ಜಿಲ್ಲಾ ಸುದ್ದಿ

ವಾಸ್ತವ್ಯ ದೃಢೀಕರಣ ಇದ್ದರೆ ಮಾತ್ರ ವಿದ್ಯುತ್ ಸಂಪರ್ಕ: ಸಚಿವ ಡಿಕೆಶಿ

ವಾಸ್ತವ್ಯ ದೃಢೀಕರಣ ಇದ್ದರೆ ಮಾತ್ರ ವಿದ್ಯುತ್ ಸಂಪರ್ಕ: ಸಚಿವ ಡಿಕೆಶಿ
Published On :

ಮಂಗಳೂರು: ನಗರಾಭಿವೃದ್ಧಿ ಇಲಾಖೆ ವಾಸ್ತವ್ಯ ದೃಢೀಕರಣ ಪತ್ರ ನೀಡಿದರೆ ಮಾತ್ರ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿ ವಿದ್ಯುತ್ ಸಂಪರ್ಕ ಪಡೆಯಬಹುದು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡದೇ ಇರುವ ಕಟ್ಟುನಿಟ್ಟು ನಿಯಮ ಜಾರಿಗೆ ತರಲು ರಾಜ್ಯ ಇಂಧನ ಇಲಾಖೆ ಮುಂದಾಗಿದೆ.

ಅಪಾರ್ಟ್‌ಮೆಂಟ್ ಹೊಂದಿರುವವರು ತಮ್ಮ ಜಾಗದಲ್ಲೇ ಸ್ವಂತ ಟ್ರಾನ್ಸ್‌ಫಾರ್ಮರ್ ಹಾಕಬೇಕು ಎಂಬ ನಿಯಮವಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರಿಂದ ರಸ್ತೆ ಬದಿ ಬೇಕಾಬಿಟ್ಟಿ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಕಡಿವಾಣ ಬೀಳಲಿದೆ. ತರಾತುರಿ, ಒತ್ತಡದಲ್ಲಿ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಳೀಯಾಡಳಿತದಿಂದ ತಾತ್ಕಾಲಿಕ ಪರವಾನಗಿ ಪಡೆಯಬಹುದಾದರೂ ಅದೇ ಅಂತಿಮ ಅಲ್ಲ. ಈ ನಿಯಮ ಉಲ್ಲಂಘಿಸುವ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಎಲ್ಲ ಹೆಸ್ಕಾಂಗಳಲ್ಲಿ 24/7 ಹೆಲ್ಪ್‌ಲೈನ್ ಕಡ್ಡಾಯ ಆರಂಭಿಸಲು ಆದೇಶ ನೀಡಲಾಗಿದೆ. ಪ್ರತಿ ಉಪವಿಭಾಗಲ್ಲಿ ವಾಹನ ಇದ್ದು, ಗ್ರಾಹಕರ ದೂರಿಗೆ ತಕ್ಷಣ ಸ್ಪಂದಿಸಬೇಕು. ಬೆಂಗಳೂರಿನಲ್ಲಿ ಇದು ಯಶಸ್ವಿಯಾಗಿದ್ದು, ಎಲ್ಲ ಕಡೆ ಹೆಲ್ಪ್‌ಲೈನ್ ಕೂಡಲೇ ಶುರು ಮಾಡಲು ತಿಳಿಸಲಾಗಿದೆ ಎಂದರು.

ಕ್ಷೇತ್ರ, ತಾಲೂಕಿನಲ್ಲಿ ಪ್ರತ್ಯೇಕ ಸಮಿತಿ:
ಗ್ರಾಹಕರ ಕುಂದುಕೊರತೆಗೆ ಸ್ಪಂದಿಸಲು ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಈ ಸಮಿತಿ ಎರಡು ತಿಂಗಳಿಗೊಮ್ಮೆ ವಿದ್ಯುತ್ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸುತ್ತದೆ. ಅಲ್ಲಿ ಗ್ರಾಹಕರ ಸಮಸ್ಯೆಗೆ ಸ್ಪಂದಿಸಲಾಗುತ್ತದೆ. ಕ್ಷೇತ್ರ ಸಮಿತಿಗೆ ಶಾಸಕರು ಅಧ್ಯಕ್ಷರು, ತಾಲ್ಲೂಕು, ಸಮಿತಿಗೆ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅಧ್ಯಕ್ಷ, ಈ ಸಮಿತಿಗೆ 6 ಮಂದಿ ಸದಸ್ಯರಿರುತ್ತಾರೆ. ವರ್ತಕರು, ಗ್ರಾಹಕರು, ಹಿಂದುಳಿದ ವರ್ಗ ಹಾಗೂ ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗುವುದು. ಸರ್ಕಾರವೇ ಈ ಸಮಿತಿ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಹಾಲಿ ಇರುವ ಟ್ರಾನ್ಸ್‌ಫಾರ್ಮರ್ (ಟಿಸಿ)ಗಳ ಸಾಮರ್ಥ್ಯ ದುಪ್ಪಟ್ಟುಗೊಳಿಸಲು ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಸ್ಥಾಪಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ವಿದ್ಯುತ್ ಉತ್ಪಾದನೆಗೆ ಒತ್ತು
ರಾಜ್ಯದಲ್ಲಿ ಈ ಬಾರಿ ಮಳೆ ಪ್ರಮಾಣ ಉತ್ತಮವಾಗಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಇಲ್ಲ. 2016ವೇಳೆಗೆ ವಿದ್ಯುತ್ ಉತ್ಪಾದನೆಯಲ್ಲಿ 3 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಳವಾಗಲಿದೆ. 1 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಹೆಚ್ಚಳವಾಗುತ್ತದೆ. ಈಗ 500 ಮೆಗಾವ್ಯಾಟ್ ಮಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗಿದೆ. ಅಲ್ಟ್ರಾಮೆಗಾವ್ಯಾಟ್ ಸೋಲಾರ್ ವಿದ್ಯುತ್‌ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ ಬಳ್ಳಾರಿ, ರಾಯಚೂರು ಹಾಗೂ ಕೂಡಗಿ ಉಷ್ಣವಿದ್ಯುತ್ ಸ್ಥಾವರದಿಂದ 3 ಸಾವಿರ ಮೆಗಾವ್ಯಾಟ್ ಹಾಗೂ ಒಂದು ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಸೇರಿ ಒಟ್ಟು 4 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.