

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಹಿರಿಯ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ನೌಕರರ ಸಂಘ ಸೋಮವಾರ ದಿಢೀರ್ ಬಂದ್ಗೆ ಕರೆ ನೀಡಿದೆ.
ಬೆಂಗಳೂರಿನ 8 ವಲಯ ಮತ್ತು ಬಿಬಿಎಂಪಿ ಕೇಂದ್ರ ಕಚೇರಿಯ ನೌಕರರು ಪ್ರತಿಭಟನೆಯಲ್ಲಿ ತೊಡಗಿದ್ದು, ಕೇಂದ್ರ ಕಚೇರಿ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಚೇರಿಯಲ್ಲಿ ಕಾರ್ಯ ನಿರತರಾಗಿದ್ದ ಅಧಿಕಾರಿ ಮತ್ತು ನೌಕರರನ್ನು ಒತ್ತಾಯ ಪೂರ್ವಕವಾಗಿ ಹೊರಗೆ ಕಳುಹಿಸಿ ಕಚೇರಿಗೆ ಬೇಗ ಜಡಿಯಲಾಗಿದೆ. ಅಲ್ಲದೆ ಅಧಿಕಾರಿಗಳ ವಿರುದ್ಧ ನೌಕರರು ಪ್ರತಿಭಟನಾ ಘೋಷಣೆಗಳನ್ನು ಕೂಗುತ್ತಿದ್ದಾರೆ.
'ಕೆಎಎಸ್ ಅಲ್ಲದವರಿಗೆ ಪಾಲಿಕೆಯ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದ್ದು, ಇದರಿಂದ ಪಾಲಿಕೆಯ ಮೂಲ ನೌಕರರಿಗೆ ಅನ್ಯಾಯವಾಗುತ್ತಿದೆ. ಹಿರಿಯ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಇಲಾಖೆ ಪಾಲಿಕೆಯ ನೇಮಕಾತಿಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತಿದ್ದು, ಪಾಲಿಕೆಯ ನಿಯಮಾವಳಿಗಳನ್ನು ಮೀರಿ ಕೆಲ ಅಧಿಕಾರಿಗಳು ತಮಗೆ ಬೇಕಾದವರಿಗೆ ಹುದ್ದೆ ನೀಡಲು ಲಾಬಿ ಮಾಡುತ್ತಿದ್ದಾರೆ'.
'ಪಾಲಿಕೆಯ ನಿಯಮಾವಳಿಗಳನ್ನು ಮೀರಿ ಕೆಎಎಸ್ ಅಲ್ಲದ 10 ಮಂದಿ ಪಾಲಿಕೆಯ ಜಂಟಿ ಆಯುಕ್ತ ಸ್ಥಾನಗಳನ್ನು ಅನುಭವಿಸುತ್ತಿದ್ದಾರೆ. ಪಾಲಿಕೆಯಲ್ಲಿಯೇ ಸಾಕಷ್ಟು ದಕ್ಷ ಮತ್ತು ಅರ್ಹ ಅಧಿಕಾರಿಗಳಿದ್ದಾರೆ. ಹೀಗಾಗಿ ಕೂಡಲೇ ಆ ಎಲ್ಲ ಹತ್ತು ಅಧಿಕಾರಿಗಳನ್ನು ತಮ್ಮ ತಮ್ಮ ಮಾತೃ ಇಲಾಖೆಗೆ ವರ್ಗಾಯಿಸಬೇಕು ಮತ್ತು ಆ ಸ್ಥಾನಗಳಿಗೆ ಪಾಲಿಕೆಯ ಅರ್ಹ ನೌಕರರನ್ನು ಆಯ್ಕೆ ಮಾಡಬೇಕು' ಎಂದು ನೌಕರರು ಆಗ್ರಹಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಬೆಳಗ್ಗೆ 10ಗಂಟೆಯಿಂದಲೇ ಪಾಲಿಕೆಯ ಪದಾಧಿಕಾರಿಗಳು ಮತ್ತು ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಕೆಲ ಕಾರ್ಪೊರೇಟರ್ಗಳು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಒಟ್ಟಾರೆ ನೌಕರರ ದಿಢೀರ್ ಪ್ರತಿಭಟನೆಯಿಂದಾಗಿ ಬಿಬಿಎಂಪಿ ಕೇಂದ್ರ ಕಚೇರಿ ಬಿಕೋ ಎನ್ನುತ್ತಿದ್ದು, ವಿವಿಧ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸಿದ್ದ ಜನರು ವಾಪಸಾಗಿದ್ದಾರೆ.