ಜಿಲ್ಲಾ ಸುದ್ದಿ

'ನಿಮ್ಮಿಂದಲೇ ಸ್ವಚ್ಛತಾ ಕಾರ್ಯ ಆರಂಭ': ಪ್ರಧಾನಿ ಮೋದಿ

'ನಿಮ್ಮಿಂದಲೇ ಸ್ವಚ್ಛತಾ ಕಾರ್ಯ ಆರಂಭ': ಪ್ರಧಾನಿ ಮೋದಿ
Published On :

ಬೆಂಗಳೂರು: 'ಮೊದಲು ನೀವು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದಿರಿ, ಬಳಿಕ ನಾವು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಹೆಚ್‌ಎಎಲ್ ವಿಮಾನ ನಿಲ್ದಾಣದ ವಿಐಪಿ ಗೇಟ್ ಬಳಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯಿತು. ಮೋದಿ ಅವರಿಗೆ ರೇಷ್ಮೆ ಶಾಲು ಹೋದಿಸಿ, ಮೈಸೂರು ಪೇಟ ತೊಡಿಸಿ ಮತ್ತು ವಿಶೇಷ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ ಕುಮಾರ್ ಮತ್ತು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸುರೇಶ್ ಕುಮಾರ್, ಮೇಯರ್ ಶಾಂತಕುಮಾರಿ  ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸನ್ಮಾನದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ದೇಶದ ಅಭಿವೃದ್ಧಿಗಾಗಿ ನಾನು ಶುಚಿತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ. ಆದರೆ ಈ ಸ್ವಚ್ಛತಾ ಕಾರ್ಯ ಆರಂಭವಾಗಿದ್ದೇ ನಿಮ್ಮಿಂದ. ಮೊದಲು ನೀವು ದೆಹಲಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿದಿರಿ. ಈಗ ನಾನು ದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ. ಕೇಂದ್ರದಲ್ಲಿ ಸಧೃಡ ಸರ್ಕಾರ ರಚಿಸುವಲ್ಲಿ ಕಾರಣರಾದ ಪ್ರತಿಯೊಬ್ಬ ಕನ್ನಡಿಗ ಸಹೋದರ-ಸಹೋದರಿಗೆ ನನ್ನ ವಂದನೆ. 30 ವರ್ಷಗಳ ಬಳಿಕ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. ದೃಢಸರ್ಕಾರಕ್ಕೆ ಕಾರಣರಾದ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹೇಳಿದರು.

'ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ್ದೇನೆ. ಸೆಪ್ಟೆಂಬರ್‌ನಲ್ಲಿ ದೀನ್ ದಯಾಳರ ಜನುಮದಿನವನ್ನು ಆಚರಿಸುತ್ತಿದ್ದೇವೆ. ಅದೇ ಸಂದರ್ಭದಲ್ಲಿ ನಮ್ಮ ದೇಶದ ಅತಿದೊಡ್ಡ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಮನೆಗೆ ಅತಿಥಿಗಳು ಆಗಮಿಸುತ್ತಾರೆ ಎಂದು ತಿಳಿದರೆ ಮೊದಲು ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತೇವೆ. ಅಂತೆಯೇ ನಮ್ಮ ದೇಶಕ್ಕೆ ಅಭಿವೃದ್ದಿಯ ಆಗಮನಕ್ಕಾಗಿ ನಾವು ನಮ್ಮ ದೇಶವನ್ನು ಸ್ವಚ್ಛಗೊಳಿಸಬೇಕಿದೆ'.

"ಭಾರತವನ್ನು ಕಸ ಮುಕ್ತ ದೇಶವನ್ನಾಗಿ ಪರಿವರ್ತಿಸಬೇಕಿದೆ. ಇದಕ್ಕಾಗಿ ನಾವು ಸಂಕಲ್ಪದೊಂದಿಗೆ ಕರ್ತವ್ಯ ನಿಭಾಯಿಸಬೇಕಿದೆ. ಇದಕ್ಕಾಗಿ ನಾನೇ ಸ್ವತಃ ಪೊರಕೆ ಹಿಡಿಯಲು ಸಿದ್ಧನಾಗಿದ್ದೇನೆ. ನನಗೆ ವರ್ಷದಲ್ಲಿ 100 ಗಂಟೆ ನೀಡಿ. ಪ್ರತಿ ತಿಂಗಳ ಸಪ್ತಾಹದಲ್ಲಿ 2 ಗಂಟೆ ಮೀಸಲಿಟ್ಟು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ. ದೇಶ ಸೇವೆಗಾಗಿ ಗಡಿ ಪ್ರದೇಶಕ್ಕೆ ಹೋಗಬೇಕಿಲ್ಲ. ಅಸ್ವಚ್ಛತೆಯಿಂದ ದೇಶವನ್ನು ಮುಕ್ತಿಗೊಳಿಸುವುದು ಕೂಡ ದೇಶ ಸೇವೆಯೇ. ಭಾರತ ಬದಲಾಗುತ್ತಿದೆ. ಭಾರತ ಮಾತೆಯನ್ನು ಕಸ ಮುಕ್ತವಾಗಿ ಮಾಡುವುದು ನಮ್ಮ ಕರ್ತವ್ಯ' ಎಂದು ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್‌ಗೆ ಚುಚ್ಚಿದ ಪ್ರಧಾನಿ ಮೋದಿ
ಇದೇ ವೇಳೆ ತಮ್ಮ ರಾಜಕೀಯ ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಚುಚ್ಚಲ ಮರೆಯದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ನಾವು ಆ ಕಾನೂನು ಮಾಡಿದ್ದೇವೆ. ಈ ಕಾನೂನು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಆ ಕಾನೂನುಗಳಿಗೆ ಬೆಲೆ ಇಲ್ಲದಂತಾಗಿದೆ. ಇಂತಹ ಕಾನೂನುಗಳಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಇಂತಹ ನಿಶ್ಪ್ರಯೋಜಕ ಕಾನೂನುಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ತಮ್ಮ ಯೋಜನೆಗಳನ್ನು ಕೊಂಡಾಡಿದ ಪ್ರಧಾನಿ
ಇದೇ ವೇಳೆ ತಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ 30-40 ವರ್ಷಗಳೇ ಕಳೆದವು. ಆದರೆ ಯಾವುದೇ ಬ್ಯಾಂಕುಗಳು ಬಡವನ ನೆರವಿಗೆ ಸಹಾಯಕವಾಗಲಿಲ್ಲ. ಬದಲಿಗೆ ಸಾಲದ ಹೆಸರಲ್ಲಿ ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವು. ಹೀಗಾಗಿ ತಮ್ಮ ಸರ್ಕಾರ ಜನ-ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ದೇಶದ ಪ್ರತಿಯೊಂದು ಕುಟುಂಬಕ್ಕೂ ಉಚಿತ 0 ಬ್ಯಾಲೆನ್ಸ್ (ಶೂನ್ಯ ಠೇವಣಿ)ನ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದೆವೆ. ಅಲ್ಲದೆ ಖಾತೆ ತೆರೆಯುವ ಪ್ರತಿ ಕುಟುಂಬಕ್ಕೂ 1 ಲಕ್ಷ ವಿಮೆ ಮತ್ತು 30 ಸಾವಿರ ರುಪಾಯಿಗಳ ಆರೋಗ್ಯ ಧನವನ್ನು ಮೀಸಲಿಟ್ಟಿದ್ದೇವೆ'.

'ದೇಶದಲ್ಲಿ ಕೋಟ್ಯಂತರ ಹಿರಿಯ ಜೀವಗಳು ಸರ್ಕಾರಿ ಪಿಂಚಣಿಯನ್ನೇ ಆಧರಿಸಿ ಬದುಕು ಸಾಗಿಸುತ್ತಿವೆ. ಆದರೆ ಈ ಹಿಂದೆ ಅವರಿಗೆ 100-200 ರು.ಗಳನ್ನು ಪಿಂಚಣಿಯಾಗಿ ನೀಡಲಾಗುತ್ತಿತ್ತು. ಈಗಿನ ಬದುಕಿನಲ್ಲಿ 200 ರೂಗಳು ಯಾವುದಕ್ಕೆ ಸಾಲುತ್ತದೆ. ಹೀಗಾಗಿ ನಮ್ಮ ಸರ್ಕಾರ ಕನಿಷ್ಟ 1 ಸಾವಿರ ರು.ಗಳನ್ನು ಪಿಂಚಣಿ ನೀಡುತ್ತಿದೆ. ಅಲ್ಲದೆ ಈ ಹಣದ ಚೆಕ್ ಅನ್ನು ಆ ಹಿರಿಯ ಜೀವಗಳನ್ನು ಹುಡುಕಿ ಅವರ ಕೈಗೇ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಸುಮಾರು 25 ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ'.

'ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹುಮುಖ್ಯವಾದದ್ದು. ಆದರೆ ಕೌಶಲ್ಯವಿದ್ದರೂ ಅದು ಬೆಳಕಿಗೆ ಬಾರದೇ ನಶಿಸಿ ಹೋಗುತ್ತಿದೆ. ಕೌಶಲ್ಯದ ಮಹತ್ವವನ್ನು ನಾವು ಅರಿತಿದ್ದು, ಇದಕ್ಕಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅಲ್ಲದೆ ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಇಲಾಖೆಯನ್ನೇ ತೆರೆದಿದ್ದೇವೆ' ಎಂದು ಮೋದಿ ಹೇಳಿದರು.

ಒಟ್ಟಾರೆ ವಿವಿಧ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.