 2ನೇ ರಾಜಧಾನಿಗೆ ಆಸ್ಪದವಿಲ್ಲ. ಇನ್ನು ಕತ್ತಿ ಅವರ ಎರಡನೇ ರಾಜ್ಯದ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸಲಿದ್ದು, ವಿಶೇಷ ಅನುದಾನಕ್ಕೆ ಮಾತ್ರ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದರು.