ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಬೇಕಿದೆ: ಪ್ರಧಾನಿ ಮೋದಿ

ರೈತರ ಮೊಗದಲ್ಲಿ ನಗು ಕಾಣಬೇಕು ಎಂದರೆ ಮೊದಲು ಅವರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಬೇಕು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಬೇಕಿದೆ: ಪ್ರಧಾನಿ ಮೋದಿ
Updated on: 

ತುಮಕೂರು: ಭಾರತ ರೈತರ ಮೊಗದಲ್ಲಿ ನಗು ಕಾಣಬೇಕು ಎಂದರೆ ಮೊದಲು ಅವರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಮೆಗಾ ಫುಡ್‌ಪಾರ್ಕ್ ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಭಾರತ ಕೃಷಿ ಪ್ರಧಾನ ದೇಶ, ಆದರೆ ಇಲ್ಲಿ ಅನ್ನದಾತನೇ ಸುಖವಾಗಿಲ್ಲ. ತನ್ನ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ಕಂಗಾಲಾಗಿದ್ದು, ಆತನಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕಿದೆ' ಎಂದು ಹೇಳಿದರು.

'ರೈತರಿಗಾಗಿ ಫುಡ್‌ಪಾರ್ಕ್ ಸ್ಥಾಪನೆ ಮಾಡಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಹಕಾರ ಸಂಘಗಳ ಪರಿಶ್ರಮದಿಂದ ಈ ಮೆಗಾ ಫುಡ್‌ಪಾರ್ಕ್ ಸ್ಥಾಪನೆ ಮಾಡಿದ್ದೇವೆ. ರೈತರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರ ಅಗತ್ಯತೆಗಳನ್ನು ಮತ್ತು ಪ್ರಾಥಮಿಕ ಸೌಲಭ್ಯಗಳನ್ನು ನೀಡಬೇಕಿದೆ. ರೈತರಿಗೆ ಉತ್ತಮ ಗೋದಾಮು ಮತ್ತು ಉತ್ತಮ ಮಾರುಕಟ್ಟೆ ಬೇಕಿದ್ದು, ನಾವು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ. ನಮ್ಮ ಸಂಗ್ರಹಣಾ ಸಾಮರ್ಥ್ಯ ಮತ್ತು ರೈತರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಆಹಾರ ಸಂಸ್ಕರಣೆ ಭಾರತಕ್ಕೆ ಹೊಸದಲ್ಲ
'ಭಾರತಕ್ಕೆ ಆಹಾರ ಸಂಸ್ಕರಣೆ ಹೊಸದೇನು ಅಲ್ಲ. ಪುರಾತನ ಕಾಲದಿಂದಲೇ ನಮ್ಮ ಪೂರ್ವಜರು ಆಹಾರ ಸಂಸ್ಕರಣ ಪದ್ದತಿಯನ್ನು ಶೋಧಿಸಿದ್ದರು. ಕಬ್ಬಿನ ರಸದಿಂದ ಬೆಲ್ಲವನ್ನು ತಯಾರಿಸುವ ಕಲೆ ಅವರಿಂದಲೇ ನಮಗೆ ಬಂದಿದ್ದು. ಮಾರುಕಟ್ಟೆಯಲ್ಲಿ ಟೊಮೋಟೋ ಮಾರಿದರೆ ಹೆಚ್ಚು ಲಾಭವಿಲ್ಲ. ಆ ಟೊಮೋಟೋವನ್ನು ಸಂಸ್ಕರಿಸಿ ಟೊಮೋಟೋ ಕೆಚಪ್ ಅನ್ನಾಗಿ ಬದಲಾಯಿಸಿದರೆ ಹೆಚ್ಚು ಲಾಭ ಗಳಿಸಬಹುದು. ಇಂತಹ ಆಲೋಚನೆಗಳತ್ತ ರೈತರು ಚಿಂತಿಸಬೇಕಿದೆ. ಈ ಮೆಗಾಫುಡ್ ಪಾರ್ಕ್ ರೈತರ ಬೆಳೆಗಳ ಮೌಲ್ಯವರ್ಧನೆಗೆ ಆದ್ಯತೆ ನೀಡುತ್ತದೆ'.

'ಒಂದು ಕಾಲದಲ್ಲಿ ಭಾರತ ಸಾಂಬಾರ ಪದಾರ್ಥಗಳು ವಿಶ್ವಾದ್ಯಂತ ಪ್ರಸಿದ್ಧಿಯಾಗಿದ್ದವು. ಆದರೆ ಈಗ ಭಾರತೀಯ ರೈತರು ಸರಿಯಾದ ಮಾರುಕಟ್ಟೆ ಇಲ್ಲದೆ ಮತ್ತು ತಮ್ಮ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ನರಳುವಂತಾಗಿದೆ. ಆಹಾರ ಸಂಸ್ಕರಣೆಯಿಂದ ರೈತನ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ. ಹಿಂದೊಮ್ಮೆ ನಾನು ಪೆಪ್ಸಿ ಮತ್ತು ಕೊಕ ಕೋಲಾ ಕಂಪನಿಗಳೊಂದಿಗೆ ಚರ್ಚೆ ಮಾಡುತ್ತಿದ್ದಾಗ, ಪೇಯಗಳಲ್ಲಿ ಶೇ.5ರಷ್ಟು ಹಣ್ಣಿನ ರಸವನ್ನು ಸೇರಿಸಲು ಸಾಧ್ಯವೇ ಎಂದು ಕೇಳಿದ್ದೆ. ಏಕೆಂದರೆ ಇಂದು ದೇಶದಲ್ಲಿ ಈ ಕಂಪೆನಿಗಳು ಸಾವಿರಾರು ಕೋಟಿ ರುಪಾಯಿಗಳ ವಹಿವಾಟು ನಡೆಸುತ್ತಿವೆ'.

'ಇವುಗಳಲ್ಲಿ ಷೇ.5ರಷ್ಟು ನೈಸರ್ಗಿಕ ಪೇಯಗಳನ್ನು ಮಿಶ್ರಣ ಮಾಡುವುದರಿಂದ ಅಥವಾ ಶೇ.5ರಷ್ಟು ನೈಸರ್ಗಿಕ ಪೇಯಗಳು ವ್ಯಾಪಾರವಾದರೆ ಅದರಿಂದ ರೈತನಿಗೆ ಎಷ್ಟು ಲಾಭವಾಗಬಹುದು ಎಂದು ನೀವೇ ಊಹಿಸಿಕೊಳ್ಳಿ. ಪೆಪ್ಸಿ ಮಾರಾಟವಾಗುವ ಪ್ರಮಾಣದ ಶೇ.5ರಷ್ಟು ಪ್ರಮಾಣದಲ್ಲಿ ನಮ್ಮ ರೈತನ ಹಣ್ಣು ಮತ್ತು ತರಕಾರಿ ವ್ಯಾಪಾರವಾದರೆ ಅವನು ಸಾಕಷ್ಟು ಲಾಭ ಗಳಿಸಬಹುದು. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ರೈತರ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುತ್ತದೆ' ಎಂದು ಮೋದಿ ಅಭಿಪ್ರಾಯಪಟ್ಟರು.

ಸಿದ್ದು ಹೇಳಿದ್ದು ನನಗೆ ಅರ್ಥವಾಯಿತು
ಇದಕ್ಕೂ ಮೊದಲು ಮಾತನಾಡಿದ್ದ ಸಿದ್ದರಾಮಯ್ಯ ಅವರು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮಾದರಿಯಲ್ಲಿಯೇ ಕರ್ನಾಟಕಕ್ಕೂ ಕೂಡ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನನಗೆ ಕನ್ನಡ ಬರುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಹೇಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಯಿತು.

ರಾಜ್ಯದ ಅವಶ್ಯಕತೆಗಳ ಬಗ್ಗೆ ಕೇಂದ್ರಸರ್ಕಾರ ತಿಳಿದಿರಬೇಕು. ರಾಜ್ಯಗಳ ಭಾವನೆಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳ ಬೆಳವಣಿಗೆಯಿಂದ ಮಾತ್ರ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಕೇಂದ್ರದ ಯೋಜನೆಗಳು ರಾಜ್ಯಗಳಲ್ಲಿ ಸಮರ್ಥವಾಗಿ ಜಾರಿಗೆ ಬರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ನಮಗೆ ವಿಶೇಷವಾದ ದಿನವಾಗಿದ್ದು, ವೈಜ್ಞಾನಿಕವಾಗಿ ನಾವು ಮಹತ್ತರ ಸಾಧನೆ ಮಾಡಿದ್ದೇವೆ. ನಮ್ಮ ಮೊದಲ ಪ್ರಯತ್ನದಲ್ಲೇ ಗುರಿ ಮುಟ್ಟಿದ್ದೇವೆ. ಮಂಗಳ ಗ್ರಹದ ಕಕ್ಷೆಯಲ್ಲಿ ನಮ್ಮ ನೌಕೆಯನ್ನು ಸ್ಥಾಪಸಿದ್ದೇವೆ. ಈ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ನೂತನ ಮೈಲುಗಲ್ಲು ಸ್ಥಾಪಿಸಿದೆ ಎಂದು ಹೇಳಿದರು.

ಇದಕ್ಕೂ ಮೊದಲು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಸುಮಾರು ಅರ್ಧಗಂಟೆಗಳ ಕಾಲ ಮಠದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

Watch Video here

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com