

ರಾಜ್ಯದ ಗಡಿ ಕಬಳಿಸಲು ಭಾಲ್ಕಿಯಲ್ಲಿ ಅನಧಿಕೃತ ಸಭೆ, ಹೆಚ್ಚಿದ ಆಕ್ರೋಶ
ಔರಾದ್ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಭೆ ನಡೆಸದಂತೆ ಪೊಲೀಸ್ ಪಹರೆ
ಬೀದರ್/ಔರಾದ್: ರಾಜ್ಯದ ಗಡಿ ಕಬಳಿಸುವ ಹೊಂಚು ಹಾಕಿ ಜಿಲ್ಲೆಯ ಹಲವೆಡೆ ಸಭೆ ನಡೆಸಿ ಮರಾಠಿಗರನ್ನು ಎತ್ತಿಕಟ್ಟಲು ಯತ್ನಿಸಿದ್ದ ಎಂಇಎಸ್ ಶಾಸಕ ಸಂಭಾಜಿರಾವ್ ಪಾಟೀಲ್ ನೇತೃತ್ವತದ ತಂಡ ರಾಜ್ಯದಿಂದ ಕಾಲ್ಕಿತ್ತಿದ್ದು, ಬಂಧನದ ಭೀತಿಯಲ್ಲಿ ಮಹಾರಾಷ್ಟ್ರಕ್ಕೆ ಪಲಾಯಣ ಮಾಡಿದೆ.
ಭಾಲ್ಕಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಅನಧಿಕೃತವಾಗಿ ಸಭೆ ನಡೆಸಿ ರಾಜ್ಯದ ನೆಲದ ವಿರುದ್ಧವೇ ಪಿತೂರಿ ನಡೆಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್ ಶಾಸಕ ಸಂಭಾಜಿರಾವ್ ಪಾಟೀಲ್ ವಿರುದ್ಧ ಭಾಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಇನ್ನಷ್ಟು ಸಭೆಗಳನ್ನು ನಡೆಸಲು ಹೊಂಚು ಹಾಕಿದ್ದ ಇವರಿಗೆ ಇಲ್ಲಿನ ಪೊಲೀಸ್ ಪಹರೆ ದುಃಸ್ವಪ್ನವಾದರೆ, ಕನ್ನಡ ಪರ ಸಂಘಟನೆಗಳ ಆಕ್ರೋಶ ರಾಜ್ಯಕ್ಕೆ ಕಾಲಿಡದಂತೆ ಮಾಡಿದೆ.
ಬಿಗಿ ಪೊಲೀಸ್ ಪಹರೆ
ಶುಕ್ರವಾರ ಔರಾದ್ ತಾಲ್ಲೂಕಿನ ತೋರಣಾ, ಸಾವಳಿ, ಬೆಳಕುಣಿ ಮತ್ತು ಎಕಂಬಾ ಗ್ರಾಮಗಳಲ್ಲಿ ಸಂಭಾಜಿರಾವ್ ನೇತೃತ್ವದಲ್ಲಿ ಮುಖಂಡರು ಸಭೆ ನಡೆಸುವ ಮುನ್ಸೂಚನೆ ಇತ್ತು. ಇದನ್ನರಿತು ಜಿಲ್ಲೆಯ ಕಮಲನಗರದ ಗಡಿಯಲ್ಲಿ ಸಿಪಿಐ ಮಠಪತಿ, ಮುರ್ಕಿ ಗಡಿಯಲ್ಲಿ ಎಂ.ಎಸ್ ಮುಲ್ಲಾ, ಔರಾದ್ ಗಡಿಯಲ್ಲಿ ಸಿಪಿಐ ಬೀಳಗಿ ಸೇರಿದಂತೆ ಪಿಎಸ್ಐಗಳ ತಂಡದವರು ಅಲ್ಲಲ್ಲಿ ಪಹರೆ ನಡೆಸಿ ಶಾಸಕ ಸಂಭಾಜಿ ಪಾಟೀಲ್ ರಾಜ್ಯದ ಗಡಿ ಪ್ರವೇಶಿಸುತ್ತಿದ್ದಂತೆಯೇ ವಶಕ್ಕೆ ಪಡೆಯಲು ಕುಳಿತಿದ್ದರು.
ಇನ್ನೊಂದೆಡೆ ಎಕಂಬಾದಲ್ಲಿ ಸಭೆ ಆಯೋಜಿಸಿದ್ದನ್ನು ಅರಿತ ಕರವೇ ಕಾರ್ಯಕರ್ತರು ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಿ ಕನ್ನಡ ನೆಲದ ವಿರುದ್ಧ ಯಾವೊಬ್ಬರೂ ಕುತಂತ್ರ ನಡೆಸಲು ಬಿಡಲ್ಲ ಎಂಬ ಎಚ್ಚರಿಕೆಯನ್ನು ಎಂಇಎಸ್ಗೆ ನೀಡಿದ್ದಾರೆ.